ಸಾರಾಂಶ
ಮಹೇಶ ಛಬ್ಬಿ ಗದಗ
ನಿರಂತರ ಮಳೆ, ಬೆಳೆ ಹಾನಿಯಿಂದ ಕಂಗಾಲಾದ ರೈತರಲ್ಲಿ ಅಷ್ಟಾಗಿ ಬೆಳಕಿನ ಹಬ್ಬದ ಸಂಭ್ರಮವಿಲ್ಲದಿದ್ದರೂ ಸಂಪ್ರದಾಯ ಹಬ್ಬದ ಆಚರಣೆ ಮಾಡುತ್ತಿದ್ದಾರೆ.ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಗದಗ ನಗರದ ಮುಖ್ಯ ಮಾರುಕಟ್ಟೆಯಾಗಿರುವ ಬ್ಯಾಂಕ್ ರಸ್ತೆ, ಸ್ಟೇಷನ್ ರಸ್ತೆ, ಟಾಂಗಾಕೂಟ, ನಾಲ್ವಾಡಗಲ್ಲಿ ಬಟ್ಟೆ ಅಂಗಡಿಗಳು, ಬಸವೇಶ್ವರ ವೃತ್ತಗಳಲ್ಲಿ ಹಾಗೂ ಬೆಟಗೇರಿ ಮಾರುಕಟ್ಟೆ ಭಾಗದಲ್ಲಿ ಹಬ್ಬದ ಖರೀದಿಗೆ ಜನಜಂಗುಳಿ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ನಿರತರಾಗಿದ್ದ ದೃಶ್ಯ ಕಂಡು ಬಂದಿತು.
ಮಹಾಲಕ್ಷ್ಮೀ ಪೂಜೆಗೆ ಬೇಕಾದ ಕಬ್ಬು, ಬಾಳೆದಿಂಡು, ಚೆಂಡು ಹೂಗಳು ರೈತರ ಹೊಲಗಳಿಂದ ನೇರವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಾರುಕಟ್ಟೆ ಚೆಂಡು ಹೂ, ಗುಲಾಬಿ, ಮಲ್ಲಿಗೆ, ಸೇವಂತಿಗೆ, ವಿವಿಧ ಬಗೆಯ ಹಣ್ಣುಗಳು, ಪ್ಲಾಸ್ಟಿಕ್ ಹೂಗಳು, ಅಲಂಕಾರಿಕ ವಸ್ತುಗಳಿಂದ ತುಂಬಿದ್ದು, ಎಲ್ಲೆಡೆ ಖರೀದಿ ಜೋರಾಗಿದೆ. ಬಟ್ಟೆ ಅಂಗಡಿಗಳಂತೂ ತುಂಬಿ ತುಳುಕುತ್ತಿವೆ. ದೀಪದ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ತರಹದ ಹಣತೆಗಳು ಮಾರುಕಟ್ಟೆಗೆ ಬಂದಿದ್ದು, ಇದರೊಟ್ಟಿಗೆ ವಿದ್ಯುತ್ ಚಾಲಿಕ ಪ್ಲಾಸ್ಟಿಕ್ ಹಣತೆಗಳೂ ಲಗ್ಗೆ ಇಟ್ಟಿವೆ. ಆದರೆ ಜನರು ಮಾತ್ರ ಮಣ್ಣಿನ ಹಣತೆಗಳಿಗೆ ಹೆಚ್ಚು ಮೊರೆ ಹೋಗುತ್ತಿರುವುದು ವಿಶೇಷವಾಗಿತ್ತು.ಸಾದಾ ಹಣತೆಗೆ ₹10 ಗಳಿಂದ ಪ್ರಾರಂಭವಾದರೆ, ವಿವಿಧ ವಿನ್ಯಾಸ ಹೊಂದಿರುವ ಹಾಗೂ ಆಕರ್ಷಕ ಹಣತೆಗಳು ₹100ರಿಂದ ₹ 150ಗೆ 4ರಂತೆ ಮಾರಾಟವಾಗುತ್ತಿವೆ. ಇನ್ನು ಪೂಜೆಗೆ ಮುಖ್ಯವಾಗಿ ಬೇಕಾಗುವ 5 ಬಗೆಯ ಹಣ್ಣುಗಳು ₹100ರಿಂದ 150-200ರ ವರೆಗೆ ಮಾರಾಟವಾಗುತ್ತಿದ್ದರೆ, ಸೇಬು ₹ 120-150 ಕೆಜಿ, ಮೋಸಂಬಿ ₹100-120 ಕೆಜಿ ದಾಳಿಂಬೆ ₹ 70-80 ಕೆಜಿ, ಸೀತಾಫಲ ₹100-120 ಕೆಜಿ, ಪೇರಲೆ ₹ 50-60 ಕೆಜಿ, ಚೆಂಡು ಹೂವು ₹ 100 ಕೆಜಿ, ಸೇವಂತಿಗೆ ₹ 150-200 ಕೆಜಿಯಂತೆ ಮಾರಾಟವಾಗುತ್ತಿದೆ. ಜೋಡಿ ಕಬ್ಬಿಗೆ ₹ 50-60, ಬಾಳೆದಿಂಡು ಜೋಡಿಗೆ ₹ 60-80ವರೆಗೆ ಮಾರಾಟವಾಗುತ್ತಿದೆ.
ವಿವಿಧ ವಿನ್ಯಾಸದ ಆಕಾಶ ಬುಟ್ಟಿ:ನಗರದ ಬ್ಯಾಂಕ್ ರಸ್ತೆ, ಟಾಂಗಾಕೂಟ, ಸ್ಟೇಷನ್ ರಸ್ತೆಗಳಲ್ಲಿ ಮಾರಾಟಕ್ಕಿಟ್ಟಿರುವ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಎಲ್ಲರನ್ನು ಆಕರ್ಷಿಸುತ್ತಿದ್ದು, ಸಾಧಾರಣ ಆಕಾಶ ಬುಟ್ಟಿಗಳು 50ರಿಂದ 300ರ ವರೆಗೆ ಮಾರಾಟವಾದರೆ, ವಿವಿಧ ವಿನ್ಯಾಸ ಹೊಂದಿದ ದೊಡ್ಡ ಆಕಾಶ ಬುಟ್ಟಿಗಳು ₹ 500ರಿಂದ ₹ 1000ರ ವರೆಗೆ ಮಾರಾಟವಾಗುತ್ತಿವೆ. ಖರೀದಿ ಮಾಡಿದ ಆಕಾಶ ಬುಟ್ಟಿಗಳನ್ನು ತಮ್ಮ-ತಮ್ಮ ಮನೆ ಎದುರು ಹಾಕಿ, ಬಣ್ಣ-ಬಣ್ಣದ ದೀಪಗಳಿಂದ ಅಲಂಕರಿಸಿ ಮನೆ-ಮನ ಬೆಳಗಿಸಲು ಜನರು ಸಿದ್ಧತೆ ನಡೆಸಿದರು.
ಸಂಕಷ್ಟದಲ್ಲಿ ಹೂ ಬೆಳೆದ ರೈತರು: ಬೆಳಕಿನ ಹಬ್ಬದ ಪ್ರಮುಖ ಆಕರ್ಷಣೆಯೇ ಬಗೆ ಬಗೆಯ ಹೂಗಳು. ಆದರೆ ಹೂ ಬೆಳೆಗಾರರಿಗೆ ಈ ಬಾರಿಯ ದೀಪಾವಳಿ ಅಷ್ಟಾಗಿ ಖುಷಿ ತಂದಿಲ್ಲ. ಕಳೆದೊಂದು ವಾರ ಸುರಿದ ಅಕಾಲಿಕ ಮಳೆಯಿಂದ ಹೂ ಬೆಳೆಗೆ ಹಾನಿಯಾಗಿದ್ದು, ಪ್ರತಿ ವರ್ಷ ಹಬ್ಬದಂದು ಉತ್ತಮ ಲಾಭ ಗಳಿಸುತ್ತಿದ್ದ ಬೆಳೆಗಾರರಿಗೆ ನಿರೀಕ್ಷಿತ ಲಾಭ ದೊರೆತಿಲ್ಲ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಹೂ ವ್ಯಾಪಾರಿಗಳಿಗಾಗುತ್ತಿರುವ ಲಾಭವು ಬೆಳೆಗಾರರಿಗೆ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ.