ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಹೋರಾಟದ ಹಾದಿ ಹಿಡಿಯಲು ರೈತರನ್ನು ಸಂಘಟಿಸಲು ಸಂಪೂರ್ಣ ಸಾವಯವ ಕೃಷಿಕರ ಸಂಘ ಮುಂದಾಗಿದೆ ಎಂದು ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.ಪಟ್ಟಣದ ಸಂಪೂರ್ಣ ಸಾವಯವ ಕೃಷಿಕರ ಸಂಘದ ಕಚೇರಿಯಲ್ಲಿ ಗುರುವಾರ ಅವರು ಮಾತನಾಡಿ, ಕೆಆರ್ ಎಸ್ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರಿನ 6ನೇ ಹಂತದ ಯೋಜನೆಯು ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ರೈತರ ಪಾಲಿಗೆ ಮರಣಶಾಸನವಾಗಲಿದೆ ಎಂದರು.
ಈಗಾಗಲೇ 5 ಹಂತಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲಾಗಿದೆ. ಇದರಿಂದ ನಮ್ಮ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, 6ನೇ ಹಂತ ಯೋಜನೆಯಲ್ಲಿ ನೀರು ಜಲಾಶಯಕ್ಕೆ ಬರುವ ಮುನ್ನವೇ ಕೆ.ಆರ್.ನಗರದ ಕಟ್ಟೇಪುರದಿಂದ ತೆಗೆದುಕೊಂಡು ಹೋಗಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.ಜಲಾಶಯದ ಕೊನೆ ಭಾಗವಾಗಿರುವ ಮಳವಳ್ಳಿ ಮತ್ತು ಮದ್ದೂರು ತಾಲೂಕಿಗೆ ಈಗಾಗಲೇ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಇದರ ನಡುವೆ ಈ ಯೋಜನೆಯಲ್ಲಿ ನೀರನ್ನು ಜಲಾಶಯಕ್ಕೆ ಬರುವ ಮುನ್ನವೇ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ಜಿಲ್ಲೆಯ ರೈತರು ಭತ್ತ ಮತ್ತು ಕಬ್ಬು ಬೆಳೆಯಲು ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಕೆಆರ್ ಎಸ್ ಜಲಾಶಯ ನಿರ್ಮಿಸಿದ್ದರು. ಹೀಗಾಗಿ ಆ.31ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತರಿಗೆ ಅರಿವು ಮೂಡಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನಾಧಾರಿಕ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.6ನೇ ಹಂತದ ಯೋಜನೆಗೆ ನಮ್ಮ ವಿರೋಧವಿಲ್ಲ, ಆದರೆ, ಜಲಾಶಯದಿಂದ ನೇರವಾಗಿ ತೆಗೆದುಕೊಂಡು ಹೋಗಬಾರದು. ಇದರಿಂದ 6939 ಕೋಟಿ ರು. ವೆಚ್ಚವಾಗಲಿದೆ. ಮತ್ತೊಂದೆಡೆ ಮದ್ದೂರು ಮತ್ತು ಮಳವಳ್ಳಿಗೆ ನೀರಿನ ಕೊರತೆ ಕಾಡಲಿದೆ. ಎರಡು ತಾಲೂಕಿನ ರೈತರು ಜಾಗೃತಿಗೊಂಡು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದರು.
ಈ ನಾಟಕದ ಮೂಲಕ ರೈತರನ್ನು ಸಂಘಟಿಸಿ ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದೇವೆ. ನಮ್ಮ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಎಲ್ಲರ ಸಹಕಾರ ಕೋರಲಾಗುವುದು ಎಂದರು.ಆ.31ರ ಭಾನುವಾರ ಸಂಜೆ 5 ಗಂಟೆಗೆ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ. ತಾಲೂಕಿನ ಎಲ್ಲ ರೈತರು ಪಕ್ಷಾತೀತವಾಗಿ ಭಾಗಿಯಾಗುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಸಂಕಷ್ಟವನ್ನು ದೂರ ಮಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಸಂಘದ ಚಿಕ್ಕಣ್ಣ, ಎಚ್.ವಿ.ವೀರಭದ್ರು, ಶಿವಕುಮಾರ್, ಮಹದೇವಯ್ಯ ಹಾಜರಿದ್ದರು.----------
28ಕೆಎಂಎನ್ ಡಿ11ಸುದ್ಧಿಗೋಷ್ಠಿಯಲ್ಲಿ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿದರು.