ತುಳುನಾಡಿನ ಮೌಖಿಕ ಸಾಹಿತ್ಯವು ಇತಿಹಾಸದ ಕೊಂಡಿ: ತುಕರಾಮ ಪೂಜಾರಿ

| Published : Nov 01 2025, 03:00 AM IST

ತುಳುನಾಡಿನ ಮೌಖಿಕ ಸಾಹಿತ್ಯವು ಇತಿಹಾಸದ ಕೊಂಡಿ: ತುಕರಾಮ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತುಳು ಸಾಹಿತ್ಯ ಅಕಾಡೆಮಿ, ಕೂಳೂರಿನ ಯೆನೆಪೋಯ ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಹಾಗೂ ಸಾಹಿತ್ಯ ಸಂಘದ ಸಹಯೋಗದಲ್ಲಿ ‘ತುಳು ಸಾಹಿತ್ಯ ಸಾಂಸ್ಕೃತಿಕ ಬದುಕು’ ವಿಚಾರ ಕೂಟ ನೆರವೇರಿತು.

ಮಂಗಳೂರು: ತುಳುನಾಡಿನ ಮೌಖಿಕ ಸಾಹಿತ್ಯಿಕ ರೂಪಕಗಳನ್ನು ಉಲ್ಲೇಖ ಮಾಡದೆ ತುಳುನಾಡಿನ ಇತಿಹಾಸ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕರಾಮ ಪೂಜಾರಿ ಹೇಳಿದ್ದಾರೆ.ತುಳು ಸಾಹಿತ್ಯ ಅಕಾಡೆಮಿ, ಕೂಳೂರಿನ ಯೆನೆಪೋಯ ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಹಾಗೂ ಸಾಹಿತ್ಯ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ‘ತುಳು ಸಾಹಿತ್ಯ ಸಾಂಸ್ಕೃತಿಕ ಬದುಕು’ ವಿಚಾರ ಕೂಟದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ತುಳು ಭಾಷೆಯಲ್ಲಿ ಇರುವ ಸಂಧಿ, ಪಾಡ್ದನ, ಉರಲ್, ಎದುರು ಕಥೆಗಳು ಅಗಾಧವಾದ ಜ್ಞಾನ ಭಂಡಾರದ ಪ್ರತೀಕಗಳಾಗಿವೆ, ಈ ಮೌಖಿಕ ಸಾಹಿತ್ಯಗಳಲ್ಲಿ ಅಪಾರ ಮಾಹಿತಿಯ ಕಣಜವೇ ಇದೆ. ಈ ಮಾಹಿತಿಯ ಮೂಲಕ ತುಳುನಾಡಿನ ಇತಿಹಾಸ ಹಾಗೂ ಪರಂಪರೆಯನ್ನು ಅರಿತುಕೊಳ್ಳಲು ಸಾಧ್ಯವಾಗುವುದು ಎಂದು ಡಾ.ತುಕರಾಮ ಪೂಜಾರಿ ಹೇಳಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ಕಾಲೇಜುಗಳಲ್ಲಿ ತುಳು ಭಾಷೆಯ ಕಾರ್ಯಕ್ರಮ ಆಯೋಜಿಸುವ ಮೂಲಕ ಹೊಸ ತಲೆಮಾರಿಗೆ ತುಳುವಿನ ಬಗ್ಗೆ ಅಭಿರುಚಿ, ಅಭಿಮಾನ ಮೂಡಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ರಾಜ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಸಾದ್ ಕೆ., ಉಪಪ್ರಿನ್ಸಿಪಾಲ್‌ ಶರೀನಾ ಪಿ., ನಾರಾಯಣ ಸುಕುಮಾರ್ ಎ., ಭಾಷಾಶಾಸ್ತ್ರ ವಿಭಾಗ ಮುಖ್ಯಸ್ಥೆ ಶಾಲಿನಿ ಸಿಕ್ವೇರಾ, ಮಾನವಿಕ ವಿಭಾಗದ ಡೀನ್ ಪ್ರೊ. ವಸಂತ ಕುಮಾರ್, ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ ಇದ್ದರು.

ಯೆನೆಪೋಯ ಕಾಲೇಜಿನ ಸಾಹಿತ್ಯ ಸಂಘ ಸಂಯೋಜಕ ಡಾ.ದಿನಕರ ಪಚ್ಚನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾ ನಿರೂಪಿಸಿದರು. ಡಾ.ರತ್ನಾಕರ ಶೆಟ್ಟಿ ವಂದಿಸಿದರು.