ಸಾವಯವ ಸಮಗ್ರ ಅರಣ್ಯಾಧಾರಿತ ಕೃಷಿ : ಜಮೀನಿನಲ್ಲಿಯೇ ಮನೆ ಕಟ್ಟಿ ವಾಸದ ಖುಷಿ..!

| N/A | Published : Jul 03 2025, 11:52 PM IST / Updated: Jul 04 2025, 12:37 PM IST

ಸಾವಯವ ಸಮಗ್ರ ಅರಣ್ಯಾಧಾರಿತ ಕೃಷಿ : ಜಮೀನಿನಲ್ಲಿಯೇ ಮನೆ ಕಟ್ಟಿ ವಾಸದ ಖುಷಿ..!
Share this Article
  • FB
  • TW
  • Linkdin
  • Email

ಸಾರಾಂಶ

ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಬಳಿಯ ಸಾಲೆಕೊಪ್ಪಲಿನಲ್ಲಿ ಅಕ್ಷಯ್‌ ಗೌಡ ಸಾವಯವ, ಸಮಗ್ರ ಅರಣ್ಯಾಧಾರಿತ ಕೃಷಿಕೈಗೊಂಡಿದ್ದು, ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಾ ಖುಷಿ ಪಡುತ್ತಿದ್ದಾರೆ.  

ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಬಳಿಯ ಸಾಲೆಕೊಪ್ಪಲಿನಲ್ಲಿ ಅಕ್ಷಯ್‌ ಗೌಡ ಸಾವಯವ, ಸಮಗ್ರ ಅರಣ್ಯಾಧಾರಿತ ಕೃಷಿಕೈಗೊಂಡಿದ್ದು, ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಾ ಖುಷಿ ಪಡುತ್ತಿದ್ದಾರೆ.

ಮೂಲತಃ ಕುಶಾಲನಗರದವರಾದ ಅಕ್ಷಯ್‌ ಇಶಾ ಫೌಂಡೇಷನ್‌ ಜೊತೆ ಮರ-ಗಿಡ ಬೆಳೆಸುವಲ್ಲಿ ರೈತರನ್ನು ಉತ್ತೇಜಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸುದ್ದಿ ಸಂಗ್ರಾಹಕರಾಗಿಯೂ ಕೆಲಸ ಮಾಡುತ್ತಾರೆ. ಅವರಿಗೆ ಸಾಲೆಕೊಪ್ಪಲಿನಲ್ಲಿ ನಾಲ್ಕು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಅವರು ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಂಡು, ಅಣ್ಣ, ಅತ್ತಿಗೆ, ಪತ್ನಿ ಹಾಗೂ ಮಗು ಸೇರಿದಂತೆ ಕುಟುಂಬದ ಜೊತೆ ವಾಸವಾಗಿದ್ದಾರೆ.

ಐದು ವರ್ಷಗಳಿಂದ ವ್ಯವಸಾಯನಿರತರಾಗಿದ್ದಾರೆ. ಈಗಾಗಲೇ ಎರಡು ಬಾರಿ ತಲಾ 50 ಟನ್‌ ಕಬ್ಬು ಬೆಳೆದು, ತಲಾ 1,50 ಲಕ್ಷ ರು. ಆದಾಯ ಗಳಿಸಿದ್ದಾರೆ. ಕಬ್ಬನ್ನು ಮೊದಲು ಬಾರಿ ಮದ್ದೂರಿಗೂ ಎರಡನೇ ಬಾರಿ ಚುಂಚನಕಟ್ಟೆಗೂ ಪೂರೈಸಿದ್ದಾರೆ. ಅರ್ಧ ಎಕರೆಯಲ್ಲಿ ಮನೆಗೆ ಬೇಕಾದ ಭತ್ತ ಬೆಳೆದುಕೊಳ್ಳುತ್ತಾರೆ. 150 ತೆಂಗಿನ ಮರಗಳಿವೆ. 30 ಬಾಳೆ ಗಿಡಗಳಿವೆ. ಆಗಾಗ್ಗೆ ಏಲಕ್ಕಿ ಬಾಳೆ ಬೆಳೆದು, ಮಾರಾಟ ಮಾಡುತ್ತಾರೆ.

ಉಳಿದಂತೆ ಅರಣ್ಯ ಕೃಷಿಗೆ ಒತ್ತು ನೀಡಿರುವುದರಿಂದ ಮಹಾಗನಿ- 500, ಹೆಬ್ಬೇವು- 500, ತೇಗ- 50, ಸಿಲ್ವರ್‌- 250, ನೇರಳೆ, ಹಲಸು, ಸೀಬೆ, ಬೆಟ್ಟದನೆಲ್ಲಿ, ಕಿತ್ತಳೆ, ದಾಳಿಂಬೆ, ಮಾವು ತಲಾ 5-10, ರಕ್ತಚಂದನ-50, ನಿಂಬೆ- 100, ಶ್ರೀಗಂಧ- 100 ಮರಗಳಿವೆ.

ಉಪ ಕಸುಬಾಗಿ ಕುರಿ ಸಾಕಾಣಿಕೆ ಮಾಡುತ್ತಾರೆ. 8 ಕುರಿಗಳಿದ್ದು, ಆಗಾಗ್ಗೆ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಒಂದು ಹಳ್ಳಿಕಾರ್‌ ತಳಿಯ ಹಸುವಿದ್ದು, ಹಾಲು ಮನೆ ಬಳಕೆಗೆ ಆಗುತ್ತದೆ. ಸಾವಯವ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದು, ಜಮೀನಿಗೆ ಕುರಿ ಹಾಗೂ ಹಸು ಗೊಬ್ಬರ ಹಾಕುತ್ತಾರೆ.

ಚಿರತೆಗಳ ಹಾವಳಿ ಇರುವುದರಿಂದ ಕೋಳಿ ಸಾಕಿಲ್ಲ. ಬದಲಿಗೆ ಜರ್ಮನ ಶೆಫರ್ಡ್, ಮುಧೋಳ್‌ ನಾಯಿಗಳನ್ನು ಸಾಕಿದ್ದಾರೆ.

ಸಂಪರ್ಕ ವಿಳಾಸ

ಅಕ್ಷಯ್‌ ಗೌಡ ಬಿನ್‌ ವಿಜಯೇಂದ್ರ

ಸಾಲೆಕೊಪ್ಪಲು

ಚುಂಚನಕಟ್ಟೆ ಹೋಬಳಿ,

ಸಾಲಿಗ್ರಾಮ ತಾಲೂಕು

ಮೈಸೂರು ಜಿಲ್ಲೆ

ಮೊ.98804 59854

ಆರೋಗ್ಯ ದೃಷ್ಟಿಯಿಂದ ಕೃಷಿ ಮುಖ್ಯವಾದುದು. ನಾವೇ ಸ್ವತಃ ಕೃಷಿ ಮಾಡಿದರೆ ನಮಗೆ ಬೇಕಾದ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳಬಹುದು.

- ಅಕ್ಷಯ್‌ ಗೌಡ, ಸಾಲೆಕೊಪ್ಪಲುಪಕ್ಷಿಗಳಿಗಾಗಿ ಹಣ್ಣಿನ ಗಿಡಗಳು

ನಾಲ್ಕು ಕುಂಟೆ ಜಮೀನಿನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ನವಿಲು, ಕಿಂಗ್‌ ಪಿಷರ್‌ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಜಮೀನಿಗ ಬಂದು, ಹಣ್ಣು ತಿನ್ನುತ್ತವೆ.

Read more Articles on