ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಮಾನವ ಸಂಘ ಜೀವಿಯಾಗಿರುವುದರಿಂದ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಆಶೋತ್ತರಗಳಿಗೆ ಸ್ಪಂದಿಸಬೇಕು. ಸಂಘಟನೆಗಳು ಪಕ್ಷಾತೀತ, ಜಾತ್ಯತೀತ ಹಾಗೂ ಪಾರದರ್ಶಕವಾಗಿರಬೇಕು ಎಂದು ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವಾರ್ಷಿಕೋತ್ಸವ, ಸೇನೆಯ ಗ್ರಾಮ ಘಟಕದ ಉದ್ಘಾಟನೆ, ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ಒಂದು ಸೇವಾವಕಾಶ, ದೊಡ್ಡಸ್ತಿಕೆಯಲ್ಲ. ಅದರ ದುರುಪಯೋಗ ಸಲ್ಲದು. ಸಂಘಟನೆಗಳು ಸಮಾಜಕ್ಕೆ ಧ್ವನಿಯಾಗುವುದರ ಜೊತೆಗೆ ಸೇವಾ ಕಾರ್ಯಗಳಿಗೆ ತೊಡಗಿಸಿಕೊಳ್ಳಬೇಕು ಎಂದು ಅವರು ನುಡಿದರು.ಸೇನೆಯ ಗ್ರಾಮ ಘಟಕ ಉದ್ಘಾಟಿಸಿದ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ವ್ಯಕ್ತಿ ಶಕುನಿಯಾದರೆ ಸಮಾಜ ಕುರುಕ್ಷೇತ್ರವಾಗುತ್ತದೆ. ವ್ಯಕ್ತಿ ವೀರಭದ್ರನಾದರೆ ಸಮಾಜ ಸುಭದ್ರವಾಗುತ್ತದೆ. ಸುದ್ದಿಗಾಗಿ ಸೇವೆ ಮಾಡಬೇಡಿ, ಸೇವೆ ಮಾಡಿ ಸುದ್ದಿಯಾಗಬೇಡಿ, ಸದ್ದಿಲ್ಲದೇ ಸೇವೆ ಮಾಡಿ. ರೈತನೊಬ್ಬ ಕೃಷಿ ಬಿಟ್ಟು ಹಿಂದೆ ಸರಿದರೆ ಆತಂಕ ಪಡಬೇಕೆ ವಿನಃ ಒಬ್ಬ ಕ್ರಿಕೆಟಿಗ ವಿದಾಯ ನೀಡಿದಾಗ ಅಲ್ಲ. ರೈತ ಸಾಲ ಮಾಡಿ ಸೋತು ಹಿಂದೆ ಸರಿಯುತ್ತಾನೆ. ಆದರೆ ಕ್ರಿಕೆಟಿಗ ಬೇಕಾದಷ್ಟು ಸಂಪಾದಿಸಿರುತ್ತಾನೆ. ಮನರಂಜನೆ ಜೀವನದ ಒಂದು ಭಾಗ ಅಷ್ಟೇ. ಆದರೆ ಆಹಾರ ಜೀವನದ ಅವಿಭಾಜ್ಯ ಅಂಗ. ಸಮಾಜದ ಪ್ರಗತಿಗಾಗಿ ಸಂಘಟನೆ ಇರಬೇಕೆ ವಿನಃ ತಮ್ಮ ಸ್ವಂತ ಸ್ವಾರ್ಥ ಜೀವನಕ್ಕಾಗಿ ಅಲ್ಲ ಎಂದು ಹೇಳಿದರು.
ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ, ರೈತ ಸಂಘದ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಅಕ್ಕಿ, ಜಿಲ್ಲಾಧ್ಯಕ್ಷೆ ಸುಮಾ ಪುರದ ಹಾಗೂ ರಾಜ್ಯ ಕಾರ್ಯಾಧ್ಯಕ್ಷೆ ಸುವರ್ಣಮ್ಮ ಮಾತನಾಡಿ, ಕೃಷಿಕ, ಸೈನಿಕ, ಕಾರ್ಮಿಕ ಹಾಗೂ ಶಿಕ್ಷಕ ದೇಶದ ಬೆನ್ನೆಲುಬು. ನಾಡು, ನುಡಿ, ಜಲ, ಭಾಷೆಗಾಗಿ ನಿರಂತರ ಹೋರಾಟ ಮಾಡುತ್ತೇವೆ. ರೈತರ ಬಗ್ಗೆ ರಾಜಕಾರಣಿಗಳು ಹಗುರವಾಗಿ ಮಾತನಾಡಬಾರದು ಎಂದರು.ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಸಾವಿತ್ರಿಬಾಯಿ ಫುಲೆ ಶೋಷಿತರ ವಿಮೋಚನೆಯ ದಾರಿಗಳ ಹುಡುಕುತ್ತ ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಪ್ರತಿಪಾದಿಸಿದವರು ಎಂದರು.
ನವೀನಗೌಡ ಮರಗಿ, ಹರೀಶ ಇಂಗಳಗೊಂದಿ, ಮುರ್ತುಜಾ ಬದಾಮಿ, ಸದ್ದಾಂ ಹುಸೇನ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ರೇಖಾ ತೋಟಗೇರ, ಕಾನೂನು ಸಲಹೆಗಾರ ಪ್ರಕಾಶ ಪಟ್ಟಣಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಹೊಂಬರಡಿ ಇತರರು ವೇದಿಕೆಯಲ್ಲಿದ್ದರು.ಡಾ. ಸತೀಶ ಈಳಿಗೇರ ಸ್ವಾಗತಿಸಿದರು. ಉಪನ್ಯಾಸಕ ಗುಡ್ಡಪ್ಪ ಚಟ್ರಮ್ಮನವರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕ್ತಾರ ಶಿವಪ್ಪ ಬಳಲಕೊಪ್ಪ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))