ಸಾರಾಂಶ
ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೆಂಗಳೂರು ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಚ್ 21 ಮತ್ತು 22ರಂದು ರಾಮನಗರದ ಕೆಂಪೇಗೌಡ ಸರ್ಕಲ್‌ನಿಂದ ಪಾದಯಾತ್ರೆ ಆರಂಭವಾಗಲಿದ್ದು ಎರಡು ದಿನಗಳ ನಡೆಯಲಿದ್ದು, ಬೆಂಗಳೂರಿನ ವಿಧಾನಸೌಧದ ಬಳಿಮುಕ್ತಾಯವಾಗಲಿದೆ ಎಂದರು.ಮೇಕದಾಟು ಯೋಜನೆಗೆ ಆಗ್ರಹಿಸಿ ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಂದಿನ ಪಾದಯಾತ್ರೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷವಾಗುತ್ತಿದೆ. ಆದರೂ, ರಾಜ್ಯದ ನಾಯಕರು ಮೇಕೆದಾಟು ಯೋಜನೆ ಜಾರಿ ಸಂಬಂಧ ಈ ತನಕ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಅತ್ಮೀಯ ಬಳಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಣಿಸಿಕೊಂಡಿದ್ದಾರೆ. ಅವರ ಮನವೊಲಿಸಿ ಮೇಕೆದಾಟು ಯೋಜನೆ ಜಾರಿಗೆ ಮನವೊಲಿಸಬೇಕು ಎಂದು ಆಗ್ರಹಿಸಿದರು.
ಯೋಜನೆ ಜಾರಿ ಸಂಬಂಧ ರಾಜ್ಯ ಸಂಸದರಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಮಂಜುನಾಥ್ ಅವರು ಕೇಂದ್ರ ಸರ್ಕಾರದಿಂದ ಅನುಮತಿ ದೊರಕುವಂತೆ ಒತ್ತಡ ಹೇರಬೇಕು. ಬೆಂಗಳೂರಿನಲ್ಲಿ ತೆಲುಗು, ಮರಾಠಿ, ತಮಿಳು ಸೇರಿದಂತೆ ಎಲ್ಲಾ ಭಾಷಿಕರು ಜೀವನ ಸಾಗಿಸುತ್ತಿದ್ದಾರೆ. ರಾಜಧಾನಿಯ ಜನಸಂಖ್ಯೆ ಹೆಚ್ಚಾಗುತ್ತಿದ್ದು ಇದರ ಅನುಗುಣಕ್ಕೆ ನೀರು ಒದಗಿಸಬೇಕಿದೆ ಎಂದು ಹೇಳಿದರು
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕಾಗಿ ಐಟಿಬಿಟಿ ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರ ನೇಮಕ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಮರಾಠಿಗರು ಸೌಹಾರ್ದಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಎಂಇಎಸ್ ಹಾಗೂ ಶಿವಸೇನೆಯಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಪ್ರವೀಣ್ ಶೆಟ್ಟಿ ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎಂಎನ್ಆರ್ ರಾಜು ಮಾತನಾಡಿ, ಮಾರ್ಚ್ 21ರಂದು ರಾಮನಗರ ಕೆಂಪೇಗೌಡ ಸರ್ಕಲ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಸಂಘಟನೆಯ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಹೇಳಿದರು.
ಮೇಕೆದಾಟುಯೋಜನೆ ಜಾರಿಯಿಂದ ಬಯಲು ಸೀಮೆಯ ಜನತೆಗೆ ಕುಡಿಯುವ ನೀರು ಲಭಿಸಲಿದೆ. ರಾಜ್ಯ ಸರ್ಕಾರ ಆದಷ್ಟು ಬೇಗೆ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರಾಜ್ಯ ಉಪಾಧ್ಯಕ್ಷ ಶಿವರಾಜ ಗೌಡ, ಮುಖಂಡರಾದ ಮಂಜೇಶ್ ಗೌಡ, ಜಗದೀಶ್ ಗೌಡ, ಆರ್ ಬಿ ಎಲ್ ಲೋಕೇಶ್, ನಾಗರಾಜು, ಪ್ರದೀಪ್ ಗೌಡ, ಹರೀಶ್ ಮತ್ತು ಮಹೇಶ್ ಗೌಡ, ವಿನೋದ್ ರಾಜ್, ಕಾರ್ತಿಕ್, ಮಹಾಲಿಂಗ, ಸಾಗರ ಮತ್ತು ಕಿರಣ್, ವಿನೋದ್, ಮಂಜುನಾಥ್ ದಬ್ಬಗುಳಿ, ಚೇತನ್, ಸಿದ್ ಮಾರೇಗೌಡ, ಪ್ರಸನ್ನ ಕುಮಾರ್, ಮೋಹನ್ ಕುಮಾರ್, ಶಶಿಕುಮಾರ್ ಸೇರಿದಂತೆ ಹಲವರು ಇದ್ದರು.