ಬಸವ ಜಯಂತಿಯಂದು ಬಸವ ತತ್ವವನ್ನು ಎಲ್ಲೆಡೆ ಸಾರಲು 12ನೇ ಶತಮಾನದ ಸರ್ವಧರ್ಮ ಸಂಸತ್ತು

| N/A | Published : Apr 01 2025, 12:46 AM IST / Updated: Apr 01 2025, 09:55 AM IST

Shivaraj Thangadagi
ಬಸವ ಜಯಂತಿಯಂದು ಬಸವ ತತ್ವವನ್ನು ಎಲ್ಲೆಡೆ ಸಾರಲು 12ನೇ ಶತಮಾನದ ಸರ್ವಧರ್ಮ ಸಂಸತ್ತು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಈಗಾಗಲೇ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದೆ. ಇದೀಗ ಬಸವ ಜಯಂತಿಯಂದು ಬಸವ ತತ್ವವನ್ನು ಎಲ್ಲೆಡೆ ಸಾರಲು ಹಾಗೂ 12ನೇ ಶತಮಾನದ ಸರ್ವಧರ್ಮ ಸಂಸತ್ತನ್ನು ಮರುಸೃಷ್ಟಿಸಲು ಸರ್ಕಾರ ಯೋಜನೆ ರೂಪಿಸಿದೆ.

ಗಿರೀಶ್‌ ಗರಗ

 ಬೆಂಗಳೂರು :  ರಾಜ್ಯ ಸರ್ಕಾರ ಈಗಾಗಲೇ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದೆ. ಇದೀಗ ಬಸವ ಜಯಂತಿಯಂದು ಬಸವ ತತ್ವವನ್ನು ಎಲ್ಲೆಡೆ ಸಾರಲು ಹಾಗೂ 12ನೇ ಶತಮಾನದ ಸರ್ವಧರ್ಮ ಸಂಸತ್ತನ್ನು ಮರುಸೃಷ್ಟಿಸಲು ಸರ್ಕಾರ ಯೋಜನೆ ರೂಪಿಸಿದೆ.

ಬಸವಣ್ಣ ಅವರು 12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದರು. ಈ ಕ್ರಾಂತಿಕಾರಕ, ಸಮಾಜ ಸುಧಾರಕ ನಡೆ ಹಾಗೂ ವಚನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2024ರ ಜನವರಿಯಲ್ಲಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದೆ. ಅದರ ಜತೆಗೆ ಬಸವ ತತ್ವ, ವಚನಗಳು ಹಾಗೂ 12ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅವರು ತಂದ ಸುಧಾರಣೆಗಳ ಕುರಿತು ಜನರಿಗೆ ತಿಳಿಸುವುದು ಹಾಗೂ ಧರ್ಮಗಳ ನಡುವಿನ ಭೇದವನ್ನು ತೊಡೆದು ಹಾಕುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಏ.30-31ರಂದು ಸರ್ವಧರ್ಮ ಸಂಸತ್ತನ್ನು ಸೃಷ್ಟಿಸಲು ಮುಂದಾಗಿದೆ. ಅದಕ್ಕಾಗಿ ಅಗತ್ಯವಿರುವ ಕ್ರಮ ಕೈಗೊಳ್ಳಲು ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಆಚರಣಾ ಸಮಿತಿಯನ್ನೂ ರಚಿಸಲಾಗಿದೆ.

ಕೂಡಲ ಸಂಗಮದಲ್ಲಿ ಸರ್ವಧರ್ಮ ಸಂಸತ್ತು:

ಏ.30ರ ಬಸವ ಜಯಂತಿಯನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಬಸವಣ್ಣ ಅವರ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಸರ್ವಧರ್ಮ ಸಂಸತ್ತನ್ನು ಮರುಸೃಷ್ಟಿಸಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಏ.30 ಮತ್ತು 31ರಂದು ಕೂಡಲ ಸಂಗಮದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖವಾಗಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌, ಬೌದ್ಧ ಮತ್ತು ಜೈನ ಧರ್ಮಗಳ ಧರ್ಮ ಗುರುಗಳನ್ನು ಆಹ್ವಾನಿಸಿ, ಅವರ ಮೂಲಕ ಸರ್ವಧರ್ಮ ಸಂಸತ್ತನ್ನು ನಡೆಸಲಾಗುತ್ತದೆ. ಅವರ ಜತೆಗೆ ವಿವಿಧ ಧರ್ಮಗಳ ವಿಚಾರವಾದಿಗಳು, ಸಾಹಿತಿಗಳು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಧರ್ಮಗಳ ನಡುವಿನ ತಿಕ್ಕಾಟದ ವಿರುದ್ಧ ಕಾರ್ಯಕ್ರಮ:

ಸರ್ವಧರ್ಮ ಸಂಸತ್ತಿನಲ್ಲಿ ಎಲ್ಲ ಧರ್ಮಗಳ ಸಾರವನ್ನು ಜನರಿಗೆ ತಿಳಿಸುವಂತಹ ವಿಚಾರ ಮತ್ತು ಚರ್ಚಾಗೋಷ್ಠಿಗಳು ನಡೆಯಲಿವೆ. ಪ್ರಸ್ತುತ ಸಮಾಜದಲ್ಲಿನ ಧರ್ಮಗಳ ನಡುವಿನ ತಿಕ್ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು ನಡೆಯಲಿವೆ. ಬಸವಾದಿ ಶರಣದ ತತ್ವಗಳನ್ನು ಜನರಿಗೆ ತಿಳಿಸುವ ವಿಧಾನದ ಬಗ್ಗೆಯೂ ಚರ್ಚಿಸಲಾಗುತ್ತದೆ. ಜತೆಗೆ, ಬಸವಣ್ಣ ಅವರೊಂದಿಗಿದ್ದ 100ಕ್ಕೂ ಹೆಚ್ಚಿನ ಶರಣರ ವಚನಗಳು, ಜೀವನಗಳ ಕುರಿತು ಮಾಹಿತಿಯನ್ನು ಸರ್ವಧರ್ಮ ಸಂಸತ್ತು ಮತ್ತು ಅನುಭವ ಮಂಟಪದಲ್ಲಿ ಪ್ರದರ್ಶಿಸಲಾಗುತ್ತದೆ.

ಬಸವಾದಿ ಶರಣರ ಜತೆಗೆ ಸಮಾಜದಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಎಂದು ಸಾರಿದ ಬುದ್ಧ ಮತ್ತು ಧರ್ಮ-ಜಾತಿಗಳ ವಿರುದ್ಧವಾಗಿ ಹೋರಾಡಿದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಜೀವನ, ಸಿದ್ಧಾಂತಗಳನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಹಾಗೆಯೇ, ಸಾಣೆಹಳ್ಳಿ ಮಠದ ಕಲಾತಂಡದಿಂದ ‘ಕಲ್ಯಾಣ ಕ್ರಾಂತಿ’ ನಾಟಕ ಪ್ರದರ್ಶನ ನಡೆಸುವುದಕ್ಕೂ ಚಿಂತನೆ ನಡೆಸಲಾಗಿದೆ. ಈ ವರ್ಷ ಕೂಡಲಸಂಗಮದಲ್ಲಿ ಕಾರ್ಯಕ್ರಮ ನಡೆಸಿದಂತೆ ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಬಸವ ಜಯಂತಿಯನ್ನು ವಿಭಿನ್ನ ಪರಿಕಲ್ಪನೆಯಲ್ಲಿ ಆಯೋಜಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

17 ಮಂದಿಯ ಆಚರಣಾ ಸಮಿತಿ ರಚನೆ:

ಸರ್ವಧರ್ಮ ಸಂಸತ್ತು ಮತ್ತು ಬಸವ ಜಯಂತಿ ಕಾರ್ಯಕ್ರಮ ಆಯೋಜಿಸುವ ಸಂಬಂಧ ಈಗಾಗಲೇ 17 ಮಂದಿಯ ಆಚರಣಾ ಸಮಿತಿಯನ್ನು ರಚಿಸಲಾಗಿದೆ. ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಳಿದಂತೆ ಬಾಗಲಕೋಟೆ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ಬಾಗಲಕೋಟೆ ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರನ್ನು ಸರ್ಕಾರದ ಕಡೆಯಿಂದ ಸದಸ್ಯರನ್ನಾಗಿಸಲಾಗಿದೆ. ಉಳಿದಂತೆ ಹಿರಿಯ ಸಾಹಿತಿಗಳು, ಚಿಂತಕರಾದ ಡಾ.ಹಂ.ಪ.ನಾಗರಾಜಯ್ಯ, ಡಾ.ರಂಜಾನ್‌ ದರ್ಗಾ, ಡಾ. ರಹಮತ್‌ ತರಿಕೆರೆ, ಬೌದ್ಧ ವಿಹಾರದ ಆನಂದ ಭಂತೇಜಿ, ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಮತ್ತಿತರರನ್ನು ಸದಸ್ಯರನ್ನಾಗಿಸಲಾಗಿದೆ. ಈ ಸಮಿತಿಯು ಏ.2ರಂದು ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸಲಿದೆ.

ಬಸವಣ್ಣ ಅವರ ತತ್ವ-ಸಿದ್ಧಾಂತವನ್ನು ಜನರಿಗೆ ತಿಳಿಸುವ ಮೂಲಕ ಧರ್ಮಗಳ ನಡುವಿನ ತಿಕ್ಕಾಟವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಈ ಬಾರಿಯ ಬಸವ ಜಯಂತಿಗೆ ಕೂಡಲಸಂಗಮದಲ್ಲಿ ಸರ್ವಧರ್ಮ ಸಂಸತ್ತನ್ನು ಏರ್ಪಡಿಸಲಾಗುತ್ತಿದೆ. ಅದರ ಆಚರಣೆಗಾಗಿ ಆಚರಣಾ ಸಮಿತಿಯನ್ನೂ ರಚಿಸಲಾಗಿದ್ದು, ಶೀಘ್ರದಲ್ಲಿ ಅಂತಿಮ ರೂಪುರೇಷೆ ಪ್ರಕಟಿಸಲಾಗುವುದು.

- ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ.