ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ದಾದಾಗಿರಿ ಮಾಡಿದ್ದ ಬಟ್ಟೆ ವ್ಯಾಪಾರಿ ಸೇರಿ ಇಬ್ಬರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಿಕ್ಕಪೇಟೆ ಅವಿನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲಿಕ ಉಮೇದರಾಮ್ ಹಾಗೂ ಆತನ ಸಹಾಯಕ ಮಹೇಂದ್ರ ಸಿರ್ವಿ ಬಂಧಿತರಾಗಿದ್ದು, ಇತ್ತೀಚೆಗೆ ತಮ್ಮ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಆಂಧ್ರಪ್ರದೇಶ ಮೂಲದ ಹಂಪಮ್ಮ ಮೇಲೆ ವ್ಯಾಪಾರಿಗಳು ನೈತಿಕ ಪೊಲೀಸ್ ಗಿರಿ ನಡೆಸಿ ಜೈಲು ಸೇರಿದ್ದಾರೆ.ಏನಿದು ಘಟನೆ?
ಹಲವು ವರ್ಷಗಳಿಂದ ಅವಿನ್ಯೂ ರಸ್ತೆಯಲ್ಲಿ ರಾಜಸ್ಥಾನ ಮೂಲದ ಉಮೇದುರಾಮ್ ಬಟ್ಟೆ ಅಂಗಡಿ ನಡೆಸುತ್ತಿದ್ದು, ತಮ್ಮ ಕುಟುಂಬದ ಜತೆ ಕಾಟನ್‌ಪೇಟೆ ಬಳಿ ಆತ ನೆಲೆಸಿದ್ದಾನೆ. ಸೆ.21 ರಂದು ಆತನ ಅಂಗಡಿಗೆ ಗ್ರಾಹಕಳ ಸೋಗಿನಲ್ಲಿ ಸೀರೆ ಖರೀದಿಗೆ ಆಂಧ್ರಪ್ರದೇಶದ ಗುಂತಕಲ್ ಮೂಲದ ಹಂಪಮ್ಮ ತೆರಳಿದ್ದರು. ಆಗ ಕೆಲಸಗಾರರ ಗಮನ ಬೇರೆಡೆ ಸೆಳೆದು ಸೀರೆ ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಾಮ್ ಹಾಗೂ ಮಹೇಂದ್ರ ಹಿಡಿದುಕೊಂಡಿದ್ದಾರೆ. ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ಕೂಡಲೇ ಘಟನಾ ಸ್ಥಳಕ್ಕೆ ಸಿಟಿ ಮಾರ್ಕೆಟ್ ಠಾಣೆಯ ಹೊಯ್ಸಳ ಸಿಬ್ಬಂದಿ ತೆರಳಿದ್ದರು. ಆದರೆ ಅಷ್ಟರಲ್ಲಿ ಮಹಿಳೆ ಮೇಲೆ ಶೂ ಗಾಲಿನಿಂದ ಒದ್ದು ಮನಬಂದಂತೆ ಉಮೇದ್ ರಾವ್ ಥಳಿಸಿದ್ದರು. ಈ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಪೊಲೀಸರ ಎಚ್ಚರಿಕೆ
‘ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಸಹಿಸುವುದಿಲ್ಲ. ಒಂದು ವೇಳೆ ಕಾನೂನನ್ನು ಕೈಗೆತ್ತಿಕೊಂಡರೆ ನಮ್ಮಿಂದ ತಪ್ಪಿಸಿಕೊಳ್ಳಲು ಆಗದು. ಮಹಿಳೆಯ ಘನತೆಗೆ ಧಕ್ಕೆ ತರುವವರಿಗೆ ಕಠಿಣ ಕಾನೂನು ಕ್ರಮ ಖಚಿತ!ಬೆಂಗಳೂರು ನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ’ ಎಂದು ಆರೋಪಿಗಳ ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ನಗರ ಪೊಲೀಸರ ಅಧಿಕೃತ ಖಾತೆಯಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ವಲಸಿಗ ವ್ಯಾಪಾರಿಗಳ ವಿರುದ್ಧ ಜನಾಕ್ರೋಶಮಹಿಳೆ ಮೇಲೆ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಾರಿಗಳ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಲಸಿಗ ವ್ಯಾಪಾರಿಗಳಿಂದ ನಗರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಂಥ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಅವೆನ್ಯೂ ರಸ್ತೆಯಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ಆಗಿದೆ.. ಇವರದೇ ದರ್ಬಾರ್..ಮಾರ್ವಾಡಿಗಳ ದಬ್ಬಾಳಿಕೆ ನೋಡಿ..ಬಾಬುಲಾಲ್ ಅನ್ನೋ ಇವನ ಮೇಲೆ ಕ್ರಮ ಆಗಲಿ..ಈ ರೀತಿ ಅಸಹಾಯಕ ಹೆಣ್ಣುಮಗಳ ಮೇಲೆ ಶೂ ಕಾಲಲ್ಲಿ ಒದ್ದು ದೌರ್ಜನ್ಯ..ಕೂಡಲೇ ಇವನ ಬಂಧನ ಆಗಲೇಬೇಕು’ ಎಂದು ‘ಎಕ್ಸ್’ನಲ್ಲಿ ಘಟನೆಯ ವಿಡಿಯೋ ಹಂಚಿಕೊಂಡು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.ಸಂತ್ರಸ್ತೆ ಮಹಿಳೆ ಬಂಧನ
ಉಮೇದು ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇರೆಗೆ ಹಲ್ಲೆಗೊಳಗಾದ ಆಂಧ್ರಪ್ರದೇಶ ಹಂಪಮ್ಮ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಾಪಾರಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆಕೆಯ ಪೂರ್ವಾಪರ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಉಮೇದ್ ರಾವ್ ಅಂಗಡಿಯಲ್ಲಿ 10 ಸಾವಿರ ರು. ಮೌಲ್ಯದ ಸೀರೆಯನ್ನು ಹಲ್ಲೆಗೊಳಗಾದ ಮಹಿಳೆ ಕಳವು ಮಾಡಿರುವುದು ತನಿಖೆಯಲ್ಲಿ ಖಚಿತವಾಗಿದೆ. ಈ ಕಳ್ಳತನ ಬಗ್ಗೆ ಪೊಲೀಸರಿಗೆ ದೂರು ಕೊಡುವ ಮುನ್ನವೇ ಹಲ್ಲೆ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿಯ ನಡವಳಿಕೆ ಅಥವಾ ಕೃತ್ಯಗಳನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ
-ಎಸ್.ಗಿರೀಶ್, ಡಿಸಿಪಿ, ಪಶ್ಚಿಮ ವಿಭಾಗ