ಪರಾರಿಯಲ್ಲಿ ಪುಷ್ಪ ಅರಳಿಸಿದ ಪಾರ್ವತಿ

| Published : Jan 12 2025, 01:16 AM IST

ಸಾರಾಂಶ

ಪರಾರಿ ಪುಷ್ಪಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅಂತರಾಜ್ಯಕ್ಕೂ ಕಾಲಿಟ್ಟಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಜಾನುವಾರುಗಳಿಗೆ ಮೇವಾಗಿ ನಂತರ ತಿಪ್ಪೆ ಸೇರಬೇಕಿದ್ದ ಪರಾರಿ (ಮೆಕ್ಕೆಜೋಳದ ರವದಿ) ಈಗ ಗಣ್ಯರ ಸ್ವಾಗತ ಕೋರಲು, ಶ್ರೀಮಂತ ಮನೆಗಳಿಗೆ ಆಲಂಕಾರಿಕ ವಸ್ತುಗಳಾಗಿ ತಯಾರಾಗುತ್ತಿದೆ. ಈ ಪರಾರಿ ಪುಷ್ಪಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅಂತರಾಜ್ಯಕ್ಕೂ ಕಾಲಿಟ್ಟಿದೆ.

ಹೌದು, ಅಪ್ಪಟ ಹಳ್ಳಿ ಸೊಗಡಿನಲ್ಲಿ ಸೃಜನಶೀಲ ಕರಕುಶಲ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ ತಾಲೂಕಿನ ಮುದೇನೂರು ಗ್ರಾಮದ ಪಾರ್ವತಿ ತಳವಾರ್‌. ಬಡ ಕುಟುಂಬದಲ್ಲಿ ಬೆಳೆದ ಈ ಮಹಿಳೆ ತನ್ನ ಕ್ರಿಯಾಶೀಲತೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊಪ್ಪಳ ಜಿಲ್ಲೆ ಹನುಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಎರಡು ವರ್ಷದ ಪ್ರವಾಸೋದ್ಯಮ ಶಿಕ್ಷಣ ಪೂರೈಸಿದ್ದಾರೆ. ಇವರನ್ನು ಸಾಕಿ ಬೆಳೆಸಿದ್ದು ಆನೆಗುಂದಿಯಲ್ಲಿರುವ ದ ಕಿಸ್ಕಿಂಧಾ ಟ್ರಸ್ಟ್ ಫೌಂಡರ್ ಶರ್ಮಿಳಾ ಪವಾರ್. ಅವರ ಬಳಿ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಪಳಗುವ ಜತೆಗೆ ಅವರ ಮಾರ್ಗದರ್ಶನವೇ ಇಂದು ಇವರಿಗೆ ದಾರಿದೀಪವಾಗಿದೆ. ಹತ್ತಾರು ಮಹಿಳೆಯರಿಗೆ ಕೆಲಸ ನೀಡಿ ಬದುಕಿಗೆ ಆಸರೆಯಾಗಿದ್ದಾರೆ.

ತಾಲೂಕಿನಲ್ಲಿ ಕರಕುಶಲ ಕಲೆಯಲ್ಲೇ ಸಾಧನೆ ಮಾಡಬೇಕೆಂಬ ಛಲ ಹಾಗೂ ಹಂಬಲದ ಕನಸು ಕಾಣುತ್ತಿದ್ದ ಪಾರ್ವತಿ, ಗ್ರಾಮೀಣ ಪ್ರದೇಶದಲ್ಲಿ ಯಥೇಚ್ಛವಾಗಿ ಬೆಳೆಯುವ ಮೆಕ್ಕೆಜೋಳದ ಪರಾರಿಯಿಂದ ಆಲಂಕಾರಿಕ ವಸ್ತುಗಳನ್ನು ತಯಾರಿಸಿ ದೇಶಾದ್ಯಂತ ಮಾರಾಟ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ಸೇರಿಕೊಂಡು ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ತಾಲೂಕಿನ ಮಹಿಳೆಯರ ಸಬಲೀಕರಣಕ್ಕಾಗಿ ಹಂಬಲಿಸುತ್ತಿದ್ದಾರೆ. ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಿ ತಾಲೂಕಿನ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಮೆಕ್ಕೆಜೋಳದ ಪರಾರಿಯಲ್ಲಿ ಕೇದಿಗೆ, ಕಮಲ ಸೇರಿದಂತೆ ನಾನಾ ಬಗೆಯ ಹೂವುಗಳು, ಲ್ಯಾಂಪ್‌ ಸೈಡ್‌, ಹೂವಿನ ಬುಕ್ಕೆ ಸೇರಿದಂತೆ ವಿವಿಧ ಬಗೆಯ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಕಳೆದ ವರ್ಷ ಹಂಪಿಯಲ್ಲಿ ಜರುಗಿದ ಜಿ-20 ಸಮ್ಮೇಳನಕ್ಕೆ ಆಗಮಿಸಿದ ವಿದೇಶಿ ಗಣ್ಯರನ್ನು ಸ್ವಾಗತಿಸಲು ಪಾರ್ವತಿ ಅವರ ಪರಾರಿ ಪುಷ್ಪ ಬಳಕೆ ಮಾಡಲಾಗಿತ್ತು.

ಇದೇ ಜನವರಿ ತಿಂಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಪರಾರಿಯಲ್ಲೇ ₹1 ಲಕ್ಷ ಮೌಲ್ಯದ ವಿವಿಧ ಬಗೆಯ ಪುಷ್ಪಗಳನ್ನು ತಯಾರಿಸಿದ್ದಾರೆ. ಈ ಪುಷ್ಪ ತಯಾರಿಸಲು ಯಾವುದೇ ತರದ ರಾಸಾಯನಿಕ ಬಣ್ಣ ಹಾಗೂ ಪ್ಲಾಸ್ಟಿಕ್‌ ಬಳಕೆ ಇಲ್ಲ. ಎಲ್ಲವೂ ದೇಶಿಯ ಬಟ್ಟೆ ಮತ್ತು ಬಣ್ಣಗಳನ್ನು ಬಳಕೆ ಮಾಡುತ್ತಿದ್ದಾರೆ. ನೋಡುಗರನ್ನು ಆಕರ್ಷಿಸುವ ಈ ಪರಾರಿ ಪುಷ್ಪಗಳು ದೂರದ ಬೆಂಗಳೂರು, ಹೈದ್ರಾಬಾದ್‌, ಪಶ್ಚಿಮ ಬಂಗಾಳ, ದೇಶದ ರಾಜಧಾನಿ ದೆಹಲಿಗೂ ಕಾಲಿಟ್ಟಿದೆ. ಅಲ್ಲಿಂದಲೂ ಬೇಡಿಕೆ ಬಂದಿದೆ. ಅದಕ್ಕೆ ತಕ್ಕಂತೆ ಹತ್ತಾರು ಮಹಿಳೆಯಿಂದ ಪುಷ್ಪ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಗ್ರಾಪಂ ಸಂಜೀವಿನಿ ಮಹಿಳಾ ಒಕ್ಕೂಟ ಸೇರಿ ಎನ್‌ಆರ್‌ಎಲ್‌ಎಂನಿಂದ ತರಬೇತಿ ಪಡೆದು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುವಿನಿಂದ ಕರಕುಶಲ ಕಲೆಗಳನ್ನು ತಯಾರಿಸುವ ನನಗೆ ಆರಂಭದಲ್ಲಿ ಜನ ಮೆಕ್ಕೆಜೋಳದ ಪರಾರಿ ತಂದು ಏನು ಮಾಡುತ್ತಾಳೆಂದು ನಾನಾ ಬಗೆಯ ಅವಮಾನ ಮಾಡಿದ್ದರು. ನನ್ನ ಪತಿ ಶ್ರೀಧರ ತಳವಾರ್‌ ಬೆಂಬಲದೊಂದಿಗೆ ಛಲ ಬಿಡದೇ ಕಸದಲ್ಲೇ ರಸ ಮಾಡಲು ಪ್ರಯತ್ನಿಸಿದೆ. ಈಗ ಸಾಕಷ್ಟು ಸಂಘ-ಸಂಸ್ಥೆಗಳು ನನ್ನ ಕಲೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಹತ್ತಾರು ಮಹಿಳೆಯರಿಗೆ ಕೆಲಸ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಮೆಕ್ಕೆಜೋಳದ ದಂಟನ್ನು ನೀರಿನಲ್ಲೇ ಕೊಳೆಸಿ ಅದರಿಂದ ಅಣಬೆ ಬೇಸಾಯ ಮಾಡುವ ಯೋಜನೆ ಇದೆ ಎನ್ನುತ್ತಾರೆ ಪರಾರಿಯಲ್ಲಿ ಪುಷ್ಪ ಅರಳಿಸಿದ ಪ್ರತಿಭೆ ಪಾರ್ವತಿ ತಳವಾರ.