ಪೆಟ್ಟಿಗೆ ಅಂಗಡಿ ಹಾವಳಿ ಪಾದಚಾರಿ ಸಂಚಾರಕ್ಕೆ ತೊಂದರೆ

| Published : Aug 26 2024, 01:35 AM IST

ಸಾರಾಂಶ

ನಗರವು ಜಿಲ್ಲೆಯಾಗುವ ಎಲ್ಲಾ ಅರ್ಹತೆ, ಅನುಕೂಲ ಇದ್ದರೂ ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಗರದೆಲ್ಲೆಡೆ ಪೆಟ್ಟಿಗೆ ಅಂಗಡಿಗಳು, ಫುಟ್‌ಪಾತ್ ವ್ಯಾಪಾರಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಪಾದಚಾರಿಗಳ ಓಡಾಟಕ್ಕೆ ಜಾಗ ಬಿಡದೆ ಆವರಿಸಿಕೊಂಡಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರವು ಜಿಲ್ಲೆಯಾಗುವ ಎಲ್ಲಾ ಅರ್ಹತೆ, ಅನುಕೂಲ ಇದ್ದರೂ ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಗರದೆಲ್ಲೆಡೆ ಪೆಟ್ಟಿಗೆ ಅಂಗಡಿಗಳು, ಫುಟ್‌ಪಾತ್ ವ್ಯಾಪಾರಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಪಾದಚಾರಿಗಳ ಓಡಾಟಕ್ಕೆ ಜಾಗ ಬಿಡದೆ ಆವರಿಸಿಕೊಂಡಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ನಗರದಲ್ಲಿ ರಸ್ತೆ, ಸರ್ಕಲ್‌ ನೋಡಿದರೂ ಪೆಟ್ಟಿಗೆ ಅಂಗಡಿಗಳು ಹಾಗೂ ಫುಟ್‌ ಪಾತ್‌ ವ್ಯಾಪಾರಿಗಳದ್ದೇ ಸಾಮ್ರಾಜ್ಯ. ಪ್ರತಿದಿನ ನಗರದಲ್ಲಿ ಹೊಸದಾಗಿ ೨-೩ ಪೆಟ್ಟಿಗೆ ಅಂಗಡಿಗಳಾದರೂ ತಲೆ ಎತ್ತುತ್ತಿವೆ. ನಗರಸಭೆ ಸೇರಿದಂತೆ ಇತರೆ ಇಲಾಖೆಗಳಿಗೆ ಸೇರಿರುವ ಜಾಗಗಳಲ್ಲೆಲ್ಲಾ ಅಕ್ರಮವಾಗಿ ತಲೆ ಎತ್ತಿ ಸಾರ್ವಜನಿಕರಿಗೆ ಹಿಂಸೆ ನೀಡುತ್ತಿವೆ. ಹಣಬಲ ಇರುವವರು ಬಂಡವಾಳ ಹಾಕಿ ದೊಡ್ಡ ದೊಡ್ಡ ಪೆಟ್ಟಿಗೆ ಅಂಗಡಿಗಳನ್ನು ಮಾಡಿಸಿ ರಸ್ತೆ ಬದಿ, ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿ ಮುಂಭಾಗದಲ್ಲಿಟ್ಟು ದಿನಕ್ಕೆ 300 ರಿಂದ 500 ರು.ವರೆಗೆ ಬಾಡಿಗೆ ಪಡೆಯುತ್ತಿರುವುದು ತಾಲೂಕು, ನಗರಾಡಳಿತಕ್ಕೂ ತಿಳಿದಿದ್ದರೂ ಅಕ್ರಮ ವ್ಯವಹಾರದಲ್ಲಿ ಪಾಲುದಾರರಾಗಿರುವಂತೆ ಭ್ರಷ್ಟ ವ್ಯವಸ್ಥೆಗೆ ಕೈಜೋಡಿಸುತ್ತಿದ್ದಾರೆ. ಅಕ್ರಮ ವ್ಯವಹಾರಗಳ ತಾಣ:

ನಗರದ ಬಹುತೇಕ ಪೆಟ್ಟಿಗೆ ಅಂಗಡಿಗಳಲ್ಲಿ ಸಿಗರೇಟು, ಬೀಡಿಯಂತಹ ನಿಷೇಧಿತ ಮಾದಕ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಲೇಜು ಹುಡುಗರು, ಪೋಲಿ ಪುಡಾರಿಗಳದ್ದೇ ವ್ಯವಹಾರವಾಗಿದೆ. ಹೆಸರಿಗೆ ಟೀ ಅಂಗಡಿಯಂತೆ ಕಾಣುತ್ತಿದ್ದರೂ ಒಳಗೆಲ್ಲಾ ಹೊಲಸು ದಂಧೆಗಳದ್ದೇ ಕಾರುಬಾರು. ಇನ್ನು ಇಲ್ಲಿ ಮಾಡಿಕೊಡುವ ಟೀ, ಕಾಫಿಯೂ ರಾಸಾಯನಿಕ ಮಿಶ್ರಿತ ಟೀಪುಡಿ ಉಪಯೋಗಿಸುತ್ತಿದ್ದು, ಯುವಕರೆಲ್ಲಾ ತಮಗೆ ಅರಿವಿಲ್ಲದೆ ಕುಡಿದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದರೆ. ಇನ್ನು ಗೋಬಿ ಮಂಚೂರಿ, ಬೇಲ್‌ಪುರಿ, ಚುರುಮುರಿ, ಪಾನಿಪುರಿ ಅಂಗಡಿಗಳೆಲ್ಲಾ ಸ್ವಚ್ಛತೆ ಇಲ್ಲದೆ, ನಿಷೇಧಿತ ಟೇಸ್ಟ್ ಹಾಗೂ ಕಲರ್ ಪೌಡರ್‌ಗಳನ್ನು ಹಾಕುತ್ತಿದ್ದಾರೆ. ಆರೋಗ್ಯಾಧಿಕಾರಿಗಳಿಗೆ ಇವೆಲ್ಲ ತಿಳಿದಿದ್ದರೂ ಕಡಿವಾಣ ಹಾಕುತ್ತಿಲ್ಲ. ಸುಗಮ ಸಂಚಾರಕ್ಕೆ ಅಡ್ಡಿ: ನಗರದ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳ ಸುತ್ತಲಿನ ರಸ್ತೆ ಬದಿ, ನಗರಸಭೆ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ೨೦೬ ಹಾಗೂ ರೈಲ್ವೆ ನಿಲ್ದಾಣ ರಸ್ತೆ, ಕಾರೋನೇಷನ್ ರಸ್ತೆ, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಮುಂಭಾಗ, ಸರ್ಕಾರಿ ಪದವಿ ಕಾಲೇಜು, ಅಂಬೇಡ್ಕರ್ ಸರ್ಕಲ್ ಸುತ್ತಮುತ್ತ, ಹಾಸನ ಸರ್ಕಲ್, ಗೋವಿನಪುರ ಸರ್ಕಲ್ ಸೇರಿದಂತೆ ಈ ಎಲ್ಲಾ ರಸ್ತೆಗಳ ಎರಡೂ ಕಡೆ ಇರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸವಾರರು ವಾಹನಗಳನ್ನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಪಾದಚಾರಿಗಳು ಸೇರಿದಂತೆ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಅನೇಕ ಕಡೆ ಬಸ್ ಹತ್ತಲು ಬರುವ ವಿದ್ಯಾರ್ಥಿನಿಯರನ್ನು ಚುಡಾಯಿಸಲೂ ವಾಹನ ನಿಲ್ಲಿಸಿಕೊಂಡು ಪೋಲಿಪಟಾಲಂಗಳು ಕಾಡುತ್ತಿದ್ದು, ಈ ಬಗ್ಗೆ ಖಾಕಿ ಕಣ್ಣಿದ್ದು ಕುರುಡಾಗಿದೆ. ನಗರದ ಬಿ.ಎಚ್. ರಸ್ತೆಯುದ್ದಕ್ಕೂ ಸಾಕಷ್ಟು ಪೆಟ್ಟಿಗೆ ಅಂಗಡಿಗಳಿದ್ದು, ಅಲ್ಲೆಲ್ಲಾ ಬಿಸಾಡುತ್ತಿರುವ ಟೀ, ಲೋಟ, ಪ್ಲಾಸ್ಟಿಕ್ ಕವರ್ ವಸ್ತುಗಳು ರಸ್ತೆಗಳ ಅಕ್ಕಪಕ್ಕದ ಚರಂಡಿ ಮತ್ತಿತರೆ ಜಾಗಗಳಲ್ಲಿ ಬೀಳುತ್ತಿವೆ. ಇದರಿಂದ ನಗರದ ಪರಿಸರ, ಸೌಂದರ್ಯ ಮತ್ತು ನಾಗರೀಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಚರಂಡಿಗಳಲ್ಲೆಲ್ಲಾ ಪ್ಲಾಸ್ಟಿಕ್ ಲೋಟಗಳದ್ದೇ ಕಾರುಬಾರಾಗಿದೆ. ಒಟ್ಟಾರೆ ತಿಪಟೂರು ನಗರ ಅಂದರೆ ಅದು ಪೆಟ್ಟಿಗೆ ಅಂಗಡಿಗಳ ಬೀಡು ಎಂಬ ಮತ್ತೊಂದು ಹೆಸರು ಸೇರಿಕೊಂಡಿದ್ದು, ಈ ಬಗ್ಗೆ ನಗರಸಭೆ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಗಮನಹರಿಸಿ ಯುವಕರ, ಕಾಮುಕರ, ಪೋಲಿಗಳ ಅಡ್ಡೆಗಳಾಗಿರುವ ಪೆಟ್ಟಿಗೆ ಅಂಗಡಿಗಳು ಮತ್ತು ಅಲ್ಲಿ ನಡೆಯುತ್ತಿರುವ ಅಕ್ರಮ, ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.

ನಗರದಲ್ಲಿ ಪೆಟ್ಟಿಗೆ ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಶಾಲಾ ಮಕ್ಕಳು, ಯುವಕರೇ ಹೆಚ್ಚಾಗಿ ಇಂತಹ ಅಂಗಡಿಗಳನ್ನು ಅವಲಂಬಿಸಿರುವ ಕಾರಣ ಬೀಡಿ, ಸಿಗರೇಟಿನಂತಹ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈ ಬಗ್ಗೆ ನಗರಸಭೆ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು.

- ವಿ. ಯೋಗೀಶ್, ನಗರಸಭೆ ಸದಸ್ಯರು, ತಿಪಟೂರು.

ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಸದ್ಯದಲ್ಲಿಯೇ ಜಂಟಿ ಕಾರ್ಯಾಚರಣೆ ನಡೆಸಿ ಆರೋಗ್ಯಕ್ಕೆ ಮಾರಕವಾಗಿರುವ ಪದಾರ್ಥಗಳಿಂದ ತಯಾರಿಸುವ ತಿಂಡಿ, ಟೀ, ಪಾನೀಯ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗಿರುವ ಪೆಟ್ಟಿಗೆ ಅಂಗಡಿಗಳು ಮತ್ತು ಕೆಲ ಫುಟ್‌ಪಾತ್ ವ್ಯಾಪಾರಸ್ಥರಿಗೆ ತಿಳಿ ಹೇಳಿ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗುವುದು.

- ವಿಶ್ವೇಶ್ವರ ಬದರೆಗಡೆ, ಪೌರಾಯುಕ್ತರು, ನಗರಸಭೆ, ತಿಪಟೂರು.