ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಕಾರ್ಖಾನೆ ತ್ಯಾಜ್ಯದಿಂದ ಕೊಪ್ಪಳ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಜನ, ಜಾನುವಾರುಗಳು ಸಾವನ್ನಪ್ಪುತ್ತಿದ್ದರೆ ಕ್ಯಾನ್ಸರ್ ಮತ್ತು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಹಿರೇಬಗನಾಳ ಗ್ರಾಮವೊಂದರಲ್ಲಿ ಒಂದೇ ವರ್ಷದಲ್ಲಿ ನಾಲ್ವರು ಕ್ಯಾನ್ಸರ್‌ಗೆ ಬಲಿಯಾಗಿದ್ದರೆ ಕಾರ್ಖಾನೆ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ನಾಲ್ಕು ವರ್ಷದಲ್ಲಿ 300 ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಅಚ್ಚರಿ ಎಂದರೆ ಇಡೀ ದೇಶವನ್ನು (ಭಾರತವನ್ನು) 2025ರ ವೇಳೆಗೆ ಕ್ಷಯ ರೋಗ ಮುಕ್ತ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದರೆ ಕೊಪ್ಪಳ ತಾಲೂಕಿನ ಹತ್ತೆ ಗ್ರಾಮಗಳಲ್ಲಿ ನಾಲ್ಕು ವರ್ಷದಲ್ಲಿಯೇ ಬರೋಬ್ಬರಿ 300ಕ್ಕೂ ಹೆಚ್ಚು ರೋಗಿಗಳು ಕ್ಷಯರೋಗದಿಂದ ಬಳಲುತ್ತಿರುವ ಅಘಾತಕಾರಿ ಅಂಕಿ-ಅಂಶಗಳು ಪತ್ತೆಯಾಗಿವೆ. ಕ್ಷಯರೋಗ ನಿರ್ಮೂಲನಾಧಿಕಾರಿ ಕಚೇರಿಯಿಂದಲೇ ಸಿಕ್ಕಿರುವ ಅಂಕಿಸಂಖ್ಯೆ ಇದಾಗಿದೆ.ಹೌದು, ಕೊಪ್ಪಳ ತಾಲೂಕಿನ ಕುಣಿಕೇರಿ, ಕುಣಿಕೇರಿತಾಂಡ, ಬಹುದ್ದೂರಬಂಡಿ, ಬಿ. ಹೊಸಳ್ಳಿ, ಗಿಣಿಗೇರಿ, ಹಿರೇಬಗನಾಳ, ಚಿಕ್ಕಬಗನಾಳ, ಹುಲಿಗಿ, ಮುನಿರಾಬಾದ್ ಹಾಗೂ ಕರ್ಕಿಹಳ್ಳಿ ಗ್ರಾಮಗಳಲ್ಲಿಯೇ 2021ರಿಂದ 2024ರ ವರೆಗೂ ನಾಲ್ಕು ವರ್ಷದಲ್ಲಿ 300ಕ್ಕೂ ಹೆಚ್ಚು ಕ್ಷಯರೋಗಿಗಳು ಪತ್ತೆಯಾಗಿದ್ದಾರೆ, ಕ್ಷಯರೋಗದಿಂದ ಬಳಲಿ ಮೃತಪಟ್ಟವರ ಸಂಖ್ಯೆ ಇನ್ನೆಷ್ಟು ಇದೆಯೋ ದೇವರೇ ಬಲ್ಲ.
ಗಿಣಿಗೇರಿ ಗ್ರಾಮವೊಂದರಲ್ಲಿಯೇ ಬರೋಬ್ಬರಿ 50 ಹಾಗೂ ಹುಲಿಗಿ ಗ್ರಾಮದಲ್ಲಿ ನಾಲ್ಕು ವರ್ಷದಲ್ಲಿ 72 ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಇದು ಅತ್ಯಂತ ಅಘಾತಕಾರಿ ಎನ್ನುತ್ತಾರೆ ವೈದ್ಯರು. ಇದು, ಕೇವಲ ಕಾರ್ಖಾನೆ ವ್ಯಾಪ್ತಿಯಲ್ಲಿರುವ ಗ್ರಾಮಗಳ ಲೆಕ್ಕಚಾರ, ಇದಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಕಾರ್ಖಾನೆ ತ್ಯಾಜ್ಯದಿಂದ ಕ್ಷಯರೋಗ ಹರಿಡಿದ್ದು, ಭಾರತವನ್ನು ಕ್ಷಯರೋಗ ಮುಕ್ತ ಮಾಡುವುದು ಅಸಾಧ್ಯ ಎನ್ನುತ್ತವೆ ಕೊಪ್ಪಳ ತಾಲೂಕಿನ ಕ್ಷಯರೋಗಿಗಳ ಅಂಕಿ-ಸಂಖ್ಯೆ.ಕ್ಯಾನ್ಸರ್‌ಗೆ ಬಲಿ:
ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಕಳೆದ ವಾರವಷ್ಟೇ ಕ್ಯಾನ್ಸರ್ ರೋಗಕ್ಕೆ ಕೇವಲ 38 ವರ್ಷದ ಯುವಕ ಬಲಿಯಾಗಿದ್ದು, ಈತ ಕಾರ್ಖಾನೆ ಧೂಳಿನ ವಿರುದ್ಧ ಹೋರಾಟ ಮಾಡುತ್ತಿದ್ದ, ದುರ್ದೈವ ಆತನನ್ನೇ ಬಲಿ ಪಡೆಯಿತು. ಹೀಗೆ ಒಂದೇ ವರ್ಷದಲ್ಲಿ ನಾಲ್ವರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ ಎನ್ನುವುದು ಸತ್ಯ. ಹೀಗೆ ಕಾರ್ಖಾನೆ ತ್ಯಾಜ್ಯದಿಂದ ಸುತ್ತ ಹತ್ತಾರು ಗ್ರಾಮಗಳಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಅಧಿಕವಾಗಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ಆದರೆ, ಕೊಪ್ಪಳದಲ್ಲಿ ಪ್ರತ್ಯೇಕ ಕ್ಯಾನ್ಸರ್ ಚಿಕಿತ್ಸಾ ಘಟಕ ಇಲ್ಲದೆ ಇರುವುದರಿಂದ ಇದರ ಅಂಕಿ-ಸಂಖ್ಯೆಯ ವಿವರ ಲಭ್ಯವಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿಗಳು.ಜಾನವಾರು ಬಲಿ:
ಕೊಪ್ಪಳ ತಾಲೂಕಿನ ಕಾರ್ಖಾನೆ ತ್ಯಾಜ್ಯದಿಂದಾಗಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ಹನುಮಂತಪ್ಪ ಕಡ್ಲಿ ಎನ್ನುವವರ ಹತ್ತಾರು ಜಾನುವಾರುಗಳು ಕಾರ್ಖಾನೆ ತ್ಯಾಜ್ಯದ ಮೇವು ತಿಂದೇ ಸಾವನ್ನಪ್ಪಿವೆ. ಇವರು ಇದರಿಂದ ಬೇಸತ್ತು ಕಾರ್ಖಾನೆಗೆ ತಮ್ಮ ಭೂಮಿಯನ್ನು ಕೋರ್ಟ್ ಮಧ್ಯಸ್ಥಿಕೆಯಲ್ಲಿ ಮಾರಿಕೊಂಡು ಊರ ತೊರೆಯಲು ಮುಂದಾಗಿದ್ದಾರೆ. ಇನ್ನು ಅಚ್ಚರಿ ಎಂದರೇ ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಅರ್ಧಕರ್ಧ ಜಾನುವಾರುಗಳು ಮೇವು ತಿಂದು ಬಲಿಯಾಗಿವೆ.ಮುದ್ದಾಬಳ್ಳಿ ಗ್ರಾಮ ಪಶುಕಿತ್ಸಾಲಯದ ವೈದ್ಯರು ಈ ಕುರಿತು ವರದಿಯನ್ನೇ ಮಾಡಿದ್ದು, ಈ ಭಾಗದಲ್ಲಿ ಜಾನುವಾರು ಸಾಕುವುದು ಸೂಕ್ತವಲ್ಲ. ಇಲ್ಲಿಯ ಮೇವು ಕಾರ್ಖಾನೆ ತ್ಯಾಜ್ಯದಿಂದ ವಿಷವಾಗಿರುವುದರಿಂದ ಜಾನುವಾರುಗಳನ್ನು ಸಾಕಬೇಡಿ ಎಂದು ಪಶು ವೈದ್ಯಕೀಯ ಇಲಾಖೆಗೆ ವರದಿಯನ್ನೇ ನೀಡಿದ್ದಾರೆ. ಹೀಗಾಗಿ, ಈ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಡಿದ್ದ ಅನೇಕ ತೋಟದ ಡೈರಿಗಳು ಮುಚ್ಚಿ ಹೋಗಿವೆ. ರೈತರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ.ಟಿಬಿ ಅಥವಾ ಕ್ಷಯ ರೋಗದಿಂದ ಬಳಲುವವರ ಸಂಖ್ಯೆ ಅಘಾತಕಾರಿಯಾಗಿದೆ. ದೇಶವನ್ನು ಕ್ಷಯರೋಗ ಮುಕ್ತ ಮಾಡುವ ವೇಳೆಯಲ್ಲಿ ಇಷ್ಟೊಂದು ಕ್ಷಯ ರೋಗ ಪತ್ತೆಯಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ ಎಂದು ವೈದ್ಯ ಡಾ. ಮಂಜುನಾಥ ಹೇಳಿದರು.ಕೊಪ್ಪಳ ಸುತ್ತಮುತ್ತಲ ಪ್ರದೇಶದಲ್ಲಿ ಕ್ಯಾನ್ಸರ್ ಮತ್ತು ಟಿಬಿ ರೋಗಗಳು ಅಧಿಕವಾಗಿವೆ. ಅನೇಕರು ಬಂದು ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಈ ವರ್ಷ ಕುಣಿಕೇರಿಯಲ್ಲಿಯೇ 9 ಕ್ಷಯರೋಗಿಗಳು ಇದ್ದಾರೆಂದು ಗ್ರಾಮಸ್ಥರೇ ಹೇಳಿದ್ದಾರೆ ಎಂದು ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.