ಸಾರಾಂಶ
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ ಪರಿಣಾಮ ನಿತ್ಯ ಒಂದಿಲ್ಲೊಂದು ಅನಾಹುತಗಳು ಸಂಭವಿಸುತ್ತಲೇ ಇದ್ದು, ನಾಯಿಗಳ ಉಪಟಳಕ್ಕೆ ಜನತೆ ರೋಸಿ ಹೋಗಿದ್ದಾರೆ.
ಮುಂಡಗೋಡದ ಕೆಲ ಬಡಾವಣೆಗಳಲ್ಲಿ ಜನ ತಿರುಗಾಡಲು ಹಿಂದೇಟು । ಕ್ರಮಕ್ಕೆ ಒತ್ತಾಯಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ ಪರಿಣಾಮ ನಿತ್ಯ ಒಂದಿಲ್ಲೊಂದು ಅನಾಹುತಗಳು ಸಂಭವಿಸುತ್ತಲೇ ಇದ್ದು, ನಾಯಿಗಳ ಉಪಟಳಕ್ಕೆ ಜನತೆ ರೋಸಿ ಹೋಗಿದ್ದಾರೆ.
ಪಟ್ಟಣದ ಯಾವುದೇ ಬಡಾವಣೆಗೆ ಪ್ರವೇಶ ಮಾಡಿದರೂ ಜನರು ಕಾಣುತ್ತಾರೊ ಇಲ್ಲವೊ ಗೊತ್ತಿಲ್ಲ, ಆದರೆ ನಾಯಿ ಹಿಂಡುಗಳ ದರ್ಶನವಾಗುವುದು ಸಾಮಾನ್ಯವಾಗಿದೆ. ಯಾವ ಸಮಯದಲ್ಲಿ ನಾಯಿಗಳು ಮೈಮೇಲೆ ಎರಗಿ ದಾಳಿ ಮಾಡಿ ಬಿಡುತ್ತವೆಯೊ ಎಂಬ ಭಯ ಕಾಡತೊಡಗಿದೆ. ಕೆಲ ಬಡಾವಣೆಗಳಲ್ಲಿ ಜನ ತಿರುಗಾಡಲು ಹಿಂದೇಟು ಹಾಕುವಂತಾಗಿದ್ದು, ಪ್ರಾಣ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಬೇಕರಿ ಮುಂತಾದ ತಿಂಡಿ-ತಿನಿಸುಗಳ ಅಂಗಡಿ ಗಳೆದುರಂತೂ ನಾಯಿಗಳು ಮುತ್ತಿಕೊಂಡಿರುತ್ತವೆ. ಕೈಯಲ್ಲಿ ತಿಂಡಿಯ ಚೀಲ ಹಿಡಿದುಕೊಂಡರೆ ತಿಂಡಿಗಾಗಿ ಮೈಮೇಲೆರಗಿ ಜನರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ನಾಯಿಗಳ ಭಯಕ್ಕೆ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕು. ರಾತ್ರಿ ಹಾಗೂ ಬೆಳಗಿನ ಜಾವ ಯಾವುದಾದರೂ ಬೈಕ್ ಹೊರಟರೆ ಸಾಕು ನಾಯಿಗಳು ಬೆನ್ನಟ್ಟಿಕೊಂಡು ಹೋಗುತ್ತವೆ. ಅಲ್ಲದೇ ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುವರಿಗೆ ಕಚ್ಚಿದ ಉದಾಹರಣೆ ಕೂಡ ಸಾಕಷ್ಟಿವೆ. ಇದರಿಂದ ವಾಯುವಿಹಾರಕ್ಕೆ ಹೋಗುವವರು ಕೂಡ ಭಯಬೀತರಾಗಿದ್ದಾರೆ. ಮೈಸೂರು ಭಾಗದಲ್ಲಿ ಹುಲಿ ಭಯವಿದ್ದರೆ, ಇಲ್ಲಿ ನಾಯಿಗಳ ಬಯ ಜನರಲ್ಲಿ ಮನೆ ಮಾಡಿರುವುದಂತೂ ಸುಳ್ಳಲ್ಲ.ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಲವರಿಗೆ ನಾಯಿ ಕಚ್ಚಿರುವ ವರದಿಯಾಗಿದೆ. ನಾಯಿ ದಾಳಿಗೊಳಗಾದವರು ಈಗ ಚಿಕಿತ್ಸೆಗಾಗಿ ಆಸ್ಪತ್ರೆ ಹಾಗೂ ನಾಟಿ ಔಷಧಿ ಪಡೆಯಲು ಅಲೆದಾಡುವಂತಾಗಿದ್ದು, ಮುಂಡಗೋಡ ಪಟ್ಟಣದ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನರಭಕ್ಷಕ ನಾಯಿಗಳು:
ಜನರನ್ನು ಮಾತ್ರವಲ್ಲದೇ ಕೋಳಿ, ಮೇಕೆ, ಮೊಲ ಮುಂತಾದ ಸಾಕು ಪ್ರಾಣಿಗಳನ್ನು ಹಿಡಿದು ರಕ್ತ ಹೀರುತ್ತಿವೆ. ಇದರಿಂದ ಸಾಕು ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುವವರ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಪ್ರಾಣಿಗಳು ದೊಡ್ಡವಾಗಿ ಬೆಳೆಯುವಷ್ಟರಲ್ಲಿ ಅರ್ಧದಷ್ಟು ಮರಿಗಳು ನಾಯಿಗಳಿಗೆ ಬಲಿಯಾಗುತ್ತಿವೆ. ಇದರಿಂದ ಗೃಹ ಕೈಗಾರಿಕೆ ಮಾಡುವವರು ಕೂಡ ಪ್ರಾಣಿ ಸಾಕಾಣಿಕೆಗೆ ಹಿಂದೇಟು ಹಾಕುತ್ತಿದ್ದಾರೆ.ಸಂಬಂಧಿಸಿದವರ ನಿರ್ಲಕ್ಷ:
ಬೀದಿ ನಾಯಿಗಳು ನಿರಂತರ ದಾಳಿ ಮಾಡಿ ಸಾಕಷ್ಟು ಅನಾಹುತ ಸೃಷ್ಟಿಸುತ್ತಿದ್ದರೂ ಕೂಡ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಈ ಹಿಂದೆ ಸಾರ್ವಜನಿಕರ ದೂರುಗಳ ಮೇರೆಗೆ ಕ್ರಮಕ್ಕೆ ಮುಂದಾಗುತ್ತಿದ್ದ ಪಟ್ಟಣ ಪಂಚಾಯಿತಿಯವರು, ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬಂದು ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದರು. ಇದರಿಂದ ಕೆಲ ದಿನವಾದರೂ ನಾಯಿಗಳ ಹಾವಳಿ ಕಡಿಮೆಯಾಗುತ್ತಿತ್ತು. ಆದರೆ ಈಗ ಪಪಂದವರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾರ್ವಜನಿಕರು ನಾಯಿಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ದೂರಿದರೆ, ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಣಿಗಳಿಗೆ ಹಿಂಸಿಸುವಂತಿಲ್ಲ ಎಂಬ ಸಬೂಬು ನೀಡುತ್ತಾರೆ. ಹಾಗಾದರೆ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಈಗಲಾದರೂ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ಜನರು ನಿರಾಳವಾಗಿ ತಿರುಗಾಡಲು ಅನುಕೂಲ ಮಾಡಿಕೊಡಬೇಕಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.