ಸಾರಾಂಶ
ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಅವೈಜ್ಞಾನಿಕ ಚರಂಡಿ ನಿರ್ಮಾಣ, ಹದಗೆಟ್ಟ ನೈರ್ಮಲ್ಯ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು ಎಲ್ಲೆಂದರಲ್ಲಿ ಚರಂಡಿ ನೀರು, ಮಳೆ ನೀರು ನಿಂತು ಲಾರ್ವಾ ಹುಟ್ಟಿಕೊಂಡು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ ಮಹಾಮಾರಿಯ ಭೀತಿ ಹೆಚ್ಚಾಗಿದ್ದು ಜನ ಭೀತಿಗೀಡಾಗುವಂತಾಗಿದೆ.
ಅಫಜಲ್ಪುರ ಪಟ್ಟಣ ಸೇರಿದಂತೆ ತಾಲೂಕಿನ ಸುಕ್ಷೇತ್ರಗಳಾದ ದೇವಲ ಗಾಣಗಾಪೂರ, ಮಣೂರ, ಘತ್ತರಗಿ ಹಾಗೂ ಇತರ ಗ್ರಾಮಗಳಾದ ಬಡದಾಳ, ಆನೂರ, ಚವಡಾಪುರ ಸೇರಿದಂತೆ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನ ನರಳುವಂತಾಗಿದೆ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಕಲ್ಮಷ ತುಂಬಿದ ಚರಂಡಿಗಳು ದಿನೇ ದಿನೇ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.ಸ್ವಚ್ಛಗೊಳ್ಳದ ಚರಂಡಿಗಳು, ಎಚ್ಚರಗೊಳ್ಳದ ಆಡಳಿತ: ಅಫಜಲ್ಪುರ ಪಟ್ಟಣದ 23 ವಾರ್ಡ್‌ಗಳ ಪೈಕಿ ಬಹುತೇಕ ಬಡಾವಣೆಗಳಲ್ಲಿ ಅವೈಜ್ಞಾನಿಕ ಚರಂಡಿಗಳಿಂದಾಗಿ ಚರಂಡಿ ನೀರು ಚರಂಡಿಯೊಳಗೆ ಹರಿಯದೆ ಮುಖ್ಯ ರಸ್ತೆಗಳ ಮೇಲೆ ಹರಿಯುತ್ತದೆ, ಇಲ್ಲವಾದರೆ ಅಲ್ಲಲ್ಲಿ ಬಿದ್ದಿರುವ ತಗ್ಗು ದಿಣ್ಣೆಗಳಲ್ಲಿ ನಿಂತು ಅದರೊಳಗೆ ಹಂದಿಗಳು ಒದ್ದಾಡಿ ವಾತಾವರಣ ಇನ್ನಷ್ಟು ಕಲುಷಿತಗೊಳಿಸುತ್ತಿವೆ. ಇಂತಹ ಕಲುಷಿತ ವಾತಾವರಣದಲ್ಲಿ ಸೊಳ್ಳೆಗಳು ಹುಟ್ಟಿ ಜನರ ಜೀವ ಹಿಂಡುತ್ತಿವೆ. ಇದು ಪಟ್ಟಣದ ಕಥೆಯಾದರೆ ಗ್ರಾಮೀಣ ಭಾಗಗಳಲ್ಲೂ ಇದಕ್ಕೆ ಹೊರತಾಗಿಲ್ಲ. ಆನೂರ ಗ್ರಾಮದ ದಲಿತ ಕೇರಿಯಲ್ಲಿನ ಚರಂಡಿ ನೀರು ಹರಿದು ಹೋಗದೆ ಮುಖ್ಯ ರಸ್ತೆಯ ಮೇಲೆ ನಿಂತು ಕಲ್ಮಷ ವಾತಾವರಣ ಸೃಷ್ಟಿಸಿದ್ದಲ್ಲದೆ ಚರಂಡಿ ನೀರು ನಿಂತಲ್ಲೆ ನಿಂತು ಪಾಚಿಗಟ್ಟಿದ್ದು ಇದೇ ನೀರಲ್ಲಿ ಬಡಾವಣೆಯ ವೃದ್ಧರು, ಮಹಿಳೆಯರು ಮಕ್ಕಳು ನಡೆದುಕೊಂಡು ಹೋಗುವುದರಿಂದ ಜನರಲ್ಲಿ ಅನಾರೋಗ್ಯದ ಭೀತಿ ಹೆಚ್ಚಾಗಿದೆ.
ಸಂಜೆಯಾದರೆ ಸಾಕು ಹೊಗೆ ಎಬ್ಬಿಸುವ ಪರಿಸ್ಥಿತಿ: ತಾಲೂಕಿನೆಲ್ಲೆಡೆ ಈಗ ಬೆಳಕು ಹರಿದರೆ ಚರಂಡಿ, ತಿಪ್ಪೆಗುಂಡಿ, ನೈರ್ಮಲ್ಯ ಸಮಸ್ಯೆಯಿಂದ ದುರ್ವಾಸನೆ ಮೂಗು ಸಿಂಡರಿಸುವಂತೆ ಮಾಡಿದರೆ, ಸಂಜೆಯಾಗುತ್ತಿದ್ದಂತೆ ದಾಳಿ ಇಡುವ ಸೊಳ್ಳೆಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಜನ ನಿತ್ಯ ಸಂಜೆ ಮನೆಗಳಲ್ಲಿ ಹೊಗೆ ಹಾಕಿಕೊಳ್ಳುತ್ತಿದ್ದಾರೆ. ಅನುಕೂಲಸ್ಥರು ತಮ್ಮ ಮನೆಗಳಲ್ಲಿ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು, ಫ್ಯಾನುಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸುತ್ತಾರೆ. ಆದರೆ ಬಡವರು, ಕೂಲಿ ಕಾರ್ಮಿಕರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.10ಕ್ಕೂ ಹೆಚ್ಚು ಡೆಂಘೀ ಪ್ರಕರಣ: ನೈರ್ಮಲ್ಯ ಸಮಸ್ಯೆ ಮತ್ತು ಕಲುಷಿತ ವಾತಾವರಣದಿಂದಾಗಿ ಸೊಳ್ಳೆಗಳು ಹುಟ್ಟಿಕೊಂಡು ಜನರಿಗೆ ಕಚ್ಚುತ್ತಿರುವ ಪರಿಣಾಮ ತಾಲೂಕಿನಾದ್ಯಂತ ಈಗಾಗಲೇ 10ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಅನೇಕರಲ್ಲಿ ಟೈಫಾಯ್ಡ್ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ಸಂಖ್ಯೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರದ್ದು ಮಾತ್ರವಾದರೆ ಅನೇಕರು ತಮಗೆ ಬಂದಿರುವ ಜ್ವರ, ಅನಾರೋಗ್ಯವನ್ನು ಆಸ್ಪತ್ರೆಗೆ ತೋರಿಸಿಕೊಳ್ಳಲಾಗದೆ ಮನೆಗಳಲ್ಲಿಯೇ ಯಾತನೆ ಅನುಭವಿಸುತ್ತಿದ್ದಾರೆ, ಅವರ ಸಂಖ್ಯೆ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ.
...ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ತಾಲೂಕಿನ 28 ಗ್ರಾಪಂಗಳಲ್ಲಿ ಜು.10ರಿಂದ ದಿನಕ್ಕೆ 3 ಗ್ರಾ.ಪಂ. ವ್ಯಾಪ್ತಿಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ. ಜನಸಾಮಾನ್ಯರು ಕೂಡ ತಮ್ಮ ಮನೆಗಳ ಪರಿಸರ ಸ್ವಚ್ಚವಾಗಿಟ್ಟುಕೊಂಡು ರೋಗ ಬಾಧೆ ಬಾರದಂತೆ ಎಚ್ಚರ ವಹಿಸಬೇಕು.
- ವೀರಣ್ಣ ಕವಲಗಿ, ತಾ.ಪಂ ಇಒ ಅಫಜಲ್ಪುರ---
ಅಫಜಲ್ಪುರ ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೊಳ್ಳೆಗಳು ದಾಳಿ ಮಾಡುತ್ತವೆ. ಸೊಳ್ಳೆಗಳ ಕಡಿತದಿಂದ ನಮಗೆ ಜ್ವರಬಾಧೆ, ತಲೆ ನೋವು ಸೇರಿ ಅನೇಕ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಆರೋಗ್ಯ ಇಲಾಖೆ, ಪುರಸಭೆ ಜನರ ಆರೋಗ್ಯದ ಕಾಳಜಿ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ.- ಬಸವರಾಜ ಮಾಲಗತ್ತಿ, ಪಟ್ಟಣದ ನಿವಾಸಿ
---ಆನೂರ ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದ ಚರಂಡಿ ನೀರು ಹರಿದು ಹೋಗದೆ ರಸ್ತೆಗಳ ಮೇಲೆ ನಿಂತು ಪಾಚಿಗಟ್ಟಿದಂತಾಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಡುತ್ತಿವೆ. ಸಾಕಷ್ಟು ಬಾರಿ ಪಂಚಾಯ್ತಿಯವರಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ.
- ಆನೂರ ಗ್ರಾಮಸ್ಥರು.