ಸಾರಾಂಶ
ಅನೇಕ ಮನೆಗಳಲ್ಲಿ ಸೋಮವಾರ ರಾತ್ರಿ ಲಕ್ಷ್ಮೀ ಪೂಜೆ ನೆರವೇರಿಸಿದರೆ, ಬಹುತೇಕರು ಮಂಗಳವಾರ ಪೂಜೆ ನಡೆಸಿದರು. ಇದರ ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿತು
ಹನುಮಸಾಗರ: ಗ್ರಾಮದಲ್ಲಿ ಮಂಗಳವಾರ ದೀಪಾವಳಿ ಅಮಾವಾಸ್ಯೆಯ ಸಂಭ್ರಮ ಮನೆ ಮಾಡಿತ್ತು.ಬೆಳಗ್ಗೆಯಿಂದಲೇ ಹನುಮಸಾಗರದ ಎಪಿಎಂಸಿ ಮಾರುಕಟ್ಟೆ ಹಾಗೂ ಹಳೆ ಬಸ್ ನಿಲ್ದಾಣ ಪ್ರದೇಶ ಜನಜಂಗುಳಿಯಿಂದ ಕಿಕ್ಕಿರಿದ್ದು ಕಂಡು ಬಂತು. ಎಲ್ಲ ವಯೋಮಾನದ ಜನರು ದೀಪಾವಳಿ ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದರು.ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಸಕ್ಕರೆಹಳ್ಳಿ, ಬಿದಿರಾಳ, ಹರಳದಿನ್ನಿ, ಬೀಲಗಲ್ಲ, ಹಳವಾರದ, ತಾವರಗೇರಾ ಮೊದಲಾದ ಗ್ರಾಮಗಳಿಂದ ಜನರು ಹನುಮಸಾಗರ ಮಾರುಕಟ್ಟೆಗೆ ಆಗಮಿಸಿ ತಳಿರು ತೋರಣ, ಹೂವು, ಹಣ್ಣು, ಕಬ್ಬು, ಬಾಳೆಗೋನೆ, ದೀಪಗಳು, ಮತ್ತು ಲಕ್ಷ್ಮೀ ಪೂಜೆಗೆ ಅಗತ್ಯವಿರುವ ಸಾಮಗ್ರಿ ಖರೀದಿಸಿದರು.
ಈ ಬಾರಿ ಮಳೆ ಉತ್ತಮವಾಗಿದ್ದರಿಂದ ರೈತರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಖರೀದಿಯಲ್ಲಿ ಚೈತನ್ಯ ಹೆಚ್ಚಿಸಿತು. ಅನೇಕ ಮನೆಗಳಲ್ಲಿ ಸೋಮವಾರ ರಾತ್ರಿ ಲಕ್ಷ್ಮೀ ಪೂಜೆ ನೆರವೇರಿಸಿದರೆ, ಬಹುತೇಕರು ಮಂಗಳವಾರ ಪೂಜೆ ನಡೆಸಿದರು. ಇದರ ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿತು.ಬುಧವಾರದ ಬಲಿಪಾಡ್ಯ ಹಬ್ಬದ ನಿಮಿತ್ತ ವಾಹನ ಮಾಲೀಕರು, ಚಾಲಕರು ತಮ್ಮ ವಾಹನಗಳಿಗೆ ಹೊಸ ಅಲಂಕಾರ ಮಾಡಲು ಸಜ್ಜಾಗಿದ್ದಾರೆ. ತಳಿರು ತೋರಣ, ಕಬ್ಬು, ಬಾಳೆಗೋನೆ ಮತ್ತು ಹೂವುಗಳಿಂದ ವಾಹನ ಅಲಂಕರಿಸುವ ಸಿದ್ಧತೆ ಹನುಮಸಾಗರದ ಬೀದಿಗಳಲ್ಲಿ ಎಲ್ಲೆಡೆ ಕಂಡುಬಂತು.
;Resize=(128,128))
;Resize=(128,128))