ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಕಾಳು ಮೆಣಸು ಬಳ್ಳಿಗಳು!

| N/A | Published : Feb 09 2025, 01:34 AM IST / Updated: Feb 09 2025, 08:45 AM IST

ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಕಾಳು ಮೆಣಸು ಬಳ್ಳಿಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕೆಲವು ಕಡೆಗಳಲ್ಲಿ ಕಾಳು ಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಕಾಫಿ ಕೊಯ್ಲಿನ ಕೆಲಸದಲ್ಲಿ ಬೆಳೆಗಾರರು ನಿರತರಾಗಿರುವುದರಿಂದ ಕೆಲವು ಕಡೆ ಮೆಣಸು ಬಳ್ಳಿಗಳು ಸೊರಗುತ್ತಿದೆ.

ವಿಘ್ನೇಶ್ ಎಂ. ಭೂತನಕಾಡು

 ಮಡಿಕೇರಿ : ಜಿಲ್ಲೆಯಲ್ಲಿ ಕೂಡ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕೆಲವು ಕಡೆಗಳಲ್ಲಿ ಕಾಳು ಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಕಾಫಿ ಕೊಯ್ಲಿನ ಕೆಲಸದಲ್ಲಿ ಬೆಳೆಗಾರರು ನಿರತರಾಗಿರುವುದರಿಂದ ಕೆಲವು ಕಡೆ ಮೆಣಸು ಬಳ್ಳಿಗಳು ಸೊರಗುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೆರಳಿನ ಆಶ್ರಯಕ್ಕಾಗಿ ಮರಗಳನ್ನು ಬೆಳೆಸಲಾಗಿದ್ದು, ಮರಗಳಲ್ಲಿ ಮೆಣಸು ಬಳ್ಳಿಯನ್ನು ಹಾಕಲಾಗಿದ್ದು, ಕಾಫಿಯೊಂದಿಗೆ ಕಾಳು ಮೆಣಸನ್ನು ಉಪ ಬೆಳೆಯಾಗಿ ಬೆಳೆಸಲಾಗುತ್ತಿದೆ. ಜಿಲ್ಲೆಯಿಂದ ವಾರ್ಷಿಕ 15 ಸಾವಿರ ಮೆಟ್ರಿಕ್ ಟನ್ ಗಳಷ್ಟು ಕಾಳು ಮೆಣಸು ಉತ್ಪಾದನೆಯಾಗುತ್ತದೆ.

ಈ ವರ್ಷ ವಿಯೆಟ್ನಾಂ ಹಾಗೂ ಬ್ರೇಜಿಲ್ ದೇಶದಲ್ಲಿ ಕಾಫಿ ಫಸಲು ನೆಲಕಚ್ಚಿರುವ ಹಿನ್ನೆಲೆಯಲ್ಲಿ ನಮ್ಮ ದೇಶೀಯ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಇದೀಗ ಕಾಫಿಯಲ್ಲಿ ನಮ್ಮ ಬೆಳೆಗಾರರು ಅತಿ ಹೆಚ್ಚು ಲಾಭಕಂಡುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಕುಟ್ಟ, ಪೊನ್ನಂಪೇಟೆ, ತಿತಿಮತಿ, ವಿರಾಜಪೇಟೆ ಸೇರಿದಂತೆ ಬಹುತೇಕ ರೋಬೆಸ್ಟಾ ತೋಟಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿರುವ ಕಾಳು ಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಬೆಳೆಗಾರರು ತಮ್ಮ ಕಾಳು ಮೆಣಸು ಬಳ್ಳಿಗಳು ಸೊರಗುವ ಆತಂಕಕ್ಕೆ ಒಳಗಾಗಿದ್ದಾರೆ.

ಇದೀಗ ಕಾಳು ಮೆಣಸು ಬಳ್ಳಿಯ ಬುಡಕ್ಕೆ ನೀರು ಹಾಕುವುದರಿಂದ ಕಾಳು ಮೆಣಸು ಎಲೆಗಳು ಸೊರಗುವುದನ್ನು ಹತೋಟಿಗೆ ತರಬಹುದಾಗಿದೆ. ಅಲ್ಲದೆ ಫಸಲಿನ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ಇದೀಗ ಬೆಳೆಗಾರರು ಕಾಫಿ ಕೆಲಸದಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿರುವುದರಿಂದ ಯಾರೂ ಕೂಡ ನೀರು ಸಿಂಪಡನೆ ಮಾಡಲು ಮುಂದಾಗುತ್ತಿಲ್ಲ. ಬಳ್ಳಿಗಳ ಬುಡಕ್ಕೆ ಮಾತ್ರ ನೀರು ಸಿಂಪಡಿಸಬೇಕೆಂದರೆ ಕೆಲಸಗಾರರು ಕೂಡ ಸಿಗುತ್ತಿಲ್ಲ. ಇದರಿಂದ ಮೆಣಸು ಬಳ್ಳಿಗಳು ತೀರಾ ಸೊರಗುವ ಪರಿಸ್ಥಿತಿಗೆ ಒಳಗಾಗುತ್ತಿದೆ.

ಕಾಫಿ ತೋಟಗಳಿಗೆ ಈಗ ನೀರು ಸಿಂಪಡಿಸಿದರೆ ಬೇಗ ಹೂವು ಅರಳುತ್ತದೆ. ಕೊಯ್ಲಿನ ಸಮಯದಲ್ಲಿ ನೀರು ಸಿಂಪಡಿಸುವುದು ಅಸಾಧ್ಯವಲ್ಲ. ಆದ್ದರಿಂದ ಒಂದು ಕಡೆ ಕಾಫಿ ಕೊಯ್ಲು ಮುಗಿಸಬೇಕು. ಮತ್ತೆ ಕಾಳು ಮೆಣಸು ಬಳ್ಳಿಗಳನ್ನು ಕೂಡ ರಕ್ಷಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬೆಳೆಗಾರರು ಚಿಂತೆಗೆ ಒಳಗಾಗಿದ್ದಾರೆ.

ನೀರು ಸಕಾಲಕ್ಕೆ ನೀಡದ ಪರಿಣಾಮ ಈಗಾಗಲೇ ಕೆಲವು ತೋಟಗಳಲ್ಲಿ ಹೊಸದಾಗಿ ನಾಟಿ ಮಾಡಲಾದ ಮೆಣಸು ಬಳ್ಳಿಗಳು ನಾಶವಾಗಿದೆ. ಆದ್ದರಿಂದ ಇರುವ ಹೊಸ ಬಳ್ಳಿಗಳನ್ನು ಸಂರಕ್ಷಿಸಿಕೊಳ್ಳಲು ಬೆಳೆಗಾರರು ಬಳ್ಳಿಗಳ ಬುಡಕ್ಕೆ ನೀರು ಕೊಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಕಾರಣ ಮೆಣಸು ಬಳ್ಳಿಗಳ ಬುಡಕ್ಕೆ ತರಗೆಲೆಗಳನ್ನು ಹಾಯಿಸುವುದರಿಂದ ನೀರಿನ ಶೀತಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ತಮ್ಮ ಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಜಿಲ್ಲೆಯ ಕೆಲವು ಕಡೆಗಳಲ್ಲಿ ಈಗಾಗಲೇ ಸಣ್ಣ ಮೆಣಸು ಬಳ್ಳಿಗಳಲ್ಲಿ ಮೆಣಸು ಫಸಲು ಹಣ್ಣಾಗ ತೊಡಗಿದೆ. ಫೆ.15ರ ನಂತರ ಕೊಯ್ಲು ಕಾರ್ಯ ಆರಂಭವಾಗಲಿದೆ. ಮಾರ್ಚ್ ತಿಂಗಳಲ್ಲಿ ಕೊಯ್ಲು ಕಾರ್ಯ ನಡೆಯುತ್ತದೆ.

ಹಳದಿ ಬಣ್ಣ ಹತೋಟಿ : ಇದೀಗ ಹಳದಿ ಬಣ್ಣಕ್ಕೆ ತುತ್ತಾಗಿರುವ ಮೆಣಸು ಬಳ್ಳಿಗಳನ್ನು ಹತೋಟಿಗೆ ಬೆಳೆಗಾರರು ಒಂದು ಬ್ಯಾರಲ್ ಗೆ ಐದು ಕೆಜಿ ಸಿಂಪಡಿಸುವ ಸುಣ್ಣ ಹಾಗೂ ಒಂದು ಕೆಜಿ ಪೋಟೇಶ್ ಹಾಕಿ ಮಿಶ್ರಣ ನಂತರ ಬಳ್ಳಿಗಳಿಗೆ ಸಿಂಪಡಣೆ ಮಾಡಬಹುದಾಗಿದೆ.

ಇದೀಗ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಇದರಿಂದ ಕೆಲವು ಕಡೆಗಳಲ್ಲಿ ಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಆದ್ದರಿಂದ ಬೆಳೆಗಾರರು ಮೆಣಸು ಬಳ್ಳಿಗಳ ಬುಡಕ್ಕೆ ನೀರನ್ನು ಹಾಕುವುದು ಅನಿವಾರ್ಯವಾಗಿದೆ. ಹೀಗೆ ಮಾಡುವುದರಿಂದ ಮೆಣಸು ಬಳ್ಳಿ ಸೊರಗುವುದಿಲ್ಲ. ಅಲ್ಲದೆ ಮೆಣಸು ಫಸಲು ತೂಕ ಕೂಡ ಹೆಚ್ಚಾಗುತ್ತದೆ ಎಂದು ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ತಿಳಿಸಿದರು.