ಸಾರಾಂಶ
ಹೊಸಕೋಟೆ : ಹೆಂಡತಿಯನ್ನು ಕೊಲೆ ಮಾಡಿ ಮೂರು ದಿನಗಳ ಬಳಿಕ ಆರೋಪಿ ಹೊಸಕೋಟೆ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.
ಕೊಲೆಗೀಡಾಗಿರುವ ಮಹಿಳೆಯನ್ನು ಆಂಧ್ರಪ್ರದೇಶದ ಅನಮಯ್ಯ ಜಿಲ್ಲಾ ರಾಯಚೂಟಿ ತಾಲೂಕು ಚಿನ್ನಮಂಡಲಮ್ ಬಲಜಿಪಲ್ಲಿ ಗ್ರಾಮದ ರೆಡ್ಡಿಲಕ್ಷ್ಮಿ (30) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಂಬಳಪಲ್ಲಿ ತಾಲೂಕಿನ ಪಿಟಿಎಂ ನಿವಾಸಿ ಹರೀಶ್ (35) ಪೊಲೀಸರಿಗೆ ಶರಣಾಗಿದ್ದಾನೆ. ಹರೀಶ್ ಹೆಂಡತಿ ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣದಲ್ಲಿ ವಾಸವಾಗಿದ್ದ . ಹೊಸಕೋಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ಹರೀಶ್ ಮೊದಲು ಓರ್ವ ಮಹಿಳೆಯನ್ನು ಮದುವೆಯಾಗಿದ್ದು, ಆಕೆಯೊಂದಿಗೆ ಹೊಸಕೋಟೆಯಲ್ಲಿ ಮನೆ ಮಾಡಿ ಸಂಸಾರ ಮಾಡುತ್ತಿದ್ದರೂ ಸಂಸಾರಿಕ ಕಲಹದ ಹಿನ್ನೆಲೆಯಲ್ಲಿ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದೇನೆ ಎಂದು ಸುಳ್ಳು ಹೇಳಿ ರೆಡ್ಡಿಲಕ್ಷ್ಮಿಯನ್ನು 2022 ಮೇ 21ರಂದು ಮದುವೆ ಆಗಿದ್ದ.
ರೆಡ್ಡಿಲಕ್ಷ್ಮಿಯನ್ನು ಮದುವೆ ಮಾಡಿಕೊಂಡ ನಂತರ ಅರೋಪಿ ಹರೀಶ್ ಆಕೆಯನ್ನು ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ್ಯ ಮಂದಿರದ ರಸ್ತೆಯಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡು ಅಲ್ಲಿ ಇರಿಸಿದ್ದ. ಮೂರು ದಿನಗಳ ಹಿಂದೆ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಯುಗಾದಿ ಹಬ್ಬದ ದಿನದಂದು ಹೊಸಕೋಟೆ ಪೊಲೀಸ್ ಠಾಣೆಗೆ ಶರಣಾಗಿ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ.ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆಗೆ ನಿಖರಕಾರಣದ ಬಗ್ಗೆ ಪತ್ತೆಹಚ್ಚಲು ಮುಂದಾಗಿದ್ದಾರೆ.