ವಿವೇಕಾನಂದರ ಪಯಣಕ್ಕೆ ಗಂಗೋತ್ರಿ ಆಗಿದ್ದ ಪೆರುಮಾಳ್‌ : ವೀಣಾ ಬನ್ನಂಜೆ

| Published : Jul 22 2024, 01:24 AM IST

ವಿವೇಕಾನಂದರ ಪಯಣಕ್ಕೆ ಗಂಗೋತ್ರಿ ಆಗಿದ್ದ ಪೆರುಮಾಳ್‌ : ವೀಣಾ ಬನ್ನಂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸ್ವಾಮಿ ವಿವೇಕಾನಂದರೆಂಬ ಮಹಾನ್ ನಾವಿಕ ಅಮೇರಿಕಾದ ವಿಶ್ವಧರ್ಮ ಸಮ್ಮೇಳನವೆಂಬ ಸಾಗರವನ್ನು ಯಶಸ್ವಿಯಾಗಿ ದಾಟಿದರಾದರೂ ಆ ಮಹಾನ್ ಯತಿಯ ಸುಧೀರ್ಘ ಪಯಣಕ್ಕೆ ಗಂಗೋತ್ರಿ ಆದವರು ಅಳಸಿಂಗ ಪೆರುಮಾಳರು ಎಂದು ವಾಗ್ಮಿ ವೀಣಾ ಬನ್ನಂಜೆ ಹೇಳಿದರು.

ಲೇಖಕಿ ನಾಗಶ್ರೀ ತ್ಯಾಗರಾಜ್ ವಿರಚಿತ ಚಿಕ್ಕಮಗಳೂರು ಟು ಚಿಕಾಗೋ’ ಕೃತಿ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ವಾಮಿ ವಿವೇಕಾನಂದರೆಂಬ ಮಹಾನ್ ನಾವಿಕ ಅಮೇರಿಕಾದ ವಿಶ್ವಧರ್ಮ ಸಮ್ಮೇಳನವೆಂಬ ಸಾಗರವನ್ನು ಯಶಸ್ವಿಯಾಗಿ ದಾಟಿದರಾದರೂ ಆ ಮಹಾನ್ ಯತಿಯ ಸುಧೀರ್ಘ ಪಯಣಕ್ಕೆ ಗಂಗೋತ್ರಿ ಆದವರು ಅಳಸಿಂಗ ಪೆರುಮಾಳರು ಎಂದು ವಾಗ್ಮಿ ವೀಣಾ ಬನ್ನಂಜೆ ಹೇಳಿದರು.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಕಳುಹಿಸಿಕೊಟ್ಟ ಅಳಸಿಂಗ ಪೆರುಮಾಳ್ ಕುರಿತು ಲೇಖಕಿ ನಾಗಶ್ರೀ ತ್ಯಾಗರಾಜ್ ಬರೆದಿರುವ ಚಿಕ್ಕಮಗಳೂರು ಟು ಚಿಕಾಗೋ’ ಕೃತಿಯನ್ನು ನಗರದ ಓಂಕಾರೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.ಭಾರತದ ಇತಿಹಾಸದಲ್ಲಿ ಮಹತ್ತರ ತಿರುವು ದೊರೆತ ಘಟ್ಟ ಸ್ವಾಮಿ ವಿವೇಕಾನಂದರ ಅವತರಣದ ಕಾಲ. ಸನ್ಯಾಸ ಎಂಬ ಪದಕ್ಕೆ ಕ್ರಾಂತಿಕಾರಿ ಅರ್ಥ ಒದಗಿಸಿದ, ವಿಶ್ವದ ಯಾವುದೇ ವಿಷಯಕ್ಕೆ ಧನಾತ್ಮಕ ಚಿಂತನೆಯ ದಿಶೆಯಿತ್ತು ಮಾನವ ಅಭ್ಯುದಯಕ್ಕೆ ನಾಂದಿ ಹಾಡಿದವರು ವಿಶ್ವಗುರು ಸ್ವಾಮಿ ವಿವೇಕಾನಂದರು. ಆ ಮಹಾನ್ ಯತಿಯ ಬದುಕಿನುದ್ದಕ್ಕೂ ಊರು ಗೋಲಿನಂತೆ ಸಹಾಯವಿತ್ತು, ಸೇವೆಗೈದ ಆಹರ್ನಿಶಿ ಗುರುವಿನ ಸೇವೆಗಾಗಿಯೇ ಶ್ರಮಿಸಿದ ಶಿಷ್ಯಾಗ್ರಣಿ ಅಳಸಿಂಗ ಪೆರುಮಾಳರು ಎಂದು ವ್ಯಾಖ್ಯಾನಿಸಿದರು.ಅಳಸಿಂಗ ಪೆರುಮಾಳರು ತಮಗಾಗಿ ಹುಟ್ಟಿ ಬಂದವರಲ್ಲ ಸ್ವಾಮಿ ವಿವೇಕಾನಂದರನ್ನು ಅವರ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಬೆಳೆಸಲು ಬಂದವರು. ಸ್ವಾಮಿ ವಿವೇಕಾನಂದರಿಗೆ ಮೆಟ್ಟಿಲಾಗಿ ನಿಂತವರು ಅಳಸಿಂಗ ಪೆರುಮಾಳರು. ಶ್ರೀರಾಮನಿಗೆ ಕೋದಂಡವಿದ್ದ ಹಾಗೆ, ಅರ್ಜುನನಿಗೆ ಗಾಂಡೀವವಿದ್ದ ಹಾಗೆ ಪೆರುಮಾಳರಿಲ್ಲದೇ ವಿವೇಕಾನಂದರು ಅಪೂರ್ಣ ಎಂದು ಹೇಳಿದರು.ಅಳಸಿಂಗ ಪೆರುಮಾಳರು ವೀರ ಸನ್ಯಾಸಿ ವಿವೇಕಾನಂದರನ್ನು ಅಮೆರಿಕಾಗೆ ಕಳುಹಿಸುವ ಕೆಲಸವನ್ನಷ್ಟೆ ಮಾಡಲಿಲ್ಲ ನಂತರದ ಪರಿಣಾಮಗಳನ್ನು ವಿವೇಕಾನಂದರ ವಿದ್ವತ್ ಪ್ರಪಂಚವನ್ನು ಭಾರತೀಯರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದರು, ವಿವೇಕಾನಂದರೆಂಬ ಯುಗ ಯೋಗಿಯ ಬದುಕಿನಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸಿದ ಕೀರ್ತಿ ಅಳಸಿಂಗರಿಗೆ ಸಲ್ಲುತ್ತದೆ ಎಂದರು.ಅಳಸಿಂಗ ಪೆರುಮಾಳರ ಕುರಿತ ಕೃತಿಯನ್ನು ಬರೆಯುವ ಮೂಲಕ ನಾಗಶ್ರೀ ತ್ಯಾಗರಾಜ್ ಅವರು ಬಹಳ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಈ ಕೃತಿ ಅನುವಾದ ಎನಿಸುವುದೇ ಇಲ್ಲ ಮೂಲಕೃತಿಯೇ ಇದು ಎಂಬಂತಿದೆ. ಚಿಕ್ಕ ಪುಸ್ತಕದಲ್ಲಿ ಮೇರು ವ್ಯಕ್ತಿತ್ವ ವನ್ನು ಹಿಡಿದಿಟ್ಟ ರೀತಿಯೂ ಸೊಗಸಾಗಿದೆ ಎಂದು ಶ್ಲಾಘಿಸಿದರು.ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಚಿಕ್ಕಮಗಳೂರಿನಿಂದ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಅಳಸಿಂಗ ಪೆರುಮಾಳ್ ಅವರು ಹಣ ಸಂಗ್ರಹಿಸಿ ವಿವೇಕಾನಂದರನ್ನು ಕಳುಹಿಸಿಕೊಟ್ಟರೆಂಬ ವಿಚಾರ ಇಲ್ಲಿನ ಜನಕ್ಕೆ ತಿಳಿದಿಲ್ಲದಿರುವುದು ವಿಷಾದದ ಸಂಗತಿ. ಅಳಸಿಂಗರು ಹುಟ್ಟಿದ್ದು ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಅಳಸಿಂಗರು ಪೂಜಾರ್ಹ ವ್ಯಕ್ತಿ ಎಂದರು.ಲೇಖಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಈ ಕೃತಿ ಬಿಡುಗಡೆಯ ಮೂಲಕ ತಮ್ಮ ಏಳು ವರ್ಷಗಳ ಕನಸು ನನಸಾಗಿದೆ. ಈ ಕೃತಿಯ ಮೂಲ ಕರ್ತೃ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್. ಅವರ ಪ್ರೇರಣೆ, ನಿರಂತರ ಪ್ರೋತ್ಸಾಹದಿಂದಾಗಿ ಕೃತಿಯನ್ನು ಬರೆಯಲು ತಮಗೆ ಸಾಧ್ಯವಾಯಿತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲೇಖಕಿ ನಾಗಶ್ರೀ ತ್ಯಾಗರಾಜ್ ದಂಪತಿ ಮತ್ತು ವಾಗ್ಮಿ ವೀಣಾ ಬನ್ನಂಜೆ ಅವರನ್ನು ವಿವಿಧ ಸಂಘ ಸಂಸ್ಥೆ ಗಳಿಂದ ಸನ್ಮಾನಿಸಲಾಯಿತು. ಅಳಸಿಂಗ ಪೆರುಮಾಳ್ ಅವರ ಮರಿ ಮಗ ಕಣ್ಣನ್ ಹಾಗೂ ಅವರ ಕುಟುಂಬದವರನ್ನು ಪುಸ್ತಕ ಹೊರ ತರಲು ಸಹಕರಿಸಿದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್. ಉದ್ಯಮಿ ಕಾಡಶೆಟ್ಟಿಹಳ್ಳಿ ಶ್ರೀನಿವಾಸ್ ಪದ್ಮ ಚರಣ್ ಉಪಸ್ಥಿತರಿದ್ದರು.

21 ಕೆಸಿಕೆಎಂ 7ಚಿಕ್ಕಮಗಳೂರಿನ ಓಂಕಾರೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಾಗ್ಮಿ ವೀಣಾ ಬನ್ನಂಜೆ ಅವರು ನಾಗಶ್ರೀ ತ್ಯಾಗರಾಜ್ ಬರೆದಿರುವ ಚಿಕ್ಕಮಗಳೂರು ಟು ಚಿಕಾಗೋ ಕೃತಿ ಲೋಕಾರ್ಪಣೆ ಮಾಡಿದರು.