ಪಾಲಿಕೆ ವ್ಯಾಪ್ತಿಯಲ್ಲೀಗ ಪಿಐಡಿ ಸಮೀಕ್ಷೆ!

| Published : May 25 2024, 12:53 AM IST

ಸಾರಾಂಶ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಮೊದಲು 2.85 ಲಕ್ಷ ಆಸ್ತಿಗಳಿವೆ ಎಂದು ಅಂದಾಜಿದೆ. ಈಗ ಅವುಗಳ ಸಂಖ್ಯೆ 3.39 ಲಕ್ಷಕ್ಕೆ ಏರಿದೆ. ಆದರೆ ಸರಿಯಾಗಿ ತೆರಿಗೆ ಪಾವತಿ ಮಾತ್ರ ಮಾಡುವುದಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ಗುರುತಿಸುವಿಕೆ (ಪಿಐಡಿ- ಪ್ರಾಪರ್ಟಿ ಐಡಿಟೆಂಟಿ) ಸಮೀಕ್ಷೆ ಪ್ರಾರಂಭಿಸಿದೆ. ಏಳೆಂಟು ದಿನದಿಂದ ಈ ಸಮೀಕ್ಷೆ ಕಾರ್ಯ ಶುರುವಾಗಿದ್ದು, ಜೂನ್‌ 30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ತೆರಿಗೆ ತುಂಬದೇ ವಂಚಿಸುವವರನ್ನು ಸಲೀಸಾಗಿ ಪತ್ತೆ ಹಚ್ಚಿ ನೋಟಿಸ್‌ ನೀಡಲು ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಈ ಸಮೀಕ್ಷೆ ಫಲದಾಯಕವಾಗಲಿದೆ ಎಂಬ ನಿರೀಕ್ಷೆ ಪಾಲಿಕೆಯದ್ದು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಮೊದಲು 2.85 ಲಕ್ಷ ಆಸ್ತಿಗಳಿವೆ ಎಂದು ಅಂದಾಜಿದೆ. ಈಗ ಅವುಗಳ ಸಂಖ್ಯೆ 3.39 ಲಕ್ಷಕ್ಕೆ ಏರಿದೆ. ಆದರೆ ಸರಿಯಾಗಿ ತೆರಿಗೆ ಪಾವತಿ ಮಾತ್ರ ಮಾಡುವುದಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿರುವ 3.39 ಲಕ್ಷ ಆಸ್ತಿಗಳಿಂದ ಪ್ರತಿವರ್ಷ ಕನಿಷ್ಠವೆಂದರೂ ₹ 250 ಕೋಟಿ ಆಸ್ತಿ ಸಂಗ್ರಹಿಸಬಹುದಾಗಿದೆ. ಆದರೆ ಎಷ್ಟೇ ಶ್ರಮ ಪಟ್ಟರೂ ₹ 100 ಕೋಟಿ ತೆರಿಗೆ ಸಂಗ್ರಹ ಕೂಡ ಆಗುತ್ತಿಲ್ಲ. ಹೀಗಾಗಿ ಆಸ್ತಿ ಗುರುತಿಸುವಿಕೆ ಸಮೀಕ್ಷೆಯನ್ನು ಮಹಾನಗರ ಪಾಲಿಕೆ ಪ್ರಾರಂಭಿಸಿದೆ.

ಏನು ಕಾರಣ?

ಪಿಐಡಿ ಎಂದರೆ ಪ್ರಾಪರ್ಟಿ ಐಡಿಟೆಂಟಿ. ಆಸ್ತಿಗಳಿಗೆಲ್ಲ ಪಿಐಡಿ ಇರುತ್ತದೆ. ಆದರೆ ಕೆಲವೊಂದಿಷ್ಟು ಆಸ್ತಿಗಳಿಗೆ ಪಿಐಡಿಗಳೇ ಇರುವುದಿಲ್ಲ. ಅವು ತೆರಿಗೆ ಜಾಲದಲ್ಲಿರುವುದಿಲ್ಲ. ಉದಾಹರಣೆಗೆ ಮಾಲೀಕನೊಬ್ಬ ಮೊದಲಿಗೆ ಒಂದು ಮನೆ ಕಟ್ಟಿಸಿಕೊಂಡಿರುತ್ತಾನೆ. ಅದಕ್ಕೆ ಪಿಐಡಿ ಇರುತ್ತದೆ. ಆ ಮನೆಯ ಮೇಲೊಂದು ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟಿರುತ್ತಾನೆ. ಅದಕ್ಕೆ ಪಿಐಡಿ ಇರುವುದಿಲ್ಲ. ಸಮೀಕ್ಷೆಗೆ ಹೋದ ಸಮಯದಲ್ಲಿ ಹೊಸ ಮನೆ ಕಟ್ಟಿಸಿಕೊಂಡಿರುವುದು ಬೆಳಕಿಗೆ ಬರುತ್ತದೆ. ಅದಕ್ಕೂ ಹೊಸ ಪಿಐಡಿ ಬರೆದು ಬರಲಾಗುತ್ತದೆ. ಮುಂದೆ ಆ ಆಸ್ತಿಯೂ ತೆರಿಗೆ ಜಾಲಕ್ಕೆ ಸೇರುತ್ತದೆ. 66 ಜನ ಬಿಲ್‌ ಕಲೆಕ್ಟರ್‌ಗಳು ಪಾಲಿಕೆಯಲ್ಲಿದ್ದಾರೆ. ಅವರೆಲ್ಲರೂ ಈ ಸಮೀಕ್ಷೆ ಕೆಲಸದಲ್ಲಿ ನಿರತವಾಗಿದ್ದಾರೆ. ಕಳೆದ ಎಂಟ್ಹತ್ತು ದಿನಗಳಿಂದ ಸಮೀಕ್ಷೆ ನಡೆಯುತ್ತಿದ್ದು, ಜೂ. 30ರ ವರೆಗೆ ಮುಂದುವರಿಯಲಿದೆ ಎಂದು ಪಾಲಿಕೆ ತಿಳಿಸಿದೆ.

ಈ ಸಮೀಕ್ಷೆ ಪೂರ್ಣ ಮುಗಿದ ಬಳಿಕ ಪಾಲಿಕೆಯಲ್ಲಿ ಒಟ್ಟಾರೆ ಎಷ್ಟು ಆಸ್ತಿಗಳಿವೆ. ಎಷ್ಟು ತೆರಿಗೆ ಬರುವುದು ಬಾಕಿಯಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಆಸ್ತಿಗಳು ಬರುತ್ತವೆ ಎಂಬುದರ ಲೆಕ್ಕ ಪಕ್ಕಾ ಆಗುತ್ತದೆ. ಆ ಲೆಕ್ಕದ ಆಧಾರದ ಮೇಲೆ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ತೆರಿಗೆ ಪಾವತಿಸುವಂತೆ ಸೂಚಿಸಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿ ವರ್ಗ ತಿಳಿಸುತ್ತದೆ.

ಒಟ್ಟಿನಲ್ಲಿ ಪಾಲಿಕೆ ಆಸ್ತಿಗಳ ಸಮೀಕ್ಷೆ ನಡೆಸುತ್ತಿದ್ದು, ಈ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಇದಾದ ಬಳಿಕ ಎಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಪಾಲಿಕೆ ವ್ಯಾಪ್ತಿಯಲ್ಲಿ 3.39 ಲಕ್ಷ ಆಸ್ತಿಗಳಿವೆ. ಎಲ್ಲ ಆಸ್ತಿಗಳ ಮೇಲೆ ಪಿಐಡಿ ನಂಬರ್‌ ನಮೂದಿಸಲಾಗುತ್ತಿದೆ. ಇದರಿಂದ ಹೊಸ ಆಸ್ತಿಗಳ ಲೆಕ್ಕವೂ ಸಿಕ್ಕು ತೆರಿಗೆ ಜಾಲದಲ್ಲಿ ಸೇರುತ್ತದೆ. ತೆರಿಗೆ ವಸೂಲಾತಿಗೆ ಇದು ಅನುಕೂಲವಾಗಲಿದೆ. ಪಿಐಡಿ ರಚನೆಗಾಗಿ ವಿಶೇಷ ಡ್ರೈವ್‌ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಪಾಲಿಕೆಯಲ್ಲಿನ 66 ಬಿಲ್ ಕ್ಲರ್ಕಗಳು ಮತ್ತು ಇತರ ಸಿಬ್ಬಂದಿಗೆ ಪಿಐಡಿ ಸಂಖ್ಯೆಗಳ ಪಟ್ಟಿ ನೀಡಲಾಗಿದೆ, ಅದರ ಆಧಾರದ ಮೇಲೆ ಅವರು ಸಮೀಕ್ಷೆ ನಡೆಸುತ್ತಿದ್ದಾರೆ. ಅಕ್ರಮವೇ ಇರಲಿ, ಸಕ್ರಮವೇ ಇರಲಿ ಎಲ್ಲ ಆಸ್ತಿಗಳ ಮೇಲೆ ಪಿಐಡಿ ಸಂಖ್ಯೆ ನಮೂದಿಸಲಾಗುತ್ತಿದೆ ಎಂದು ಆನಂದ ಕಲ್ಲೋಳಿಕರ್‌ ಹೇಳಿದರು.