ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬಹುತ್ವ ಭಾರತದ ಆಭರಣ, ವೈವಿಧ್ಯತೆ ಭಾರತದ ಶಕ್ತಿ ಎಂದು ಸಾಹಿತಿ ಡಾ. ಎಚ್.ಎಂ. ರುದ್ರಸ್ವಾಮಿ ಅವರು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿರುವ ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ತಾಲೂಕು ಸಾಹಿತ್ಯಾವಲೋಕನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾಹಿತ್ಯಲೋಕಕ್ಕೆ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ಪತ್ತೇದಾರಿ ಕಾದಂಬರಿ ಮೂಲಕ ಹೆಸರು ಮಾಡಿದ ಎಚ್. ನರಸಿಂಹಯ್ಯ ನಗರದ ಶಂಕರಪುರ ಬಡಾವಣೆಯಲ್ಲಿ ವಾಸವಾಗಿದ್ದರು. ಎಲ್ಲ ರೀತಿಯ ಬರವಣಿಗೆಯಲ್ಲಿ ಜಿಲ್ಲೆಯ ಪಾಲಿದೆ ಎಂದರು.ಕನ್ನಡದ ಹಿರಿಮೆಗೆ ಧಕ್ಕೆಯಾಗಬಾರದು. ಕನ್ನಡದ ಸಾರ್ವಭೌಮತ್ವ ಕನ್ನಡಿಗರಿಗೆ ಬೇಕು. ಕೇಂದ್ರ ಗೃಹ ಸಚಿವರು ದೇಶವನ್ನೆ ಹಿಂದಿಮಯ ಮಾಡಲು ಹೊರಟಿರುವುದು ಒಪ್ಪಲಾಗದು. ಅಪೂರ್ವ ವಜ್ರಗಳು ಕನ್ನಡದಲ್ಲಿ ಇದ್ದು ಆಯ್ದುಕೊಂಡಿದ್ದೇವೆ. ಕನ್ನಡವೂ ಹಿಂದಿಯಂತೆಯೇ ರಾಷ್ಟ್ರೀಯಭಾಷೆ ಎಂಬುದನ್ನು ಮರೆಯಲಾಗದು ಎಂದು ತಿಳಿಸಿದರು.ಕನ್ನಡ ಅನೇಕ ಕ್ಷೇತ್ರಗಳಲ್ಲಿ ಮರೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ಕಲಾಪಗಳು ಮತ್ತು ತೀರ್ಪುಗಳು ಬಹುತೇಕ ಇಂಗ್ಲೀಷ್‌ನಲ್ಲೆ ಇರುತ್ತದೆ. ಕಾವೇರಿ ನದಿನೀರಿನ ವಿವಾದ ಕುರಿತಂತೆ ಕರ್ನಾಟಕದ ಪರವಾಗಿ ವಾದ ಮಾಡುವ ನಮ್ಮವರಿಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ನಾರಿಮನ್ ಅವರಿಗೆ ನಿಮಿಷಕ್ಕೆ ಒಂದು ಲಕ್ಷ ರೂ. ನೀಡಿದ್ದೇವೆ ಎಂದರು.
ಶ್ರೇಷ್ಠ ನ್ಯಾಯಾಲಯದಲ್ಲೂ ಇಂಗ್ಲೀಷ್ ಪ್ರಧಾನ ಭಾಷೆಯಾಗಿದೆ. ಇದರಿಂದ ಫಿರ್ಯಾದಿಗಳಿಗೆ ಅನ್ಯಾಯವೂ ಆಗುತ್ತಿದೆ ಎಂದ ಡಾ. ರುದ್ರಸ್ವಾಮಿ, ಇಂಗ್ಲೀಷ್-ಕನ್ನಡ ಅನುವಾದಕರ ಕೊರತೆ ಇದೆ. ಅನೇಕ ಸಂದರ್ಭಗಳಲ್ಲಿ ತಪ್ಪು ಅನುವಾದಕ್ಕೂ ಆಸ್ಪದವಾಗುತ್ತದೆ ಎಂದು ತಿಳಿಸಿದರು.ಏಕಭಾಷೆ ಮತ್ತು ಏಕಸಂಸ್ಕೃತಿ ಹೇರಿಕೆಯ ಪ್ರಯತ್ನಗಳು ಸಾಕಷ್ಟು ನಡೆಯುತ್ತಿರುವುದು ಆತಂಕದಾಯಕ. ಹಿಂದಿನಿಂದಲೂ ಬಹುತ್ವದ ಸಂಸ್ಕೃತಿ ಈ ನೆಲದ್ದು. ಬಹುತ್ವ ಭಾರತದ ಆಭರಣ. ವೈವಿಧ್ಯತೆಯೆ ಭಾರತದ ಶಕ್ತಿ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಸಮ್ಮೇಳನಾಧ್ಯಕ್ಷರು ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದನ್ನು ಶ್ಲಾಘಿಸಿದ ಡಾ. ರುದ್ರಸ್ವಾಮಿ, ಕನ್ನಡದ ಅಭಿಮಾನ ನಮ್ಮದಾಗಬೇಕೆಂದರು. ಹಿರಿಯ ವಕೀಲ ಎಚ್.ಸಿ. ನಟರಾಜ್ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಲೋಕಕ್ಕೆ ತಾಲೂಕಿನ ಕೊಡುಗೆ ಸ್ಮರಣೀಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರಲು ನಿರಂತರ ಪ್ರಯತ್ನ ನಡೆದಿದ್ದು, ನಮ್ಮ ಬದ್ಧತೆಯೂ ಅಗತ್ಯವಿದೆ ಎಂದರು. "ಆಧುನಿಕ ಕನ್ನಡ ಸಾಹಿತ್ಯದ ಮೊದಲು ತಲೆಮಾರು " ಕುರಿತಂತೆ ಮಾತನಾಡಿದ ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್, ಕನ್ನಡದ ಅಶ್ವಿನಿ ದೇವತೆಗಳೆಂದು ಗುರುತಿಸಲ್ಪಟ್ಟ ಎ.ಆರ್. ಕೃಷ್ಣಶಾಸ್ತ್ರಿ ಅಂಬಳೆಯಲ್ಲಿ ಹುಟ್ಟಿ ಮಹತ್ವದ ಕೆಲಸ ಮಾಡಿದ್ದು, ಅವರಿಂದಲೇ ಆಧುನಿಕ ಸಾಹಿತ್ಯ ಗುರುತಿಸಬಹುದು. ಕೂದುವಳ್ಳಿಯ ಅಶ್ವಥ್, ಕಥೆಗಾರ ಆನಂದ್ ಕಥೆಗಳ ಮೂಲಕವೇ ಗಮನ ಸೆಳೆಯುತ್ತಾರೆ. ಹತ್ತು ನಾಟಕಗಳನ್ನು ರಚಿಸಿದ ವೆಂಕಟರಾಮು ಮರ್ಲೆಯವರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಬುದ್ಧಚರಿತ ಮಹಾಮಧು ಮಹಾಕಾವ್ಯ ರಚಿಸಿದ ಕಾಶಿವಿಶ್ವನಾಥ ಶೆಟ್ಟರು ಇಲ್ಲೆ ನೆಲೆಸಿದವರು. ತಾಲೂಕಿನಲ್ಲೆ ಹುಟ್ಟಿ ಮೂಡಿಗೆರೆ ಸೇರಿದ ಮಲ್ಲಿಗೆ ಕಡಿದಾಳ್ ಅವರ ವಿವೇಕ ವಿಜಯ ಮಹತ್ವದ ಕೃತಿ ಎಂದು ಪಟ್ಟಿ ಮಾಡಿದ ಮಂಜುನಾಥ್, ಆ ಕಾಲಘಟ್ಟದ ಸರಿಸಮಾನವಾದ ಸಾಹಿತ್ಯ ಈವರೆಗೂ ಜಿಲ್ಲೆಯಲ್ಲಿ ಸೃಷ್ಟಿಯಾಗಿಲ್ಲ ಎಂದು ನುಡಿದರು.ಕೊಪ್ಪದ ಸಾಹಿತಿ ಎಚ್.ಎಸ್. ಚಂದ್ರಕಲಾ ಆಶಯ ನುಡಿಗಳನ್ನಾಡಿದರು. ತರೀಕೆರೆ ಇಬ್ರಾನ್ ಅಹಮ್ಮದ್ ಬೇಗ್, ತಾಲೂಕು ಮಾಜಿ ಅಧ್ಯಕ್ಷರಾದ ಬಿ.ಆರ್. ಜಗದೀಶ್, ತರೀಕೆರೆ ನವೀನ್ ಪೆನ್ನಯ್ಯ, ಮೂಡಿಗೆರೆಯ ಶಾಂತಕುಮಾರ್ ವೇದಿಕೆಯಲ್ಲಿದ್ದರು. ಲಕ್ಯಾ ಹೋಬಳಿ ಕಸಾಪ ಅಧ್ಯಕ್ಷ ಶಿವನಂಜೇಗೌಡ ನಿರೂಪಿಸಿದರು. ಜಯಶೀಲ ನಿರ್ವಹಿಸಿದ್ದು, ಶಿವನಂಜಪ್ಪ ವಂದಿಸಿದರು.