ಐ.ಎನ್.ಸಿ ಅಲ್ಲ ಪಿ.ಎನ್.ಸಿ: ಸಿ.ಟಿ. ರವಿ ಲೇವಡಿ

| Published : May 23 2025, 12:47 AM IST

ಸಾರಾಂಶ

ಗಲಭೆ ಕೋರರಿಗೆ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ ಎಂಬ ಮನಸ್ಥಿತಿ ಇದೆ. ಹುಬ್ಬಳಿ ಗಲಭೆ ಕೋರರು, ಉದಯಗಿರಿ ಪೊಲೀಸ್ಠಾಣೆ ದಾಳಿ ಕೋರರಿಗೆ ನಮ್ಮ ಸರ್ಕಾರ ಎಂಬ ಭಾವನೆಯನ್ನು ಹುಬ್ಬಳ್ಳಿ ಗಲಭೆ ಕೋರರ ಪ್ರಕರಣ ಹಿಂದೆಗೆದುಕೊಂಡು ತೋರಿಸಿಕೊಟ್ಟಿದ್ದಾರೆ. ಈಗ ಅವರಿಗೆ ರಾಜಾಶ್ರಯ ಎಂದರು.

ಕನ್ನಡಪ್ರಭ ವಾರ್ತೆ ಮೈಸೂರುಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ (ಐ.ಎನ್.ಸಿ) ನ ವರ್ತನೆ ಪಾಕಿಸ್ತಾನ್ ನ್ಯಾಷನಲ್‌ ಕಾಂಗ್ರೆಸ್‌ (ಪಿ.ಎನ್.ಸಿ) ರೀತಿ ಇದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂತಾದವರ ಹೇಳಿಕೆಯನ್ನೇ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನೀಯರಿಗೆ ಅವರ ನಾಯಕರ ಮೇಲೆ ವಿಶ್ವಾಸವಿಲ್ಲ. ಅವರಿಗೆ ಇರುವ ಏಕೈಕ ಭರವಸೆ ರಾಹುಲ್ ಗಾಂಧಿ ಮೇಲೆ. ರಾಹುಲ್ಗಾಂಧಿಗೆ ಯಾವಾಗ, ಎಲ್ಲಿ, ಏನು ಹೇಳಬೇಕು ಎಂಬ ಪರಿಜ್ಞಾನ ಇದ್ದಿದ್ದರೆ ಕಾಂಗ್ರೆಸ್ ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಜರಿದರು.ಸಿದ್ದರಾಮಯ್ಯ ಹೇಳಿಕೆ ಕೂಡ ಪಾಕಿಸ್ತಾನಲ್ಲಿ ಫ್ಲಾಷ್ ನ್ಯೂಸ್. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೋ, ಬಿಡುತ್ತದೋ, ಆದರೆ ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ ತುಂಬಾ ಪ್ರಖ್ಯಾತರಾಗಿದ್ದಾರೆ. ಮೋದಿ ಅವರನ್ನು ಮೋದಿ ಎಂದರೆ, ಸಿದ್ದರಾಮಯ್ಯ ಅವರನ್ನು ಸಿದ್ದರಾಮಯ್ಯಜೀ ಎಂದು ಕರೆಯುತ್ತಾರೆ. ಇವರ ಹೇಳಿಕೆಯ ತುಣಕನ್ನೇ ಬಳಸಿಕೊಂಡು ಭಾರತದ ವಿರುದ್ಧ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನ ವಾದಿಸುತ್ತಿದೆ ಎಂದು ಕೆಂಡಾಮಂಡಲರಾದರು.ಗಲಭೆ ಕೋರರಿಗೆ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ ಎಂಬ ಮನಸ್ಥಿತಿ ಇದೆ. ಹುಬ್ಬಳಿ ಗಲಭೆ ಕೋರರು, ಉದಯಗಿರಿ ಪೊಲೀಸ್ಠಾಣೆ ದಾಳಿ ಕೋರರಿಗೆ ನಮ್ಮ ಸರ್ಕಾರ ಎಂಬ ಭಾವನೆಯನ್ನು ಹುಬ್ಬಳ್ಳಿ ಗಲಭೆ ಕೋರರ ಪ್ರಕರಣ ಹಿಂದೆಗೆದುಕೊಂಡು ತೋರಿಸಿಕೊಟ್ಟಿದ್ದಾರೆ. ಈಗ ಅವರಿಗೆ ರಾಜಾಶ್ರಯ ಎಂದರು.ರಾಹುಲ್ಗಾಂಧಿಗೆ ಕರ್ನಾಟಕವೇ ಎಟಿಎಂ. ಅವರ ಇಷ್ಟಾನಿಷ್ಟಕ್ಕೆ ಈಗ ಕರ್ನಾಟಕವೇ ಆಧಾರವಾಗಿದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ವರಿಷ್ಠರು ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಲೇ ಬೇಕು. ಸಿದ್ದರಾಮಯ್ಯ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇರುವಷ್ಟು ದಿನ ಪರ್ಸನಲ್ ಟಾರ್ಗೆಟ್ ಮುಟ್ಟಲು ಮುಂದಾಗುತ್ತಿದ್ದಾರೆ ಎಂದು ಟೀಕಿಸಿದರು.