ರಾಜಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ

| N/A | Published : Aug 15 2025, 01:00 AM IST

ಸಾರಾಂಶ

ಮಾಜಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದನ್ನು ವಿರೋಧಿಸಿ ತಾಲೂಕಿನ ವಾಲ್ಮೀಕಿ ನಾಯಕ ಹಾಗೂ ಇತರೆ ದಲಿತ ಮತ್ತು ರೈತಪರ ಸಂಘಟನೆಗಳಿಂದ ಗುರುವಾರ ಪಟ್ಟಣದಲ್ಲಿ ರಸ್ತೆ ತಡೆ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

 ಪಾವಗಡ :  ಮಾಜಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದನ್ನು ವಿರೋಧಿಸಿ ತಾಲೂಕಿನ ವಾಲ್ಮೀಕಿ ನಾಯಕ ಹಾಗೂ ಇತರೆ ದಲಿತ ಮತ್ತು ರೈತಪರ ಸಂಘಟನೆಗಳಿಂದ ಗುರುವಾರ ಪಟ್ಟಣದಲ್ಲಿ ರಸ್ತೆ ತಡೆ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಾವಿರಾರು ಸಂಖ್ಯೆಯ ವಾಲ್ಮೀಕಿ ನಾಯಕ ಇತರೆ ಸಮುದಾಯದ ಮುಖಂಡರು ಜಮಾಯಿಸಿ, ಪಟ್ಟಣದ ಬಳ್ಳಾರಿ ರಸ್ತೆ ಮೂಲಕ ಪ್ರತಿಭಟನೆ ಮೆರವಣಿಗೆ ತೆರಳಿ ಘೋಷಣೆ ಮೊಳಗಿಸುವುದರೊಂದಿಗೆ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದರು.

ನಗರದ ಶ್ರೀಶನೇಶ್ವರಸ್ವಾಮಿ ವೃತ್ತದ ಬಳಿ ಮಾನವ ಸರಪಳಿ ನಡೆಸಿ, ರಾಜಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಸಚಿವ ಸ್ಥಾನದಿಂದ ವಜಾಗೊಳಿಸಿದ್ದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಆರೋಪಿಸಿ ಚಳ್ಳಕರೆ ರಸ್ತೆ ಮಾರ್ಗದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಕಿಡಿಕಾರಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ಕೆಒಎಫ್‌ ನಿರ್ದೇಶಕ ಹಾಗೂ ನಾಯಕ ಸಮಾಜದ ಹಿರಿಯ ಮುಖಂಡ ಕೋಟಗುಡ್ಡ ಅಂಜಪ್ಪ ಮಾತನಾಡಿ, ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ರಾಜಕೀಯ ಕುತಂತ್ರದ ಭಾಗವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ರಾಜಣ್ಣ ಅವರ ಕೊಡುಗೆ ಅಪಾರವಾಗಿದೆ. ಅವರನ್ನು ರಾಜಕೀಯವಾಗಿ ತುಳಿಯುವ ಸಲುವಾಗಿ ಸಚಿವ ಸ್ಥಾನದಿಂದ ಕೈಬಿಡಲಾಗಿದೆ.ಇದನ್ನು ತಾಲೂಕಿನ ನಾಯಕ ಸಮಾಜ ಹಾಗೂ ಇತರೆ ಸಮುದಾಯಗಳು ಉಗ್ರವಾಗಿ ಖಂಡಿಸುತ್ತವೆ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ಪೂಜಾರಪ್ಪ ಮಾತನಾಡಿ, ಕೆ.ಎನ್‌.ರಾಜಣ್ಣ ರೈತ ಹಾಗೂ ಜನಪರ ನಾಯಕರಾಗಿದ್ದು ಉತ್ತಮ ಆಡಳಿತ ನೀಡಿದ್ದಾರೆ. ಅವರನ್ನು ರಾಜಕೀಯವಾಗಿ ಕುಗ್ಗಿಸುವ ಹಿನ್ನಲೆಯಲ್ಲಿ ಸಚಿವ ಸ್ಥಾನದಿಂದ ವಜಾಗೊಳಿಸಿದ್ದು ಅತ್ಯಂತ ನೋವು ತಂದಿದೆ. ಕೂಡಲೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ಕೆ.ಎನ್‌.ರಾಜಣ್ಣ ಜಿಲ್ಲೆಯಲ್ಲಿ ಒಂದು ದೊಡ್ಡಶಕ್ತಿ ಇದ್ದಂತೆ, ಸಂಪುಟದಿಂದ ವಜಾಗೊಳಿಸಿದ್ದು ಸರಿಯಲ್ಲ. ಕೊಡಲೇ ಸಚಿವ ಸ್ಥಾನ ಕಲ್ಪಿಸಿ ರೈತರ ಪ್ರಗತಿಗೆ ಸಹಕರಿಸುವಂತೆ ಆಗ್ರಹಿಸಿದರು.

ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ, ಅನ್ಯಾಯ ಸರಿಪಡಿಸುವ ಮೂಲಕ ರಾಜಣ್ಣರನ್ನು ಸಚಿವ ಸ್ಥಾನದಿಂದ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ನಿಡಗಲ್ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ಸಂಜಯ್ ಕುಮಾರ ಸ್ವಾಮೀಜಿ, ಬೆಂಗಳೂರು ಕೆ.ಆರ್‌.ಪುರಂ ಅಶ್ರಮದ ಈಶ್ವರಪ್ಪ ಸ್ವಾಮೀಜಿ ಪ್ರತಿಭಟನೆಯಲ್ಲಿ ಭಾಗವಹಿಸಿ ಕೆ.ಎನ್‌.ರಾಜಣ್ಣರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನರಸಿಂಹಲು,ಮುಖಂಡರಾದ ದೊಡ್ಡೇನಹಳ್ಳಿ ಶಿವಪ್ಪ, ಸೀತಾರಾಮಪ್ಪ, ರಾಜ್‌ಗೋಪಾಲ್‌, ನರಸಿಂಹ ಕೃಷ್ಣ,ನಾರಾಯಣಮೂರ್ತಿ, ಶ್ರೀನಿವಾಸ್, ಓಂಕಾರ್ ನಾಯಕ, ಕರವೇ ಲಕ್ಷ್ಮೀ ನಾರಾಯಣ, ಬ್ಯಾಡನೂರು ಶಿವು, ಮಣಿ, ಅಂಬಿಕಾ ರಮೇಶ್, ರಂಗಮ್ಮ ಶಿವಕುಮಾರ್, ಬಲರಾಮ್, ಬೇಕರಿ ನಾಗರಾಜ್, ನಾಗರಾಜು, ಸತ್ಯನಾರಾಯಣ್‌, ಬೇಕರಿ ನಾಗರಾಜ್‌, ಕನ್ನಮೇಡಿ ಸುರೇಶ್‌ ಇತರೆ ಅನೇಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Read more Articles on