ಕಳೆಪೆ ಆಹಾರ ಪೂರೈಕೆ, ಹಾಸ್ಟೆಲ್ ಎದುರು ಪ್ರತಿಭಟನೆ

| Published : May 23 2024, 01:00 AM IST / Updated: May 23 2024, 01:01 AM IST

ಸಾರಾಂಶ

ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಧಾರವಾಡ:

ವಿದ್ಯಾರ್ಥಿಗಳು ಊಟ ಮಾಡದಂತಹ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಹಾಗೂ ಆಹಾರ ತಯಾರಿಕೆಯಲ್ಲಿ ಸುರಕ್ಷಾ ಕ್ರಮ ಅನುಸರಿಸುತ್ತಿಲ್ಲ ಎಂದು ಇಲ್ಲಿಯ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರಕ್ಕೆ ಸಿದ್ಧಪಡಿಸಿದ ಆಹಾರವನ್ನು ವಸತಿ ನಿಲಯದ ಹೊರಗಿಟ್ಟು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕರರು, ಆಹಾರ ತಯಾರಿಕೆ ಮಾಡುವ ಸಿಬ್ಬಂದಿ ನಿರ್ಲಕ್ಷ್ಯ ಖಂಡನೀಯ. ಗುಣಮಟ್ಟದ ಆಹಾರ ನೀಡಲು ಹಾಗೂ ಸುರಕ್ಷಾ ಕ್ರಮಗಳ ಕುರಿತು ಪ್ರಶ್ನಿಸಿದರೇ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ದೂರಿದರು.

ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಸ್ಥಳಕ್ಕೆ ದೌಡಾಯಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಬಿ. ಸನ್ನೇರಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಹಾಸ್ಟೆಲ್‌ ವಾರ್ಡನ್ ಬದಲಾವಣೆ ಮಾಡುತ್ತೇವೆ. ಗುಣಮಟ್ಟದ ಆಹಾರ ವ್ಯವಸ್ಥೆ ಮಾಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಕೂಡಲೇ ಕ್ರಮಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ಮೊಟಕುಗೊಳಿಸಿದರು.