ಆಧುನಿಕತೆಯಿಂದ ತತ್ತರಿಸುತ್ತಿರುವ ಬಡವರ ಊಟಿ ಹಾಸನ

| Published : Jun 17 2024, 01:37 AM IST

ಆಧುನಿಕತೆಯಿಂದ ತತ್ತರಿಸುತ್ತಿರುವ ಬಡವರ ಊಟಿ ಹಾಸನ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ಊಟಿ ಆಗಿದ್ದ ಹಾಸನ ಇಂದು ಆಧುನಿಕತೆಯ ಹೆಸರಿನಲ್ಲಿ ತತ್ತರಿಸುತ್ತಿದೆ. ಕ್ರಿಮಿನಾಶಕಗಳ ಅವಲಂಬನೆಯಿಂದ ಪೋಷಕತೆಗಿಂತ ವಿಷಯುಕ್ತವೇ ಹೆಚ್ಚಾಗಿರುತ್ತದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಶಿವಶಂಕರ್ ಕಳವಳ ವ್ಯಕ್ತಪಡಿಸಿದರು. ಹಾಸನದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕೃಷಿ ವಿಜ್ಞಾನಿ ಶಿವಶಂಕರ್ ಅಭಿಮತ । ‘ತಾರಸಿ ಕೃಷಿ ಏಕೆ? ಹೇಗೆ?’ ವಿಚಾರ ಸಂಕಿರಣ, ಸಂವಾದ ।

ಕನ್ನಡಪ್ರಭ ವಾರ್ತೆ ಹಾಸನ

ಬಡವರ ಊಟಿ ಆಗಿದ್ದ ಹಾಸನ ಇಂದು ಆಧುನಿಕತೆಯ ಹೆಸರಿನಲ್ಲಿ ತತ್ತರಿಸುತ್ತಿದೆ. ತಿನ್ನುವ ಆಹಾರ ಈಗ ನೈಸರ್ಗಿಕವಾಗಿಲ್ಲ. ವ್ಯಾಪಾರದ ಕಾರಣಕ್ಕೆ ಕೃತಕವಾಗಿ ತಯಾರಿಸಿದ ಹೈಬ್ರಿಡ್ ತಳಿಗಳಾಗಿದ್ದು, ಅವು ಕ್ರಿಮಿನಾಶಕಗಳ ಅವಲಂಬನೆಯಿಂದ ಪೋಷಕತೆಗಿಂತ ವಿಷಯುಕ್ತವೇ ಹೆಚ್ಚಾಗಿರತ್ತದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಶಿವಶಂಕರ್ ಕಳವಳ ವ್ಯಕ್ತಪಡಿಸಿದರು.

ನಗರದ ವಿಜಯ ನಗರ ಬಡಾವಣೆಯ ಮಹಾತ್ಮಗಾಂದಿ ಉದ್ಯಾನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲೂಕು ಸಮಿತಿ, ಸ್ನೇಹ ಸಮ್ಮಿಲನ, ವಿಜಯನಗರ ಬಡಾವಣೆ ಕ್ಷೇಮಾಭವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಜಂಟಿಯಾಗಿ ಬಿಜಿವಿಎಸ್ ಸದಸ್ಯತ್ವ ಆಂದೋಲನದ ಅಂಗವಾಗಿ ‘ತಾರಸಿ ಕೃಷಿ ಏಕೆ? ಹೇಗೆ?’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ವೈಯುಕ್ತಿಕ ಆರೋಗ್ಯದ ಹಿತದೃಷ್ಠಿಯಿಂದ ಮನೆಯಂಗಳದಲ್ಲೇ ದೈನದಂದಿನ ಬದುಕಿಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಂಡು ಹೆಚ್ಚು ಪೋಷಕಯುಕ್ತ ಆಹಾರ ಪದಾರ್ಥವನ್ನು ಅಗ್ಗದ ದರದಲ್ಲಿ ಪಡೆಯಬಹುದು’ ಎಂದು ಹೇಳುತ್ತ ಹೆಚ್ಚಿನ ಇಳುವರಿಗಾಗಿ ಉಪಯೋಗಿಸುವ ರಸಗೊಬ್ಬರದಿಂದ ದೇಹದಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಸಿ ಅಂಗಳ ಕೃಷಿ ಉಪಯೋಗದ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು.

ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾರಸಿ ಕೃಷಿ ಪ್ರಯೋಗಶೀಲ ಕೃಷಿಕ ಡಾ ಮಂಜುನಾಥ್ ತಮ್ಮ ಮನೆಯ ತಾರಸಿ ಕೃಷಿ ಅನುಭವದ ಕುರಿತು ಮಾತನಾಡಿ, ‘ಕಳೆದ ೧೦ ವರ್ಷಗಳಲ್ಲಿ ನಾನು ತರಕಾರಿಗಳನ್ನು ಕೊಂಡಿಲ್ಲ. ಪ್ರತಿವರ್ಷ ಕನಿಷ್ಠ ೫ ರಿಂದ ೧೦ ಸಾವಿರ ರು.ತರಕಾರಿಗಾಗಿ ವ್ಯಯಿಸುವುದನ್ನು ಉಳಿಸಿದ್ದೇನೆ. ನಮ್ಮ ತಾರಸಿಯಲ್ಲಿ ಬೆಳೆದ ತರಕಾರಿಗಳನ್ನು ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ಹಂಚಿದ್ದೇನೆ. ತಾರಸಿ ಕೃಷಿಯಿಂದ ಪ್ರತಿನಿತ್ಯ ತರಕಾರಿ ಹಣದುಬ್ಬರದಿಂದ ಪಾರಾಗಿ ಸ್ವಚ್ಛ, ಪೋಷಕಯುಕ್ತ ತರಕಾರಿ ತಿನ್ನಬಹುದು, ಮನೆಯ ಮೇಲೆ ಹಸಿರು ತರಕಾರಿ ಗಿಡಗಳು ನಳನಳಿಸುವುದರಿಂದ ಮನೆ ತಂಪಾಗಿ ಬಿಸಿಲ ಬೇಗೆಯನ್ನು ತಣಿಸುತ್ತದೆ, ದೇಹಕ್ಕೆ ವ್ಯಾಯಾಮ ಮತ್ತು ಆನಂದ ತರುತ್ತದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದವರ ಕುತೂಹಲಕಾರಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಂವಾದದಲ್ಲಿ ಪಾಲ್ಗೊಂಡರು.

ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ, ‘ಭೂಮಿ ಇಂದು ಎದುರಿಸುತ್ತಿರುವ ಪರಿಸರ ಸಮಸ್ಯೆಗೆ ಈ ನೆಲದ ಪ್ರತಿಯೊಬ್ಬ ನಾಗರಿಕ ನೀಡುವ ಕೊಡುಗೆ ಎಂದರೆ ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಕ್ಕೆ ಮನೆಯಲ್ಲೇ ವೈಜ್ಞಾನಿಕವಾಗಿ ಕಸದಿಂದ ರಸ ಮಾಡುವ ಪರಿಜ್ಞಾನ ಬೆಳೆಸಿಕೊಳ್ಳುವುದಾಗಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದಲ್ಲಿ ಶೇಕಡ ೬೫ ಜೈವಿಕವಾಗಿ ಕರಗುವಂತಹದ್ದು. ಇವುಗಳನ್ನು ಮನೆಯಲ್ಲೇ ಒಂದು ಬಕೆಟ್ ಅಥವಾ ಚೀಲದ ಮೂಲಕ ಸಾವಯವ ಗೊಬ್ಬರ ಮೂಲಕ ಮನೆಯ ಅಂಗಳದಲ್ಲಿ ನಾಲ್ಕೈದು ಪಾಟ್ ಇಟ್ಟು ಅಂಗಳ ಕೃಷಿ ಮಾಡಿ ಪೋಷಕ ಆಹಾರ ಪಡೆಯುವುದರ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದು’ ಎಂದು ಸಲಹೆ ನೀಡಿದರು.

ಎಚ್.ಟಿ. ಗುರುರಾಜ್‌, ರಾಷ್ಟ್ರೀಯ ಮಾನವಹಕ್ಕುಗಳ ಅಧ್ಯಕ್ಷ ಸೈಯ್ಯದ್ ಎಜಾಜ್, ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದೇಗೌಡ, ನಗರದ ನಾಗಕರು, ಪ್ರಮೀಳಾ, ತಾಲೂಕು ಸಮಿತಿ ಸದಸ್ಯರಾದ ಅರ್ಜುನ್ ಶೆಟ್ಟಿ, ಆಶಾ, ಜಾನಕಿ ಇದ್ದರು.

ಬಿಜಿವಿಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷೆ ರಾಧಾ ನಿರೂಪಿಸಿದರು. ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ವನಜಾಕ್ಷಿ ಸ್ವಾಗತಿಸಿದರು. ಸ್ನೇಹ ಸಮ್ಮಿಲನದ ಸರಳಾ ವಂದಿಸಿದರು.