ಕೈಕೊಟ್ಟ ಮಳೆ, ಬಣಗುಡುತ್ತಿರುವ ಕೆರೆಗಳು

| Published : Oct 18 2023, 01:00 AM IST

ಸಾರಾಂಶ

ತುಂಬಿ ತುಳುಕಾಡುತ್ತಿದ್ದ ಜಿಲ್ಲೆಯ ಪ್ರಮುಖ ಜಲಮೂಲವಾಗಿರುವ ಕೆರೆಗಳು ಈ ಸಲ ಬಣಗುಡುತ್ತಿವೆ. ಮಳೆ ಕೈಕೊಟ್ಟ ಪರಿಣಾಮ ಬಹುತೇಕ ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟವೂ ಇಳಿಕೆಯಾಗುತ್ತಿದೆ. ಇವು ಮುಂಬರುವ ಭೀಕರ ಬರಗಾಲದ ದಿನಗಳಿಗೆ ಸಾಕ್ಷಿಯಾಗುತ್ತಿವೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ತುಂಬಿ ತುಳುಕಾಡುತ್ತಿದ್ದ ಜಿಲ್ಲೆಯ ಪ್ರಮುಖ ಜಲಮೂಲವಾಗಿರುವ ಕೆರೆಗಳು ಈ ಸಲ ಬಣಗುಡುತ್ತಿವೆ. ಮಳೆ ಕೈಕೊಟ್ಟ ಪರಿಣಾಮ ಬಹುತೇಕ ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟವೂ ಇಳಿಕೆಯಾಗುತ್ತಿದೆ. ಇವು ಮುಂಬರುವ ಭೀಕರ ಬರಗಾಲದ ದಿನಗಳಿಗೆ ಸಾಕ್ಷಿಯಾಗುತ್ತಿವೆ.

ಜಿಲ್ಲೆಯಲ್ಲಿ ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಬರಗಾಲ ಆವರಿಸಿದೆ. ಬರ ಘೋಷಣೆಗೆ ಸರ್ಕಾರ ಮೀನಮೇಷ ಎಣಿಸಿದರೂ ವಾಸ್ತವಾಂಶ ಎಲ್ಲರ ಕಣ್ಣಿಗೆ ರಾಚುತ್ತಿದೆ. ಜಿಲ್ಲೆಯಲ್ಲಿ ನಾಲ್ಕು ನದಿಗಳು ಹರಿದಿದ್ದರೂ ಅವುಗಳಲ್ಲಿ ಈಗಲೇ ಹರಿವು ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ಕೆಲ ದಿನಗಳ ಕಾಲ ಭರ್ಜರಿ ಮಳೆಯಾಗಿದ್ದರಿಂದ ಕೆರೆಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಶೇಖರಣೆಯಾಗಿತ್ತು. ಆದರೆ, ಅಲ್ಲಿಂದ ಮುಂದೆ ಮಳೆಯಾಗದ್ದರಿಂದ ಕೆರೆಗಳು ಭರ್ತಿಯಾಗಲಿಲ್ಲ. ಬಿರು ಬೇಸಿಗೆಯ ದಿನಗಳು ಈಗಲೇ ಎದುರಾಗಿದ್ದರಿಂದ ಕೆರೆಗಳು ಬತ್ತುತ್ತಿವೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ (ಎಂಐ) ವ್ಯಾಪ್ತಿಯಲ್ಲಿ ಒಟ್ಟು ೨೬೪ ಕೆರೆಗಳಿದ್ದು, ಬಹುತೇಕ ಎಲ್ಲ ಕೆರೆಗಳು ಮಳೆ ನೀರನ್ನೇ ನೆಚ್ಚಿಕೊಂಡಿದ್ದರೆ, ಇನ್ನು ಕೆಲವು ಕೆರೆಗಳು ಏತ ನೀರಾವರಿ ಯೋಜನೆಯಲ್ಲಿ ನದಿ ನೀರನ್ನು ಅವಲಂಬಿಸಿವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆಯಿಲ್ಲದ್ದರಿಂದ ಜಿಲ್ಲೆಯ ಬಹುತೇಕ ಕೆರೆಗಳು ಬಣಗುಡತೊಡಗಿವೆ.

ಅರ್ಧದಷ್ಟೂ ನೀರಿಲ್ಲ:

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳು ದೊಡ್ಡ ಪ್ರಮಾಣದ ವಿಸ್ತೀರ್ಣ ಹೊಂದಿದ್ದು, ಬಹುತೇಕ ಕೆರೆಗಳು ಇನ್ನೂ ಒಡಲು ತುಂಬಿಕೊಂಡಿಲ್ಲ. ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ೧೧೨ ಕೆರೆಗಳಿದ್ದು ೧೪ ಕೆರೆಗಳು ಶೇ.೭೫ರಷ್ಟು, ೬೦ ಕೆರೆಗಳು ಶೇ.೫೦ರಷ್ಟು ಭರ್ತಿಯಾಗಿವೆ. ಇನ್ನುಳಿದ ೩೮ ಕೆರೆಗಳು ಭರ್ತಿಯಾಗಿವೆ. ಹಿರೇಕೆರೂರು ತಾಲೂಕಿನಲ್ಲಿ ೪೨ ಕೆರೆಗಳಿದ್ದು ೩೫ ಕೆರೆಗಳು ಶೇ.೫೦ರಷ್ಟು, ೭ ಕೆರೆಗಳು ಶೇ.೭೫ರಷ್ಟು ತುಂಬಿವೆ. ಸವಣೂರು ತಾಲೂಕಿನಲ್ಲಿ ೧೨ ಕೆರೆಗಳಿದ್ದು ಶೇ.೩೮ರಷ್ಟು ತುಂಬಿವೆ. ಶಿಗ್ಗಾಂವಿ ತಾಲೂಕಿನಲ್ಲಿ ೪೦ ಕೆರೆಗಳಿದ್ದು ೨೨ ಕೆರೆಗಳು ‍ಭರ್ತಿಯಾಗಿದ್ದರೆ, ೭ ಕೆರೆಗಳು ಶೇ.೭೫ರಷ್ಟು ಹಾಗೂ ೧೧ ಕೆರೆಗಳು ಕಾಲು ಭಾಗದಷ್ಟು ತುಂಬಿವೆ. ರಟ್ಟೀಹಳ್ಳಿ ತಾಲೂಕಿನಲ್ಲಿ ೭ ಕೆರೆಗಳಿದ್ದು ಶೇ.೪೦ರಷ್ಟು ತುಂಬಿವೆ. ಹಾವೇರಿ ತಾಲೂಕಿನಲ್ಲಿ ೧೪ ತೆರೆಗಳಿದ್ದು, ೬ ಕೆರೆಗಳು ಶೇ.5೦ರಷ್ಟು, ಮೂರು ಕೆರೆಗಳು ಶೇ.೪೦ರಷ್ಟು ಹಾಗೂ ೫ ಕೆರೆಗಳು ಶೇ.೩೦ರಷ್ಟು ಭರ್ತಿಯಾಗಿವೆ. ರಾಣಿಬೆನ್ನೂರ ತಾಲೂಕಿನಲ್ಲಿ ೧೪ ಕೆರೆಗಳಿದ್ದು ನಾಲ್ಕು ಕೆರೆಗಳು ಶೇ.೫೦ರಷ್ಟು, ೧೦ ಕೆರೆಗಳು ಶೇ.೩೦-೪೦ರಷ್ಟು ತುಂಬಿವೆ. ಬ್ಯಾಡಗಿ ತಾಲೂಕಿನಲ್ಲಿ ೨೩ ಕೆರೆಗಳಿದ್ದು ೮ ಕೆರೆಗಳು ಶೇ.೫೦ರಷ್ಟು, ೧೨ ಕೆರೆಗಳು ೪೦ರಷ್ಟು, ೩ ಕೆರೆಗಳು ಶೇ.೩೦ರಷ್ಟು ಮಾತ್ರ ಭರ್ತಿಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಈಗ ಅವೆಲ್ಲವೂ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಇವೆ. ಇದೇ ಸ್ಥಿತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲೂ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಕೆರೆಗಳು ಕೃಷಿಗೆ ಜೀವಾಳವಾಗಿವೆ. ಅಲ್ಲದೇ ಅಂತರ್ಜಲ ಕೂಡ ಕೆರೆಗಳನ್ನೇ ಅವಲಂಬಿಸಿದ್ದು, ಕೆರೆಗಳಲ್ಲಿ ನೀರಿದ್ದರೆ ಬೋರ್‌ವೆಲ್‌ಗಳು ಜೀವಂತವಾಗಿರುತ್ತವೆ. ಇಲ್ಲದಿದ್ದರೆ ಅವೂ ಜೀವ ಕಳೆದುಕೊಳ್ಳುತ್ತವೆ. ಈ ಸಲ ಈಗಾಗಲೇ ಅನೇಕ ಕೊಳವೆಬಾವಿಗಳು ಬತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಕೆರೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣ ವೆಚ್ಚ ಮಾಡುವ ಮೊದಲು ಅದರ ರಕ್ಷಣೆಗೆ ಕಾನೂನು ಜಾರಿಯಾಗಬೇಕು. ಒತ್ತುವರಿಯಾಗಿದ್ದರೆ ಮೊದಲು ಅದನ್ನು ತೆರವುಗೊಳಿಸುವ ಕಾರ್ಯವಾಗಬೇಕು. ಇಲ್ಲದಿದ್ದರೆ ಎಷ್ಟು ಹಣ ವೆಚ್ಚ ಮಾಡಿದರೂ ಪ್ರಯೋಜನವಿಲ್ಲ. ಕೆರೆ ತುಂಬಿಸುವ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸದಿದ್ದರೆ ಮುಂದಿನ ದಿನ ಕರಾಳವಾಗಲಿವೆ ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳ ಹೂಳೆತ್ತುವುದು ಸೇರಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಆದ್ಯತೆ ಮೇರೆಗೆ ಕೆರೆಗಳ ಹೂಳೆತ್ತುವುದು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಇಇ ಸಿ.ವಿ. ಹಾವನೂರ.