ಸಾರಾಂಶ
ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಾಡು-ನುಡಿಗೆ ಸಲ್ಲಿಸಿದ ಸೇವೆ, ಕನ್ನಡ ನಾಡಿನ ಹಿರಿಮೆಯನ್ನು ದೇಶ-ವಿದೇಶಗಳಲ್ಲಿ ಪಸರಿಸಿದ್ದನ್ನು ಹಲವು ಸ್ವಾಮೀಜಿಗಳು ಉಲ್ಲೇಖಿಸಿ ಪ್ರಶಂಸಿಸಿದರು.
ಎಚ್.ಡಿ.ದೇವೇಗೌಡ ಅಭಿನಂದನಾ ಸಮಿತಿಯಿಂದ ಭಾನುವಾರ ಸುಮ್ಮನಹಳ್ಳಿ ಜಂಕ್ಷನ್ ಸಮೀಪದ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿ’ ಪ್ರದಾನ ಸಮಾರಂಭವು ಈ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ವಿಶಾಲವಾದ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಮಂದಿ ಇದನ್ನು ಕಣ್ತುಂಬಿಕೊಂಡರು.
ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ದೆಹಲಿಯ ಕೆಂಪು ಕೋಟೆ ಮೇಲೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕನ್ನಡಿಗ ದೇವೇಗೌಡರು. ಇದು ನಮ್ಮೆಲ್ಲರಿಗೂ ಅಭಿಮಾನ ಉಂಟು ಮಾಡುತ್ತದೆ. ರಾಜಕೀಯ ಕ್ಷೇತ್ರದ ಧೃವತಾರೆಯಾಗಿದ್ದು ಸ್ಥಿತಪ್ರಜ್ಞೆಯಿಂದ ಸರಳ ಜೀವನದ ಮೂಲಕ ಇವರು ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ತುಮಕೂರಿನ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ನಾನು ಬೆಳೆಯುವುದಲ್ಲ, ಎಲ್ಲರನ್ನೂ ಬೆಳೆಸಿ ಅವರ ನಡುವೆ ನಾನು ಇರಬೇಕು’ ಎಂಬ ಮನೋಭಾವವನ್ನು ದೇವೇಗೌಡರು ಹೊಂದಿದ್ದಾರೆ. ಇದೇ ದೇವೇಗೌಡರ ಶಕ್ತಿಯಾಗಿದೆ. ಮೀಸಲಾತಿ ನೀಡುವ ಮೂಲಕ ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಕರು, ಶ್ರಮ ಜೀವಿಗಳಿಂದ ‘ಮಣ್ಣಿನ ಮಗ’:
ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದೇವೇಗೌಡರ ಬಗ್ಗೆ ಮಾತನಾಡಬೇಕೆಂದರೆ ಸಾಕಷ್ಟು ಹಿರಿತನ, ವ್ಯಕ್ತಿತ್ವ, ಅನುಭವ ಬೇಕು. ಪ್ರಾಂತ್ಯ, ಧರ್ಮ, ವರ್ಗಕ್ಕೆ ಅವರನ್ನು ಸೀಮಿತ ಮಾಡಬಾರದು. ಮಧ್ಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಡಿ.ಮಂಜುನಾಥ್, ಪರಿಶಿಷ್ಟ ವರ್ಗದ ತಿಪ್ಪೇಸ್ವಾಮಿ ಅವರನ್ನು ಸಚಿವರನ್ನಾಗಿಸಿ ಬೆಳೆಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ದೇವೇಗೌಡರು ಜೀವಂತ ದಂತಕತೆಯಾಗಿದ್ದು ‘ಮಣ್ಣಿನ ಮಗ’ ಎಂಬ ಪ್ರಶಸ್ತಿ ಕೃಷಿಕರು ಮತ್ತು ಶ್ರಮ ಜೀವಿಗಳು ನೀಡಿದ್ದಾಗಿದೆ ಎಂದು ಬಣ್ಣಿಸಿದರು.
ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಇದು ಅಭಿನಂದನಾ ಸಭೆಯಲ್ಲ, ಆತ್ಮಾವಲೋಕನದ ಸಭೆ. ಸಾಮಾನ್ಯ ವ್ಯಕ್ತಿಯೊಬ್ಬ ಅಸಮಾನ್ಯನಾದದ್ದಕ್ಕೆ ಸಾಕ್ಷಿ ಇಲ್ಲಿದೆ. ನಾವು ದೇವೇಗೌಡರ ಜನ್ಮ ಶತಮಾನೋತ್ಸವ ಆಚರಿಸಬೇಕು. 105 ಮೂಲ ವಸ್ತುಗಳು ಹೇಗೆ ಭೂಮಿಯಲ್ಲೇ ಸಿಗುತ್ತವೆಯೋ ಅದೇ ರೀತಿ ಸಮಾಜದಲ್ಲಿ ನೊಂದ ಜನರಿಗೆ ದೇವೇಗೌಡರು ತಾಯಿಯಾದರು-ತವರಾದರು ಎಂದು ಪ್ರಶಂಸಿಸಿದರು.
ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಅಭಿನಂದನಾ ಸಮಿತಿಯ ಅ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು.ದೇವೇಗೌಡರು ದೊಡ್ಡ ಆಲದ ಮರವಿದ್ದಂತೆ. ರಾಜಕಾರಣದಲ್ಲಿ ಊಹೆಗೂ ನಿಲುಕದಷ್ಟು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಗುರು-ಹಿರಿಯರ ಬಗ್ಗೆ ಅಪಾರ ಗೌರವ ಹೊಂದಿದ್ದು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
-ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ : ದೇಶದ ಪ್ರಧಾನಿ ಹುದ್ದೆಗೇರಿದ ಮೊದಲ ಕನ್ನಡಿಗ ದೇವೇಗೌಡರದು. ದೇವೇಗೌಡರು ಇಷ್ಟು ಎತ್ತರಕ್ಕೆ ಬೆಳೆಯಲು ತಾಯಿ-ತಂದೆಯ ಆಶೀರ್ವಾದವೂ ಪ್ರಮುಖ ಕಾರಣ. ಅವರ ಪತ್ನಿ ಚನ್ನಮ್ಮನವರ ಕೊಡುಗೆಯೂ ಮಹತ್ವದ್ದಾಗಿದೆ.
-ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠಛಾಯಾಚಿತ್ರ ಪ್ರದರ್ಶನ ಮುಂದುವರೆಸಿ
ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಾನು ಬೆಳೆದು ಬಂದ ದಾರಿಯ ಬಗ್ಗೆ ಇಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇದನ್ನು ಇನ್ನೂ ಎರಡ್ಮೂರು ದಿನ ಮುಂದುವರೆಸಬೇಕು ಎಂದು ಆಯೋಜಕರಲ್ಲಿ ಮನವಿ ಮಾಡಿದರು. ‘ಯಾವನೋ ಒಬ್ಬ ಹಳ್ಳಿ ಹುಡುಗ ಇಷ್ಟೆಲ್ಲ ಹೋರಾಡಿದ್ದಾನೆ ಎಂಬುದು ಇದನ್ನು ನೋಡಿದ ಜನರಿಗೆ ಗೊತ್ತಾಗುತ್ತದೆ’ ಎಂದು ಗೌಡರು ತಮ್ಮ ಮನದ ಮಾತು ಹೊರಹಾಕಿದರು.