ಸಾರಾಂಶ
ಪ್ರತಿಭಾ ಕಾರಂಜಿಯು ಕನಕಪುರದ ಕೋಡಿಹಳ್ಳಿ ಹೋಬಳಿಯ ಬನ್ನಿಮುಕ್ಕೋಡ್ಲು ಪ್ರೌಢಶಾಲಾ ಆವರಣದಲ್ಲಿ ನಡೆಯಿತು.
ಕನಕಪುರ : ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ಕಸ್ಟರ್ ಹಂತದ ಪ್ರತಿಭಾ ಕಾರಂಜಿ ಕೋಡಿಹಳ್ಳಿ ಹೋಬಳಿಯ ಬನ್ನಿಮುಕ್ಕೋಡ್ಲು ಪ್ರೌಢಶಾಲಾ ಆವರಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣ ಸಂಯೋಜಕ ರಂಗಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಲ್ಲಿ ರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಲಿದೆ. ಮಕ್ಕಳ ಪ್ರತಿಭೆಯನ್ನು ಬೆಳೆಸಿ ಪ್ರೋತ್ಸಾಹಿಸಬೇಕಾದದ್ದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬನ್ನಿಮುಕ್ಕೋಡ್ಲು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಿವಶಂಕರ್ ಮಾತನಾಡಿ, ಶಾಲಾ ಹಂತದಲ್ಲೇ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಬೆಳೆಯುವ ಸಿರಿ ಮೊಳಕೆಯಂತೆ ಅವರು ಭವಿಷ್ಯದಲ್ಲಿ ದೇಶದ ಆಸ್ತಿಗಳಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬನ್ನಿಮುಕ್ಕೋಡ್ಲು ಕ್ಲಸ್ಟರ್ ಹಂತದ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ 18ಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಕನ್ನಡ , ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳ ಕಂಠಪಾಠ, ಧಾರ್ಮಿಕ ಪಠಣ, ದೇಶಭಕ್ತಿ ಗೀತೆ, ಭಕ್ತಿ ಗೀತೆ, ಚಿತ್ರಕಲೆ, ಮಣ್ಣಿನಿಂದ ಮಾದರಿ ತಯಾರಿಕೆ, ಅಭಿನಯ ಗೀತೆ, ಆಶುಭಾಷಣ, ಪ್ರಬಂಧ ರಚನೆ, ಮಿಮಿಕ್ರಿ ಇನ್ನೂ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿ ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಿಕ್ಕರಾಜು, ಬನ್ನಿಮುಕ್ಕೋಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಾಗೂ ಆಲನತ್ತ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್ ಹಾಗೂ ಸುತ್ತಲಿನ ಗ್ರಾಮದ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಕ್ಲಸ್ಟರ್ ಸುತ್ತಮುತ್ತಲಿನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.