ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಮತ್ತೆ ಮುಂದುವರೆದಿದೆ. ಕೆಲವೆಡೆ ಸಾಧರಣ, ಹಲವೆಡೆ ಧಾರಕಾರ ಮಳೆ ಸುರಿದಿದೆ.

 ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಮತ್ತೆ ಮುಂದುವರೆದಿದೆ. ಕೆಲವೆಡೆ ಸಾಧರಣ, ಹಲವೆಡೆ ಧಾರಕಾರ ಮಳೆ ಸುರಿದಿದೆ.

ಚಿಕ್ಕಮಗಳೂರು, ಕೋಲಾರ, ತುಮಕೂರು, ಬೆಂಗಳೂರು, ಹುಬ್ಬಳ್ಳಿ, ಕೊಪ್ಪಳ, ಹಾವೇರಿ, ಗದಗ, ಉತ್ತರ ಕನ್ನಡ, ಗೋಕರ್ಣ, ಶಿರಸಿ, ವಿಜಯನಗರ, ಚಾಮರಾಜನಗರ ಸೇರಿದಂತೆ ವಿವಿಧೆಡೆ ಗುರುವಾರ ವರುಣನ ಆಗಮನವಾಗಿದೆ.

ಚಿಕ್ಕಮಗಳೂರಿನ ತರೀಕೆರೆ, ಕಡೂರು ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಕಲಬುರಗಿಯ ಕಮಲಾಪುರ, ವಾಡಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇನ್ನೂ ಕೊಪ್ಪಳ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ 2-3 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಗಂಗಾವತಿ ತಾಲೂಕಿನ ವಿವಿಧೆಡೆ, ಮುನಿರಾಬಾದ್‌ ಸುತ್ತಮುತ್ತ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ 6 ಸೆಂ.ಮೀ ಭರ್ಜರಿ ಮಳೆಯಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಸುರಿದ ಮಳೆ ಗಾಳಿಗೆ 14.57 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆ ನೆಲಕಚ್ಚಿದೆ. ಇನ್ನೂ 4 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ಕೂಡ್ಲಿಗಿ ತಾಲೂಕಿನಲ್ಲಿ ಎರಡು ಮನೆಗಳು ಉರುಳಿವೆ. ಹೊಸಪೇಟೆ ನಗರದ ಶ್ರೀ ಮಾರ್ಕಂಡೇಶ್ವರ ದೇವಾಲಯದ ಕಳಶ ಕಳಚಿ ಬಿದ್ದಿದೆ. ಹೊಸಪೇಟೆ ಹೊರವಲಯದಲ್ಲಿ ಮಂಗಳಮುಖಿಯರ 30ಕ್ಕೂ ಹೆಚ್ಚು ಗುಡಿಸಲುಗಳು ಗಾಳಿಗೆ ನೆಲಕ್ಕುರುಳಿವೆ.

ತುಮಕೂರಿನ ಪಾವಗಡ ತಾಲೂಕಿನಾದ್ಯಂತ 1 ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇನ್ನೂ ಹಾಸನದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ನೀರು ತುಂಬಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಗಾಳಿಗೆ ಮರ ಹಾಗೂ ಮರದ ಕೊಂಬೆ ಬಿದ್ದ ಕಾರು-ಬೈಕ್‌ ಜಖಂಗೊಂಡಿವೆ.

ಮಳೆ ಗಾಳಿಗೆ 20ಕ್ಕೂ ಅಧಿಕ ಮರಗಳು ಸಂಪೂರ್ಣವಾಗಿ ಧರೆಗುರುಳಿರುವ ವರದಿಯಾಗಿದೆ. ಇನ್ನೂ 50ಕ್ಕೂ ಅಧಿಕ ರೆಂಬೆಕೊಂಬೆ ಬಿದ್ದಿವೆ. ವಿದ್ಯುತ್‌ ಕಂಬಗಳು ಸಹ ಧರೆಗುರುಳಿವೆ. ರಾಜಾಜಿನಗರದಲ್ಲಿ ಮರ ಬಿದ್ದು, ಬೈಕ್‌ - ಕಾರು ಜಖಂಗೊಂಡಿವೆ. ಇದೇ ರೀತಿ ನಗರದ ವಿವಿಧ ಭಾಗದಲ್ಲಿ 6ಕ್ಕೂ ಅಧಿಕ ಕಾರು, ಬೈಕ್‌ ಆಟೋ ನಜ್ಜುಗುಜ್ಜಾಗಿವೆ.