ಡೆಂಘೀ ತಡೆಗೆ ಅಗತ್ಯ ಮುಂಜಾಗ್ರತೆ ಕ್ರಮ: ಅಪರ ಜಿಲ್ಲಾಧಿಕಾರಿ

| Published : Jun 24 2024, 01:30 AM IST

ಡೆಂಘೀ ತಡೆಗೆ ಅಗತ್ಯ ಮುಂಜಾಗ್ರತೆ ಕ್ರಮ: ಅಪರ ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯೊಂದಿಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು, ಡೆಂಘೀ ರೋಗ ತಡೆಗಟ್ಟಲು ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯೊಂದಿಗೆ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಮಳೆ ಆರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಡೆಂಘೀ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೊಳ್ಳೆಗಳನ್ನು ನಾಶಮಾಡಲು ಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆ ಉಪಯೋಗಿಸುವುದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ನೀರು ಶೇಖರಣೆಯಾಗುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮ ವಹಿಸಬೇಕು. ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದರ ಜೊತೆಗೆ ಶೀಘ್ರ ಹಾಗೂ ಸೂಕ್ತ ವಿಲೇವಾರಿಗೆ ಕ್ರಮವಹಿಸಲು ತಿಳಿಸಿದ ಶಿನ್ನಾಳಕರ ಅವರು, ಮಳೆ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಬೇಕು. ಸಾರ್ವಜನಿಕ ನಲ್ಲಿ ಹಾಗೂ ಕೊಳವೆ ಬಾವಿಗಳಿಂದ ಹೆಚ್ಚುವರಿ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳಲ್ಲಿ ಇರುವ ಹೂಳು ಸ್ವಚ್ಛಗೊಳಿಸಲು ತಿಳಿಸಿದರು.

ಮನೆಯ ಒಳಗಡೆ ಗೋಡೆ, ಬಾಗಿಲುಗಳ ಮೇಲೆ ಕೀಟನಾಶಕ ಸಿಂಪಡಿಸುವುದರಿಂದ ಸೊಳ್ಳೆ ಸಾಯುತ್ತವೆ. ಕೀಟನಾಶಕ ಸಿಂಪರಣೆ ಕಾರ್ಯಕರ್ತರು ನಿಮ್ಮ ಮನೆಗೆ ಬಂದಾಗ ತಪ್ಪದೆ ಎಲ್ಲ ಕೋಣೆಗಳಿಗೆ ಕೀಟನಾಶಕ ಸಿಂಪರಣೆ ಮಾಡಿಸಬೇಕು. ಸೊಳ್ಳೆ ಪರದೆ ದಿನನಿತ್ಯ ಉಪಯೋಗಿಸಿ, ಸೊಳ್ಳೆ ಕಡಿತದಿಂದ ಹರಡುವ ರೋಗಗಳಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹಗಲು ಹೊತ್ತಿನಲ್ಲಿ ಸಹ ಮನೆಯಲ್ಲಿ ಮಲಗಿರುವ ಮಕ್ಕಳು, ಗರ್ಭಣಿಯರು, ವಯೋವೃದ್ಧರು ಹಾಗೂ ರೋಗಿಗಳು ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದರು.

ಕೀಟಜನ್ಯ ರೋಗ ನಿಯಂತ್ರಣ ಕಾರ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ನಗರಾಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಇಲಾಖೆಗಳ ಪಾತ್ರ ಮುಖ್ಯವಾಗಿದೆ. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 569 ಸಂಶಯಾಸ್ಪದ ವ್ಯಕ್ತಿಗಳ ಪೈಕಿ 507 ವ್ಯಕ್ತಿಗಳ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 42 ಪ್ರಕರಣಗಳು ಖಚಿತಪಟ್ಟಿದ್ದವು. ಅವರೆಲ್ಲರೂ ಈಗ ಗುಣಮುಖರಾಗಿದ್ದಾರೆ. ಅಲ್ಲದೆ, ಜೂನ್ ಮಾಹೆಯಲ್ಲಿ 6 ಡೆಂಘೀ ಪ್ರಕರಣ ಕಂಡುಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಪ್ರಕರಣ ಪುನರಾವರ್ತಿತಗೊಳ್ಳದಂತೆ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಡಾ.ವಿಕಾಸ ಅವರು ಡೆಂಗಿ ರೋಗದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಸಭೆಯಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾರ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ದಯಾನಂದ ಕರೆನ್ನವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಸುವರ್ಣ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ ಪ್ರಕರಣಗಳು ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೊಳ್ಳೆ ಪರದೆ ನೀಡಲಾಗಿದೆ. ಕೀಟನಾಶಕ ಸಿಂಪರಣೆ, ಸೊಳ್ಳೆ ಪರದೆ ವಿತರಣೆ, ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ಮತ್ತು ಲಾವಾಗಳ ನಿಯಂತ್ರಣ, ನೀರಿನ ತಾಣಗಳ ಸಮೀಕ್ಷೆ, ಅಂತಹ ಸ್ಥಳಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವ ಕಾರ್ಯ ಮಾಡಲಾಗುತ್ತಿದೆ.

- ಡಾ.ಜಯಶ್ರೀ ಎಮ್ಮಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ