ಸಾರಾಂಶ
ಜೋಯಿಡಾ: ತಾಲೂಕಿನಲ್ಲಿ ಹತ್ತು ಹಲವು ಕೊರತೆಗಳ ನಡುವೆ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆ ಆರಂಭಿಸಲು ಸಿದ್ಧತೆ ನಡೆದಿದೆ.
ಸಮುದಾಯ ಸಹಭಾಗಿತ್ವ ಹಾಗೂ ಸರ್ಕಾರದ ಯೋಜನೆಗಳ ಮೂಲಕ ಹಲವು ಶಾಲೆ ಅಭಿವೃದ್ಧಿಪಡಿಸಲಾಗಿದೆ. ಆದರೂ ಇನ್ನು ಹಲವು ಶಾಲೆಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗೆ ತಕ್ಕಂತೆ ಶಿಕ್ಷಕರು, ಶಾಲಾ ಕೊಠಡಿಗಳು ಎಲ್ಲ ಶಾಲೆಗಳಲ್ಲಿ ಇಲ್ಲ.ಇಂದಿನ ಡಿಜಿಟಲ್ ಯುಗದಲ್ಲಿ ಸಂಪರ್ಕದ ಮುಖ್ಯವಾಹಿನಿಯಾದ ದೂರ ಸಂಪರ್ಕ ಜಾಲದ ವ್ಯವಸ್ಥೆ ಎಲ್ಲ ಶಾಲೆಗಳಲ್ಲಿ ಇಲ್ಲ. ಕೆಲವು ಶಾಲೆಗಳಿಗೆ ಸರ್ವಋತು ರಸ್ತೆ ಇಲ್ಲ. ಮಳೆಗಾಲದಲ್ಲಿ ಕಟ್ಟಿಗೆ ಸಂಕದ ಮೇಲೆ ದಾಟಿ ಮಕ್ಕಳು ಶಾಲೆಗೆ ಹೋಗಬೇಕಿದೆ. ಕೆಲವು ಕಡೆ ವಿದ್ಯುತ್ ಸಂಪರ್ಕವೇ ಇಲ್ಲ. ಕೆಲವೆಡೆ ಬಸ್ ವ್ಯವಸ್ಥೆ ಇಲ್ಲ. ಇದ್ದರೂ ವಿದ್ಯಾರ್ಥಿಗಳು ಗಂಟೆಗಟ್ಟಲೆ ರಸ್ತೆಯಲ್ಲಿ ಬಸ್‌ಗಾಗಿ ಕಾಯಬೇಕು ಅಥವಾ ಸಮೀಪದ ನೆಂಟರಿಷ್ಟರ ಮನೆಯಲ್ಲಿ ಉಳಿದುಕೊಳ್ಳಬೇಕು. ಕೆಲವು ಹಳ್ಳಿಗಳ ಮಕ್ಕಳು ಕಲಿಕೆಗಾಗಿ ಬೇರೆ ಊರಿಗೆ ವಲಸೆ ಹೋಗುವುದೂ ಇದೆ.
ಮುಖ್ಯರಸ್ತೆಯ ಅಕ್ಕಪಕ್ಕದ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಂ ಶಿಕ್ಷಕರಿದ್ದಾರೆ. ಆದರೆ ಒಳ ಹಳ್ಳಿಗಳ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಆಧಾರ.ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಕೆಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರನ್ನು ನೀಡುವಂತೆ ಪಾಲಕರು ಪ್ರತಿಭಟನೆ ನಡೆಸಿದ್ದೂ ಇದೆ. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ಬೇರೆ ಶಾಲೆ ಶಿಕ್ಷಕರನ್ನು ಡೆಪ್ಯೂಟ್ ಮಾಡಿದ್ದರು. ಅಂತಹ ಶಾಲೆಗಳಲ್ಲಿ ಈ ವರ್ಷದ ಪರಿಸ್ಥಿತಿ ಏನು ಎಂಬುದು ಪಾಲಕರಿಗೆ ತಿಳಿದಿಲ್ಲ. ಆರ್ಥಿಕವಾಗಿ ಗಟ್ಟಿ ಇದ್ದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಿದರೆ ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳು ಅನಿವಾರ್ಯ.