ಸಾರಾಂಶ
ಮೆದುಳು ಜ್ವರಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ. ಈ ರೋಗ ತಗುಲಿದ ಶೇ.30 ರಿಂದ 50 ರಷ್ಟು ಮಕ್ಕಳು ಮರಣ ಹೊಂದುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಎಚ್‌ಒ ಡಾ.ನಟರಾಜ್ ಹೇಳಿದರು.
ಶಿವಮೊಗ್ಗ : ಮೆದುಳು ಜ್ವರಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ. ಈ ರೋಗ ತಗುಲಿದ ಶೇ.30 ರಿಂದ 50 ರಷ್ಟು ಮಕ್ಕಳು ಮರಣ ಹೊಂದುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಎಚ್‌ಒ ಡಾ.ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯತ್ರಂಣ ಕಾರ್ಯಕ್ರಮ ಸಹಯೋಗದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಂಭಾಗಣದಲ್ಲಿ ವೈದ್ಯರಿಗೆ ಏರ್ಪಡಿಸಿದ್ದ ಮೆದುಳು ಜ್ವರ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೆದುಳು ಜ್ವರು ವೈರಾಣುವಿನಿಂದ ಉಂಟಾಗುವ ರೋಗ. ಈ ರೋಗವು ಸೋಂಕಿರುವ ಹಂದಿಗಳು, ಹಂಸ ಪಕ್ಷಿಗಳಿಂದ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ. ಮುನ್ನೆಚ್ಚರಿಕೆ ಕ್ರಮಗಳಿಂದ ಈ ರೋಗವನ್ನು ನಿಯಂತ್ರಿಸಬಹುದು. ಆದ್ದರಿಂದ ಎಲ್ಲರೂ ಮುನ್ನಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು ಮೆದುಳು ಜ್ವರದ ಲಕ್ಷಣಗಳಾಗಿದ್ದು, ಖಾಯಿಲೆಯು ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳಾಗಿ ಮಕ್ಕಳಿಗೆ ಮೆದುಳು ಜ್ವರ ವಿರುದ್ಧದ ಲಸಿಕೆ ಕೊಡಿಸುವುದು, ಹಂದಿಗಳನ್ನು ಜನರ ವಾಸಸ್ಥಳದಿಂದ ಕನಿಷ್ಟ ಪಕ್ಷ 3 ಕಿ.ಮೀ ದೂರಕ್ಕೆ ಸ್ಥಳಾಂತರಿಸುವುದು, ಸಂಜೆ ವೇಳೆಯಲ್ಲಿ ಮೈ ತುಂಬಾ ಬಟ್ಟೆ ಧರಿಸಿ ಓಡಾಡುವುದು, ಹಂದಿ ಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸುವುದು ಮತ್ತು ಕೀಟ ನಾಶಕ ಸಿಂಪಡಿಸುವುದು, ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ವೈದ್ಯ ಡಾ. ಪೃಥ್ವಿ, ಡಾ.ಶಶಿಕಾಂತ್, ಡಾ. ಪಿ.ಕೆ. ಪೈರವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮೆದುಳು ಜ್ವರದ ಲಕ್ಷಣಗಳು, ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮ ಹಾಗೂ ಚಿಕಿತ್ಸೆ ಕುರಿತು ತಿಳಿಸಿದರು.