ಕೈಗಾರಿಕಾ ಕಾರಿಡಾರ್, ವಿಮಾನ ನಿಲ್ದಾಣಕ್ಕೆ ಆದ್ಯತೆ: ಗಾಯತ್ರಿ

| Published : Apr 05 2024, 01:06 AM IST

ಕೈಗಾರಿಕಾ ಕಾರಿಡಾರ್, ವಿಮಾನ ನಿಲ್ದಾಣಕ್ಕೆ ಆದ್ಯತೆ: ಗಾಯತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ, ಆರೋಗ್ಯ, ಕೈಗಾರಿಕೆ ವಿಚಾರದಲ್ಲಿ ನೆರೆಯ ಮೂರು ಜಿಲ್ಲೆಗಳು ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯನ್ನು ಅವಲಂಬಿಸಿದೆ. ಹೀಗಾಗಿ ಇಲ್ಲೊಂದು ಇಂಡಸ್ಟ್ರಿಯಲ್‌ ಕಾರಿಡಾರ್ ನಿರ್ಮಾಣಕ್ಕೆ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ದಾವಣಗೆರೆ: ಶಿಕ್ಷಣ, ಆರೋಗ್ಯ, ಕೈಗಾರಿಕೆ ವಿಚಾರದಲ್ಲಿ ನೆರೆಯ ಮೂರು ಜಿಲ್ಲೆಗಳು ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯನ್ನು ಅವಲಂಬಿಸಿದೆ. ಹೀಗಾಗಿ ಇಲ್ಲೊಂದು ಇಂಡಸ್ಟ್ರಿಯಲ್‌ ಕಾರಿಡಾರ್ ನಿರ್ಮಾಣಕ್ಕೆ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ನಗರದ ವಿನಾಯಕ ಬಡಾವಣೆ ವಿನಾಯಕ ಉದ್ಯಾನವನದಲ್ಲಿ ಗುರುವಾರ ವಿನೂತನ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ಮಹಿಳಾ ಮತದಾರರು, ಸ್ಥಳೀಯ ನಿವಾಸಿಗಳಲ್ಲಿ ಮತಯಾಚಿಸಿ ಮಾತನಾಡಿದರು.ಇಲ್ಲೊಂದು ಕೈಗಾರಿಕಾ ಕಾರಿಡಾರ್ ಸ್ಥಾಪಿಸಬೇಕು, ಸ್ಥಳೀಯವಾಗಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆಂಬುದು ನಮ್ಮ ಮಹದಾಸೆಯಾಗಿದೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಜಿಲ್ಲೆಯಲ್ಲಿ 1 ಸಾವಿರ ಎಕರೆಗೂ ಅಧಿಕ ಜಮೀನನ್ನು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಗುರುತಿಸಿದ್ದರು. ಮುಂದಿನ ದಿನಗಳಲ್ಲಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಆದ್ಯತೆಯಾದೆ. ಕೈಗಾರಿಕಾ ಕಾರಿಡಾರ್ ನಿರ್ಮಾಣದಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತವೆ. ಲಕ್ಷಾಂತರ ಜನರ ಬದುಕಿಗೂ ಪ್ರತ್ಯಕ್ಷ, ಪರೋಕ್ಷವಾಗಿ ಆಸರೆಯಾಗುತ್ತದೆ ಎಂದರು.

ಕೈಗಾರಿಕಾ ಕಾರಿಡಾರ್‌ಗಾಗಿ ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಹಂತಕ್ಕೆ ಬಂದು, ನಿಂತಿದೆ. ಏರ್‌ಪೋರ್ಟ್ ನಿರ್ಮಾಣಕ್ಕೂ 361 ಎಕರೆ ಜಾಗ ಗುರುತಿಸಲಾಗಿದೆ. ಭೂ ಸ್ವಾಧೀನಕ್ಕೆ 142 ಕೋಟಿ ರು. ಅನುದಾನದ ಅಗತ್ಯವಿದೆ. ಈ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಿಳೆಯರೆಲ್ಲರೂ ಸೇರಿ ನನಗೆ ಬೆಂಬಲ ನೀಡಬೇಕು. ಮಹಿಳೆಯರಷ್ಟೇ ಅಲ್ಲ, ನಿಮ್ಮ ಕುಟುಂಬ ಸದಸ್ಯರಿಗೂ, ಬಂಧು, ಬಳಗ, ಸ್ನೇಹಿತರು, ಹಿತೈಷಿಗಳಿಗೂ ಹೇಳಿ ಬಿಜೆಪಿಗೆ ಮತ ನೀಡುವ ಮೂಲಕ ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಲು ನಮ್ಮ ಜಿಲ್ಲೆಯಿಂದಲೂ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಕಮಲದ ಗುರುತಿಗೆ ಮತ ನೀಡಿದರೆ, ಮುಂದಿನ ದಿನಗಳಲ್ಲಿ ಕೈಗಾರಿಕಾ ಕಾರಿಡಾರ್, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಡ್ರೋಣ್ ನಿರ್ವಹಣೆ ತರಬೇತಿಗೆ ಕ್ರಮ ಕೈಗೊಂಡಿದ್ದಾರೆ. ಡ್ರೋಣ್ ಬಳಸಿಕೊಂಡು, ಕೃಷಿ ವಲಯದಲ್ಲಿ ಔಷಧ ಸಿಂಪರಣೆ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿಯಾಗಲು ಸಹಕಾರಿಯಾಗಿದ್ದಾರೆ. ಇದು ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಸಹ ಆಸರೆಯಾಗಲಿದ್ದಾರೆ ಎಂದು ಬಿಜೆಪಿ ಸಾಧನೆ ತಿಳಿಸಿದರು.

ಈಗ ಇಲ್ಲಿ ಸೇರಿರುವ ಮಹಿಳೆಯರು ಮನಸ್ಸು ಮಾಡಿದರೆ ಒಬ್ಬೊಬ್ಬರೂ ಸಾವಿರಾರು ಮತಗಳನ್ನು ಬಿಜೆಪಿಗೆ ಹಾಕಿಸುವ ಶಕ್ತಿ ಇದೆ. ಇಂದು ಸಣ್ಣ ಪುಟ್ಟ ಮಕ್ಕಳನ್ನು ಕೇಳಿದರೂ ಮೋದಿ ಮೋದಿ ಎನ್ನುತ್ತಾರೆ. ಅದಕ್ಕೆ ನರೇಂದ್ರ ಮೋದಿ ಅವರ ಸರಳತೆ, ಪಾರದರ್ಶಕ ಆಡಳಿತ, ದೇಶದ ಬಗ್ಗೆ ಕಳಕಳಿ, ದೇಶ ವಾಸಿಗಳ ಹಿತಕ್ಕಾಗಿ ದುಡಿಯುವ ಬದ್ಧತೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ನೀವೆಲ್ಲರೂ ನನಗೆ ಮತ ನೀಡಿ, ಗೆಲ್ಲಿಸಿ ದೆಹಲಿಗೆ ಕಳಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಜನರು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ. ದೇಶದ ಆಂತರಿಕ, ಬಾಹ್ಯ ಭದ್ರತೆ ವಿಚಾರದಲ್ಲಿ ಮೋದಿಯವರಿಗೆ ಇರುವಷ್ಟು ಕಾಳಜಿ, ಬದ್ಧತೆಯು ಕಾಂಗ್ರೆಸ್ಸಿನವರಿಗೆ ಇಲ್ಲ. ಹಿಂದುಗಳ ಆರಾಧ್ಯ ದೈವ, ಮರ್ಯಾದಾ ಪುರುಷೋತ್ತಮನಿಗೆ ಶ್ರೀರಾಮ ಮಂದಿರ ನಿರ್ಮಿಸಬೇಕೆಂಬ ಕನಸು 5 ಶತಮಾನಗಳಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ಮೋದಿ ಆಳ್ವಿಕೆಯಲ್ಲಿ ಕೇವಲ 2 ವರ್ಷದಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೂ ಆಗಿದೆ. ಮೋದಿ ಅವರು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.

ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಜಿ.ಎಸ್.ಅಶ್ವಿನಿ, ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಶೈಲಜಾ, ರಂಚಿತಾ, ಚೈತನ್ಯ, ರೂಪಾ, ವಿನೋದ, ವಾಣಿ ಇತರರು ಇದ್ದರು.