ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಂಗಳೂರು ಮೂಲದ ಇಬ್ಬರು ಕೈದಿಗಳು ಶನಿವಾರ ಕಾರಾಗೃಹದ ಜೈಲರ್ ಸೇರಿ ಕರ್ತವ್ಯನಿರತ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಂಗಳೂರು ಮೂಲದ ಇಬ್ಬರು ಕೈದಿಗಳು ಶನಿವಾರ ಕಾರಾಗೃಹದ ಜೈಲರ್ ಸೇರಿ ಕರ್ತವ್ಯನಿರತ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ. ಇವರು ಡಕಾಯತಿ ಸೇರಿ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇವರನ್ನು ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಶಿಸ್ತು ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಸಂಬಂಧ ಜೈಲಿನಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಇದು ಆರೋಪಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಶನಿವಾರ ಜೈಲರ್ ಕಲ್ಲಪ್ಪ ಗಸ್ತಿಯವರು ತಪಾಸಣೆಗೆ ಆಗಮಿಸಿದ್ದ ವೇಳೆ ಈ ಕೈದಿಗಳು ಜೈಲರ್ ಜೊತೆ ಗಲಾಟೆ ಮಾಡಿದರು. ಈ ವೇಳೆ, ಜೈಲರ್ ಮತ್ತು ಕೈದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಕೈದಿಗಳು ಜೈಲರ್ ಗಸ್ತಿಯವರ ಸಮವಸ್ತ್ರ ಹರಿಯಲು ಯತ್ನಿಸಿ, ಹಲ್ಲೆಗೆ ಮುಂದಾದರು. ಈ ವೇಳೆ, ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಕೈದಿಗಳನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಗಲಾಟೆಯಲ್ಲಿ ಬಸ್ತಿ ಸೇರಿ ಕರ್ತವ್ಯನಿರತ ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೈಲು ಸಿಬ್ಬಂದಿಯ ಮೊಬೈಲ್‌ನಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿವೆ.ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಜೈಲರ್ ಹಾಗೂ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಮಧ್ಯೆ, ಹಲ್ಲೆ ಘಟನೆ ಬೆನ್ನಲ್ಲೇ ಜಿಲ್ಲಾ ಕಾರಾಗೃಹದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಶನಿವಾರವಾದ್ದರಿಂದ ಕೈದಿಗಳ ಭೇಟಿಗೆ ವಿವಿಧೆಡೆಗಳಿಂದ ಕುಟುಂಬಸ್ಥರು ಆಗಮಿಸಿದ್ದು, ಭೇಟಿಗೆ ಅವಕಾಶ ಸಿಗದೇ ಪರದಾಡುವಂತಾಯಿತು.