ಸಮಾಜವನ್ನು ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ

| Published : Nov 08 2024, 12:37 AM IST

ಸಾರಾಂಶ

ಸಮಾಜವನ್ನು ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕಿಂಗ್ ಮೇಕರ್ ಆಗಿ ಮಾಡಿದಾಗ ಸಮಾಜವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾನೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಸರಿಯಾದ ದಾರಿಯನ್ನು ಆರಿಸಲು ಸಾಧ್ಯವಾಗದೆ ಗೊಂದಲಕ್ಕೀಡಾಗಿ ಕೃತಕ ಬುದ್ದಿಮತ್ತೆ ಹಾಗೂ ಮೊಬೈಲ್ಗೆ ಮಾರುಹೋಗಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಕುಂಠಿತಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.

ನವದೆಹಲಿಯ ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆರ್ಟ್ ಅಂಡ್ ಮೈಂಡ್ ಫೆಸ್ಟ್ 2K24 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಮಾಜವನ್ನು ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕಿಂಗ್ ಮೇಕರ್ ಆಗಿ ಮಾಡಿದಾಗ ಸಮಾಜವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾನೆ. ಆದ್ದರಿಂದ ನಿಮ್ಮ ತಂದೆ-ತಾಯಿ ಗುರು ಹಿರಿಯರು ಹಾಗೂ ಸಮಾಜವನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಇಂತಹ ಕಾರ್ಯಕ್ರಮದಲ್ಲಿ ಹಲವಾರು ಪರಿಣಿತರು ಹಾಗೂ ತಜ್ಞರು ಮಾತನಾಡಿದಾಗ ಅದನ್ನು ವಿದ್ಯಾರ್ಥಿಗಳು ಕೂಲಂಕುಷವಾಗಿ ಗ್ರಹಿಸಿ ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಅದರಿಂದ ನಿಮ್ಮ ಅರಿವೇ ನಿಮ್ಮ ಗುರುವು ಎಂದು ಬಸವಣ್ಣನವರ ತತ್ವವನ್ನು ಸ್ಮರಿಸಿದರು.

ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬೇಕು. ಎಲ್ಲವನ್ನು ಗ್ರಹಿಸಿಕೊಂಡು ನಿಮ್ಮ ಗುರಿ ತಲುಪಬೇಕು. ನಿಮ್ಮ ನೈತಿಕತೆಯನ್ನು ಎಂದಿಗೂ ಬಿಡಬಾರದು. ಈ ದೇಶದಲ್ಲಿ ಅನೇಕ ಮಹನೀಯರ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಅಕ್ಷರದ ಜೊತೆಗೆ ಇವತ್ತಿನ ಯುವ ಸಮೂಹಕ್ಕೆ ಕೌಶಲ್ಯ ಹಾಗೂ ಪರಿಣಿತಿ ಇರಬೇಕು. ಆಗ ಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ ಎಂದರು.

ಕಾಲಮಾನಗಳಿಗೆ ಅನುಗುಣವಾಗಿ ಜಗತ್ತು ಕ್ಷಣ ಕ್ಷಣಕ್ಕೂ ವೇಗವಾಗಿ ಬದಲಾವಣೆ ಆಗುತ್ತಿದೆ. ಇದೇ ರೀತಿಯಲ್ಲಿ ಮಾನವನ ವಿಕಾಸ ಹಾಗೂ ಪ್ರಜ್ಞೆಯಲ್ಲಿ ಕೂಡ ಸಾಕಷ್ಟು ಬದಲಾವಣೆ ಕಾಣಬಹುದು. 5 ರಿಂದ 10 ವರ್ಷದ ಮಕ್ಕಳು, 25 ರಿಂದ 30 ವರ್ಷದ ಮಕ್ಕಳಂತೆ ಯೋಚಿಸುವುದು, ವರ್ತಿಸುವುದು ಹಾಗೂ ಮಾತನಾಡುವುದನ್ನು ನಾವು ಕಾಣಬಹುದು ಎಂದರು.

25 ವರ್ಷಗಳ ಹಿಂದೆ ಒಂದು ಕಾಲವಿತ್ತು, ಆಗ ಶಿಕ್ಷಣಕ್ಕೆ ಇದ್ದಂತಹ ಮಹತ್ವ ಬೇರೆಯಾದಾಗಿತ್ತು. ಕೇವಲ ವ್ಯಕ್ತಿಗೆ ಓದಲಿಕ್ಕೆ ಮತ್ತು ಬರಿಯಲಿಕ್ಕೆ ಬಂದರೆ ಅವನಿಗೆ ಬೌದ್ಧಿಕತೆಯ ವಿಕಾಸ ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ನಾವು ಸ್ಪರ್ಧಾತ್ಮಕ ಹಾಗೂ ಡಿಜಿಟಲ್ ಯುಗದಲ್ಲಿ ಜಗತ್ತಿನ ಸವಾಲನ್ನು ಎದುರಿಸಲಿಕ್ಕೆ ಸಾಧ್ಯವಿದೆಯೇ, ಬದುಕು ಕಟ್ಟಿಕೊಳ್ಳಲು ಸಾಧ್ಯ ಇದ್ದಿಯಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಅವರು ಹೇಳಿದರು.

ಎಲ್ಲಾ ರಂಗಗಳಲ್ಲೂ ಕೃತಕ ಬುದ್ದಿಮತ್ತೆಯು (ಎ.ಐ) ಈಗ ಅತಿಕ್ರಮಿಸಿದೆ. ನಿಮ್ಮ ಆಲೋಚನಾ ಶಕ್ತಿಗೆ ಅದು ವೈರಸ್ ಆಗಿ ಪರಿಣಮಿಸಿದೆ. ಜಗತ್ತು ತಲೆ ಎತ್ತಿ ನೋಡಬೇಕಾದ ಇಂತಹ ಸಂದರ್ಭದಲ್ಲಿ ಮೊಬೈಲ್ ನಮ್ಮ ತಲೆತಗ್ಗಿಸುತ್ತಿದೆ. ಗ್ಲೋಬಲ್ ಆಗಿ ಬೆಳೆಯಬೇಕಾದ ನಾವು ಗೂಗಲ್ ಗೆ ಸೀಮಿತಗೊಂಡಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಗತ್ತು ನಿಂತಿರುವುದು ಕಲೆ ಮತ್ತು ನಮ್ಮ ಮನಸ್ಸಿನ ಮೇಲೆ. ಅದ್ದರಿಂದ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ನಿಮ್ಮ ಸ್ವ ಕೌಶಲ್ಯವನ್ನು ಈ ಸ್ಪರ್ಧೆಗಳಲ್ಲಿ ಅನಾವರಣಗೊಳಿಸಬಹುದು. ಆದ್ದರಿಂದ ಪ್ರಪಂಚದ ಎಲ್ಲಾ ಜ್ಞಾನವನ್ನು ಬೆಳೆಸಿಕೊಂಡು ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಮುಕ್ತ ವಿವಿಯ ಅಕಾಡೆಮಿಕ್ ಡೀನ್ ಡಾ.ಎನ್. ಲಕ್ಷ್ಮೀ ಮಾತನಾಡಿ, ತಂತ್ರಜ್ಞಾನ ಮುಂದುವರೆದಂತೆ ದೇಶದಲ್ಲಿ ಜಾಗತೀಕರಣ, ತಂತ್ರಜ್ಞಾನದ ಬದಲಾವಣೆಯ ಜೊತೆಗೆ ಡಿಜಿಟಲಿಕಾರಣವಾಗುತ್ತಿದ್ದು, ಇದರೊಟ್ಟಿಗೆ ಶಿಕ್ಷಣವು ಕೂಡಾ ಅತೀ ವೇಗವಾಗಿ ಮುಂದುವರಿಯುತ್ತಿವುದನ್ನು ನಾವು ಇಂದು ನೋಡಬಹುದು ಎಂದರು.

ಪ್ರಾಚೀನ ಕಾಲಘಟ್ಟದಲ್ಲಿ ಕೇವಲ ಹಳೇ ಕಾಲದ ಸಾಂಪ್ರದಾಯಿಕ ಆಟಗಳಾದ ಕೋಕೋ, ಕಬಡ್ಡಿ, ಮರಕೋತಿ ಆಟ ಮತ್ತು ರಂಗೋಲಿ ಬಿಡಿಸುವಿಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು ಶಾಲಾ ಕಾಲೇಜುಗಳಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವಂತಹ ವಿವಿಧ ರೀತಿಯ ಸ್ಪರ್ಧಾತ್ಮಕ ಕಾರ್ಯಕ್ರಮ ಆಯೋಜಿಸಿ, ಮಕ್ಕಳಲ್ಲಿ ಸುಜನಾತ್ಮಕ ಬೆಳವಣಿಗೆ ಮುನ್ನುಡಿಯಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು ಸರ್ವ ಶಿಕ್ಷಣ ಅಭಿಯಾನದಲ್ಲಿ ನಲಿ- ಕಲಿ ಎಂದರೆ ಮಗು ಆಡುತ್ತಾ- ನಲಿಯುತ್ತ ಕಲಿಯಬೇಕು. ಬಿ.ಇಡಿ ನಲ್ಲಿ ಕಲೆ ಮತ್ತು ಸಾಹಿತ್ಯ, ನಾಟಕ ಮತ್ತು ಶಿಕ್ಷಣ ಎಂಬ ಪಠ್ಯ ಪುಸ್ತಕ ರೂಪಿಸಿ ಶಾಲಾ ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರು ಅದನ್ನು ಕಡ್ಡಾಯವಾಗಿ ಓದಿ ಶಿಕ್ಷಣದ ಜೊತೆಗೆ ನಾಟಕವನ್ನು ಹೇಗೆ ಒಂದುಗೂಡಿಸಬೇಕು ಎಂಬ ನಿಟ್ಟಿನಲ್ಲಿ ಕಲೆ ಮತ್ತು ಸಾಹಿತ್ಯವನ್ನು ಕೂಡ ಪಠ್ಯ ಚಟುವಟಿಕೆಯಾಗಿ ಮಾಡಿದೆ ಎಂದು ಅವರು ತಿಳಿಸಿದರು.

ಮಕ್ಕಳು ಇಂದು ಸ್ಪರ್ಧಾತ್ಮಕ ಯುಗದಲ್ಲಿ ಇರುವುದರಿಂದ ಎಲ್ಲರೂ ತಮ್ಮಲ್ಲಿ ಆತ್ಮಸ್ಥೈರ್ಯ, ಆತ್ಮಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾದಾಗ ಪರಿಪೂರ್ಣ ವ್ಯಕ್ತಿಯಾಗಿ ಸರ್ವತೋಮುಖ ಬೆಳವಣಿಗೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಆಂಗ್ಲ ಮಾಧ್ಯಮವು ಸಮಾಜದ ಇವತ್ತಿನ ಕಾಲಘಟ್ಟಕ್ಕೆ ಅವಶ್ಯಕವಿದೆ. ಆದರೆ ಕೇವಲ ಒಂದೇ ಭಾಷೆಗೆ ಸೀಮಿತವಾಗದೇ ಎಲ್ಲವನ್ನೂ ಕಲಿಯಬೇಕು ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಕಾಣಲು ಸಾಧ್ಯ ಎಂದರು.

ಸೋಲು ಗೆಲುವು ಎನ್ನುವುದು ಒಂದು ನಾಣ್ಯದ ಎರಡು ಮುಖವಿದ್ದಂತೆ, ಹಾಗಾಗಿ ಮಕ್ಕಳೂ ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮವಾಗಿ ಭಾಗವಹಿಸಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಮತ್ತು ಸದೃಢ ಸಮಾಜವನ್ನು ನಿರ್ಮಿಸಿ, ಸಮ ಸಮಾಜವನ್ನು ಕಟ್ಟೋಣ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ಎಂಟರ್ ಪ್ರೆನ್ಯೂರ್ಶಿಪ್- ಬಿಸಿನೆಸ್ ಸ್ಕೂಲ್ ನ ನಿರ್ದೇಶಕಿ ಹಾಗೂ ಪ್ರಾಂಶುಪಾಲೆ ಡಾ.ಕೆ. ಅಪರ್ಣಾ ರಾವ್, ಪ್ರೊ. ವೆಂಕಟರಮಣ ಶೆಟ್ಟಿ, ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ ರಾಷ್ಟ್ರೀಯ ಉಪಾಧ್ಯಕ್ಷ ಸಿ.ವಿ. ಶ್ರೀನಾಥ್ ಶೆಟ್ಟಿ, ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಮೂಹ ಸಂವಹನದ ಅಧ್ಯಕ್ಷ ಡಾ.ಜಿ.ಬಿ. ಶೈಲೇಶ್ ರಾಜ್ ಅರಸ್ ಮೊದಲಾದವರು ಇದ್ದರು.