ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣ ಆವರಣದ ಸುತ್ತಲಿನ 100 ಮೀಟರ್ ಪ್ರದೇಶದಲ್ಲಿ ಧರಣಿ, ಸತ್ಯಾಗ್ರಹ, ಪ್ರತಿಭಟನೆ , ಮುಷ್ಕರಗಳನ್ನು ನಡೆಸದಂತೆ ಹಾಗೂ ಧ್ವನಿವರ್ಧಕಗಳನ್ನು ಬಳಸದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಯಶವಂತ್ ವಿ.ಗುರುಕರ್ ಆದೇಶ ಹೊರಡಿಸಿದ್ದಾರೆ.ಈ ಆದೇಶವನ್ನು ಉಲ್ಲಂಘಿಸಿ ಯಾವುದೇ ರಾಜಕೀಯ ಪಕ್ಷ, ಸಂಘ ಸಂಸ್ಧೆಗಳು, ಸಂಘಟನೆಗಳು ಪ್ರತಿಭಟನೆ , ಧರಣಿ ಹಾಗೂ ಮುಷ್ಕರ ನಡೆಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಿಷೇಧಾಜ್ಞೆ ಜಾರಿಗೆ ಕಾರಣವೇನು ?ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿದಿನ ಕಚೇರಿ ಕರ್ತವ್ಯದ ಸಮಯದಲ್ಲಿ ಸಂಘ- ಸಂಸ್ಥೆ, ಇತ್ಯಾದಿಗಳಿಂದ ವಿವಿಧ ಧರಣಿ, ಸತ್ಯಾಗ್ರಹ, ಪ್ರತಿಭಟನೆ , ಮುಷ್ಕರಗಳನ್ನು ನಡೆಸುತ್ತಿದ್ದು, ಸದರಿ ಪ್ರತಿಭಟನೆಗಳಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ - ಸಿಬ್ಬಂದಿಗೆ ಕಚೇರಿ ಕರ್ತವ್ಯದ ಸಮಯದಲ್ಲಿ ಸಭೆ, ನ್ಯಾಯಾಲಯದ ಕಲಾಪ ಇನ್ನಿತರೆ ಕೆಲಸ ಕಾರ್ಯ ನಡೆಸಲು ತೊಂದರೆ ಉಂಟಾಗುತ್ತಿದೆ.
ಅಲ್ಲದೆ, ಸಾರ್ವಜನಿಕರು ವಿವಿಧ ಕಾರ್ಯಗಳ ನಿಮಿತ್ತ ಜಿಲ್ಲಾ ಸಂಕೀರ್ಣದಲ್ಲಿನ ಕಚೇರಿಗಳಿಗೆ ಭೇಟಿ ನೀಡಿ ಅಹವಾಲು - ಸಮಸ್ಯೆಗಳ ಇತ್ಯರ್ಥ ಪಡಿಸುವಿಕೆಗಾಗಿ ಸಂಪರ್ಕಿಸುವಾಗಲೂ ಸಹ ಇಂತಹ ಪ್ರತಿಭಟನೆಗಳಿಂದ ಅಧಿಕ ತೊಂದರೆಯಾಗುತ್ತಿದೆ.ಆದ್ದರಿಂದ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದ ಸುತ್ತಲಿನ 100 ಮೀಟರ್ ಪ್ರದೇಶವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023ರ ಸೆಕ್ಷನ್ 163ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಡೇರಹಳ್ಳಿಯಲ್ಲಿ ಪ್ರತಿಭಟನೆಗೆ ಅವಕಾಶ:ಇನ್ನು ಮುಂದೆ ಧರಣಿ, ಸತ್ಯಾಗ್ರಹ, ಪ್ರತಿಭಟನೆ, ಮುಷ್ಕರಗಳನ್ನು ಕೈಗೊಳ್ಳಬೇಕಾದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಜಿಲ್ಲಾ ಕಚೇರಿಗಳ ಸಂಕೀರ್ಣ ಎದುರಲ್ಲಿ ಇರುವ ರಾಮನಗರ ತಾಲೂಕು ಕಸಬಾ ಹೋಬಳಿ ವಡೇರಹಳ್ಳಿ ಗ್ರಾಮದ ಸರ್ವೇ ನಂ.135ರಲ್ಲಿ ಕಾನೂನು ಸುವ್ಯವಸ್ಥೆ ಶಾಂತಿ ಪಾಲನೆಗೆ ಧಕ್ಕೆ ಉಂಟಾಗದಂತೆ ಅಹಿತಕರ ಘಟನೆಗಳು ನಡೆಸದಂತೆ ಹಾಗೂ ಸರ್ಕಾರಿ ಸ್ವತ್ತುಗಳಿಗೆ ಯಾವುದೇ ಹಾನಿ ಮಾಡದಂತೆ ಧರಣಿ, ಸತ್ಯಾಗರ್ಹ, ಪ್ರತಿಭಟನೆ ಹಾಗೂ ಮುಷ್ಕರಗಳನ್ನು ನಡೆಸಲು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅನುಮತಿ ನೀಡಿದ್ದಾರೆ.