ಯೋಜನೆಗಳ ಸಮರ್ಪಕ ಅನುಷ್ಠಾನವೇ ಮೊದಲ ಆದ್ಯತೆ: ಭುವನೇಶ್ ಪಾಟೀಲ

| Published : Feb 21 2025, 12:46 AM IST / Updated: Feb 21 2025, 12:47 AM IST

ಯೋಜನೆಗಳ ಸಮರ್ಪಕ ಅನುಷ್ಠಾನವೇ ಮೊದಲ ಆದ್ಯತೆ: ಭುವನೇಶ್ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಪಂ ಸಭಾಂಗಣದಲ್ಲಿ ಗುರುವಾರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಖಾತ್ರಿ ಯೋಜನೆ ಪ್ರಗತಿ ಕುರಿತು ವಿವರಿಸಿದರು.

ಧಾರವಾಡ: ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನವೇ ನನ್ನ ಮೊದಲ ಆದ್ಯತೆ. ಜೊತೆಗೆ ಸಮಸ್ಯೆ ಮುಕ್ತ ಧಾರವಾಡ ಗ್ರಾಮೀಣ ಜಿಲ್ಲೆ ಮಾಡಲು ಕ್ರಮ ವಹಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಆಗದಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಿ, ಶೇ. 50ಕ್ಕಿಂತ ಕಡಿಮೆ ಮಾನವ ದಿನಗಳನ್ನು ಸೃಜನೆ ಮಾಡಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸ್‌ ನೀಡಲಾಗಿದೆ. ಕನಿಷ್ಠ ಶೇ. 75 ರಷ್ಟು ಸಾಧನೆ ಮಾಡುವಂತೆ ಸೂಚಿಸಲಾಗಿದೆ ಎಂದರು.

ಶಾಲಾ ವನ ನಿರ್ಮಾಣ

ಪ್ರತಿ ತಾಲೂಕಿನಲ್ಲಿ ಸಾಕಷ್ಟು ಬಯಲು, ಆವರಣ ಗೋಡೆ ಹೊಂದಿದ, ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ನಡುವೆ ಒಡಂಬಡಿಕೆಯೊಂದಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಶಾಲಾ ವನ ನಿರ್ಮಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ 102 ಗ್ರಾಪಂಗಳಲ್ಲಿ ನರೇಗಾ ಕೂಲಿಕಾರರ ಮಕ್ಕಳ ಆರೈಕೆಗಾಗಿ ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ. ಉಳಿದ ಗ್ರಾಪಂಗಳಲ್ಲೂ ಇವುಗಳನ್ನು ಸ್ಥಾಪಿಸಲು ಸೂಚಿಸಿರುವುದಾಗಿ ಹೇಳಿದರು.

ಕರವಸೂಲಿ ಅಭಿಯಾನ

ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದಲ್ಲಿ ಎರಡು ಬಾರಿ ತೆರಿಗೆ ವಸೂಲಾತಿ ಅಭಿಯಾನ ಕೈಗೊಳ್ಳಲಾಗಿದೆ. ಈ ವರೆಗೆ ₹17 ಕೋಟಿಗಳಷ್ಟು ತೆರಿಗೆ ವಸೂಲಾತಿ ಮಾಡಿದ್ದು, ಕಳೆದ ಸಾಲಿಗೆ ಹೋಲಿಸಿದ್ದಲ್ಲಿ 10 ಕೋಟಿಗಳಷ್ಟು ಹೆಚ್ಚಿನ ತೆರಿಗೆ ವಸೂಲಾತಿ ಮಾಡಲಾಗಿದೆ. ಮಾರ್ಚ್‌ 31ರೊಳಗಾಗಿ ಪ್ರಸಕ್ತ ಸಾಲಿನ ಬೇಡಿಕೆಯನ್ನು ಶೇ. 100ರಷ್ಟು ಮಾಡುವ ಗುರಿ ಹೊಂದಲಾಗಿದೆ.

ಜಿಲ್ಲೆಯಲ್ಲಿ ಜೆ.ಜೆ.ಎಂ. ಯೋಜನೆಯಡಿ 388 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಂತೆ 355 ಕಾಮಗಾರಿಗಳು ಮುಕ್ತಾಯಗೊಂಡಿವೆ. ಈಗಾಗಲೇ ಅಳವಡಿಸಲಾಗಿರುವ ಪೈಪ್‌ಲೈನ್ ಕಾಮಗಾರಿಗಳಲ್ಲಿ ಗ್ರಾಮದ ಒಳಗಿನ ಕಾಂಕ್ರಿಟ್ ರಸ್ತೆಗಳನ್ನು ಕೊರೆದು ಪೈಪ್‌ಲೈನ್‌ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 467 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ಸ್ಥಗಿತಗೊಂಡಿವೆ. ಸಾರ್ವಜನಿಕರಿಗೆ ತೊಂದರೆ ಆಗಿರುವ ಕುರಿತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ, ಕೂಡಲೇ ಕ್ರಮವಹಿಸಿ, ಶುದ್ಧ ಕುಡಿಯುವ ನೀರಿನ ಘಟಕಗಳು ಪುನಃ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯಲೆಕ್ಕಾಧಿಕಾರಿ ಲಲಿತಾ ಲಮಾಣಿ ಇದ್ದರು.

ಬರಗಾಲ ನಿರ್ವಹಣೆ

ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪದಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದು. ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ನೀರಿನ ಲಭ್ಯತೆಗೆ ಅನುಸಾರವಾಗಿ ಮೂರು ಭಾಗಗಳಾಗಿ ವಿಂಗಡಿಸಲು ಈಗಾಗಲೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಲಾಗಿದೆ. ಅತೀ ಕಡಿಮೆ ಕುಡಿಯುವ ನೀರಿನ ಲಭ್ಯತೆಯನ್ನು ರೆಡ್ ಜೋನ್‌ ಎಂದು ಮತ್ತು ಕಡಿಮೆ ಕುಡಿಯುವ ನೀರಿನ ಲಭ್ಯತೆಯ ಪ್ರದೇಶವನ್ನು ಯಲ್ಲೊ ಜೋನ್ ಎಂದು ಗುರುತಿಸಲಾಗಿದೆ. ಈ ಎರಡು ವಲಯಗಳಲ್ಲಿ ಲಭ್ಯವಿರುವ ನೀರಿನ ಮೂಲಗಳನ್ನು ಸಂರಕ್ಷಿಸಿ ನೀರು ಒದಗಿಸಲಾಗುವುದು. ಖಾಸಗಿ ಬೋರ್‌ವೆಲ್‌ಗಳಿಂದ ನೀರನ್ನು ಪಡೆದು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುದು ಎಂದರು.