ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌: ರಾಜ್ಯಪಾಲರ ನಡೆ ಖಂಡಿಸಿ ವಕೀಲರ ಪ್ರತಿಭಟನೆ

| Published : Aug 27 2024, 01:39 AM IST

ಸಾರಾಂಶ

ರಾಜ್ಯಪಾಲರು ಅನುಮತಿ ನೀಡುವಾಗ ಕಾನೂನಿನ ಉಲ್ಲಂಘನೆಯಾಗಿರುವ ಕುರಿತು ಯಾವ ದಾಖಲೆಗಳು ಆಧಾರವಾಗಿರುತ್ತವೆ.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಅಖಿಲ ಭಾರತ ವಕೀಲರ ಒಕ್ಕೂಟದ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಒಕ್ಕೂಟದ ರಾಜ್ಯ ಮುಖಂಡ ಎ.ಕರುಣಾನಿಧಿ ಮಾತನಾಡಿ, ರಾಜ್ಯಪಾಲರು ಇತ್ತೀಚಿಗೆ ರಾಜ್ಯದ ಮುಖ್ಯಮಂತ್ರಿ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಗಮನಿಸಿದರೆ ರಾಜ್ಯಪಾಲರು ಸಾಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಸಂವಿಧಾನದ 163 ಕಲಂ ಅಡಿಯಲ್ಲಿ ರಾಜ್ಯಪಾಲರಿಗೆ ತಮ್ಮ ವಿವೇಚನಾ ಅಧಿಕಾರವನ್ನು ಬಳಸಲು ಅಧಿಕಾರ ಇದೆ. ಆದರೆ, ಈ ಪ್ರಕರಣದಲ್ಲಿ ವಿವೇಚನಾ ಅಧಿಕಾರವನ್ನು ವಿವೇಚನೆಯಿಂದ ಬಳಸಿಲ್ಲ ಎಂದು ದೂರಿದರು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಅನುಮತಿ ನೀಡಲು ಖಾಸಗಿ ವ್ಯಕ್ತಿಗಳ ದೂರುಗಳನ್ನು ಆಧಾರವಾಗಿರಿಸಿಕೊಂಡಿರುವುದು ಮತ್ತು ಅವರು ಸಲ್ಲಿಸಿರುವ ದಾಖಲೆಗಳನ್ನು ಉಲ್ಲೇಖಿಸಿರುವುದಕ್ಕೆ ಯಾವ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಮಾನ್ಯತೆ ಇರುವುದಿಲ್ಲ ಎಂದು ಆರೋಪಿಸಿದರು.

ರಾಜ್ಯಪಾಲರು ಅನುಮತಿ ನೀಡುವಾಗ ಕಾನೂನಿನ ಉಲ್ಲಂಘನೆಯಾಗಿರುವ ಕುರಿತು ಯಾವ ದಾಖಲೆಗಳು ಆಧಾರವಾಗಿರುತ್ತವೆ ಎಂಬುದನ್ನು ತಮ್ಮ ಅನುಮತಿ ಪತ್ರದಲ್ಲಿ ಉಲ್ಲೇಖಿಸಿರುವುದಿಲ್ಲ. ಕೇವಲ ದಾಖಲೆಗಳನ್ನು ಸಲ್ಲಿಸಿರತ್ತಾರೆ ಎಂದು ಮಾತ್ರ ತಿಳಿಸಿರುವುದು ವಿವೇಚನಾ ಕ್ರಮವಾಗಿರುವುದಿಲ್ಲ. ರಾಜ್ಯಪಾಲರು ತಮ್ಮ ಅನುಮತಿ ಪತ್ರಕ್ಕೆ ಏಕವ್ಯಕ್ತಿ ಆಯೋಗವನ್ನು ಸರ್ಕಾರ ರಚಿಸಿರುವುದನ್ನು ಮತ್ತು ಉನ್ನತ ಮಟ್ಟದ ಅಧಿಕಾರಿಗಳನ್ನು ಈ ಕುರಿತು ನೇಮಿಸಿರುವುದನ್ನೇ ಕಾರಣವಾಗಿರಿಸಿ ಅದನ್ನೇ ಉಲ್ಲೇಖಿಸಿ ಇದೊಂದು ಗಂಭೀರ ಪ್ರಕರಣ ಎಂದು ತಿಳಿಸಿರುವುದು ಹಾಗೂ ಆರೋಪ ಎದುರಿಸುತ್ತಿರುವ ವ್ಯಕ್ತಿಯೇ ಅದರ ವಿಚಾರಣೆಯ ವಿಧಾನವನ್ನು ನಿರ್ಧರಿಸುವುದು ಸೂಕ್ತವಲ್ಲ ಎಂದಿದ್ದಾರೆ. ರಾಜ್ಯಪಾಲರ ಅಭಿಪ್ರಾಯವು ತಾವೇ ಮುಖ್ಯಸ್ಥರಾಗಿರುವ ಈ ಕಾನೂನಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ ಎಂಬುದನ್ನು ತೋರಿಸುತ್ತದೆ. ಆಯೋಗಗಳ ವರದಿ ಬರುವವರೆಗೆ ತಾವೇಕೆ ತಾಳ್ಮೆಯಿಂದ ಕಾಯಲಿಲ್ಲ, ಈ ಕುರಿತು ರಾಜ್ಯಪಾಲರು ತಮ್ಮ ವರದಿಯಲ್ಲಿ ಏಕೆ ವಿವರಿಸಿಲ್ಲ. ರಾಜ್ಯಪಾಲರಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ವಿಶ್ವಾಸ ಮೂಡಿಸಿಲ್ಲವೆಂದಾದಲ್ಲಿ ತಾವೇ ಸ್ವತಃ ಆಯೋಗ ರಚಿಸಿ ನಿಷ್ಪಕ್ಷಪಾತವಾದ ವರದಿ ತರಿಸಿಕೊಳ್ಳಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.

ಖಾಸಗಿ ವ್ಯಕ್ತಿಗಳು ಸಲ್ಲಿಸಿರುವ ದೂರಿಗೆ ಮತ್ತು ಸಲ್ಲಿಸಿರುವ ದಾಖಲೆಗಳಿಗೆ ಯಾವ ಕಾನೂನಿನ ಮಾನ್ಯತೆ ಇದೆ ಎಂಬುದನ್ನು ರಾಜ್ಯಪಾಲರು ತಮ್ಮ ಆದೇಶದಲ್ಲಿ ವಿವರಿಸಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳ ವಿರುದ್ಧ ನೀಡಿರುವ ಅನುಮತಿಯು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಅಲ್ಲದೇ ರಾಜ್ಯಪಾಲರು ಅನುಮತಿ ಪತ್ರ ನೀಡುವಾಗ ಸಾಂವಿಧಾನಿಕವಾಗಿ ಯಾವ ಅಂಶಗಳು ತಮ್ಮನ್ನು ಈ ಅನುಮತಿ ಪತ್ರವನ್ನು ನೀಡುವಂತೆ ಒತ್ತಾಯಿಸಿದವು ಮತ್ತು ಅನಿವಾರ್ಯವಾಗಿ ತಮ್ಮ ವಿವೇಚನಾ ಅಧಿಕಾರವನ್ನು ಬಳಸುವಂತೆ ಪ್ರೇರೇಪಿಸಿದವು ಎಂಬುದನ್ನು ತಮ್ಮ ವರದಿಯಲ್ಲಿ ತಿಳಿಸಿಲ್ಲ. ಇದನ್ನು ಗಮನಿಸಿದರೆ, ಅನುಮತಿ ಪತ್ರವನ್ನು ಸಾಂವಿಧಾನಿಕ ನೆಲೆಯಲ್ಲಿ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದರು.

ಸಂವಿಧಾನ ರಕ್ಷಕರಾಗಿರುವ ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಅವರನ್ನು ರಾಷ್ಟ್ರಪತಿಯವರು ವಾಪಸ್‌ ಕರೆಸಿಕೊಳ್ಳಬೇಕು. ರಾಜ್ಯದಲ್ಲಿ ಆಯ್ಕೆಯಾಗಿರುವ ಈ ಪ್ರಜಾಪ್ರಭುತ್ವ ಸರ್ಕಾರವನ್ನು ರಕ್ಷಿಸುವ ಮೂಲಕ ರಾಜ್ಯದ ಜನರ ರಾಜಕೀಯ ಹಕ್ಕುಗಳ ಘನತೆಯನ್ನು ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಿಸಾಟಿ ಮಹೇಶ್‌, ಎಂ.ಜಂಬಯ್ಯ ನಾಯಕ, ಆರ್.ಭಾಸ್ಕರ್ ರೆಡ್ಡಿ ಮಾತನಾಡಿದರು. ವಕೀಲರಾದ ಕಲ್ಯಾಣಯ್ಯ, ಎಚ್.ವೆಂಕಟೇಶಲು, ಕೆ.ಬಸವರಾಜ, ಮಹಮ್ಮದ್ ನಹೀಂ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಎಂ.ಜಂಬಯ್ಯ ನಾಯಕ, ತಾಯಪ್ಪ ನಾಯಕ, ರಮೇಶ್‌, ಎಸ್‌ಎಫ್‌ಐನ ಜಿಲ್ಲಾ ಸಹ ಕಾರ್ಯದರ್ಶಿ ಕೆ.ಪವನ ಕುಮಾರ್, ಸಹನಾ, ಖುಷಿ, ಶಾರದಾ, ಕೀರ್ತಿ, ಡಿವೈಎಫ್‌ಐನ ಈ.ಮಂಜುನಾಥ, ಸಿಐಟಿಯುನ ಎಂ.ಗೋಪಾಲ್‌, ನಾಗರತ್ನಮ್ಮ ಮತ್ತಿತರರಿದ್ದರು.