ಸಾರಾಂಶ
ಉದ್ಯೋಗದಾಸೆ ತೋರಿಸಿ ವಿದೇಶಿ ಯುವತಿಯರ ಬಳಸಿ ಕೃತ್ಯ. ಮಾನವ ಕಳ್ಳ ಸಾಗಾಣಿಕೆಯಲ್ಲೂ ಈಕೆ ಕಿಂಗ್ ಪಿನ್. 9 ಮಂದಿಯ ಸೆರೆ, ಬೆಂಗಳೂರಿನ ವ್ಯಕ್ತಿಯನ್ನು ಪ್ರೇಮ ವಿವಾಹ ಆಗಿದ್ದ ಉಜ್ಬೇಕಿಸ್ತಾನ್ ದೇಶದ ಮಹಿಳೆ, ಟೆಲಿಗ್ರಾಂ, ವಾಟ್ಸಪ್‌ನಲ್ಲಿ ಬೆಂಗಳೂರು ಡೇಟಿಂಗ್ ಕ್ಲಬ್ ಎಂಬ ಗ್ರೂಪ್ ತೆರೆದು ಕೃತ್ಯ, ವಿವಿಧ ನಗರಗಳಲ್ಲಿ ವೇಶ್ಯಾವಾಟಿಕೆ ಜಾಲ, ಹೋಟೆಲ್ ಮೇಲೆ ದಾಳಿ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ ‘ಆನ್‌ಲೈನ್ ವೇಶ್ಯಾವಾಟಿಕೆ’ ದಂಧೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಸೇರಿದಂತೆ ಒಂಭತ್ತು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಒಡಿಶಾ ರಾಜ್ಯದ ಪ್ರಮೋದ್ ಕುಮಾರ್ ಲೆಂಕ, ಮನೋಜ್ ದಾಸ್, ಅಸ್ಸಾಂನ ಸೌಮಿತ್ರಚಂದ್ರ, ರಾಜಗೋಪಾಲ ನಗರದ ಜತೇಂದ್ರ ಸಾಹೂ, ಮಹಾಲಕ್ಷ್ಮಿ ಲೇಔಟ್‌ನ ಕೆ.ಪ್ರಕಾಶ್ ಅಲಿಯಾಸ್ ಆಕಾಶ್, ಲಗ್ಗೆರೆಯ ವೈಶಾಖ್, ಪರಪ್ಪನ ಅಗ್ರಹಾರದ ಗೋವಿಂದರಾಜ್, ನಂದಿನಿಲೇಔಟ್‌ನ ಅಕ್ಷಯ್, ಪುಲಕೇಶಿ ನಗರದ ಬಿಯೋಯಿನ್ಯಾಜ್ ಬಂಧಿತರಾಗಿದ್ದು, ಈ ದಾಳಿ ವೇಳೆ ಆರೋಪಿಗಳಿಂದ ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿಗೆ ದೊಮ್ಮಲೂರು ಸಮೀಪದ ಎಚ್‌ಬಿಸಿಎಸ್ ಲೇಔಟ್‌ನಲ್ಲಿದ್ದ ‘ದಿ ಲೀಲಾ ಪಾರ್ಕ್ ಹೋಟೆಲ್’ ಮೇಲೆ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಸಾರಥ್ಯದಲ್ಲಿ ಕಾರ್ಯಾಚರಣೆ ನಡೆಸಿ ಆನ್‌ಲೈನ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ವಿದೇಶಿ ಮಹಿಳೆಯರ ಕಿಂಗ್ ಪಿನ್ ನ್ಯಾಜ್:
ಹದಿನೈದು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದ ಉಜ್ಬೇಕಿಸ್ತಾನ ದೇಶದ ಬಿಯೋಯಿನ್ಯಾಜ್, ಸ್ಥಳೀಯ ವ್ಯಕ್ತಿಯೊಬ್ಬರ ಜತೆ ಪ್ರೇಮ ವಿವಾಹವಾಗಿದ್ದಳು. ಈ ದಂಪತಿಗೆ ಓರ್ವ ಮಗನಿದ್ದಾನೆ. ವಿದೇಶದಿಂದ ಉದ್ಯೋಗ ನೆಪದಲ್ಲಿ ನಗರಕ್ಕೆ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆಗೆ ಆಕೆ ದೂಡುತ್ತಿದ್ದಳು. ಹಲವು ವರ್ಷಗಳಿಂದ ಬೆಂಗಳೂರು ಹಾಗೂ ಮೈಸೂರು ಮಾತ್ರವಲ್ಲದೆ ರಾಜಸ್ಥಾನದ ಜೈಪುರ, ಚೆನ್ನೈ, ದೆಹಲಿ, ಉದಯ್‌ಪುರ ಹಾಗೂ ಮುಂಬೈ ಸೇರಿದಂತೆ ದೇಶ ವಿವಿಧ ನಗರಗಳಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ನ್ಯಾಜ್ ನಡೆಸುತ್ತಿದ್ದು, ವಿದೇಶಿ ಮಹಿಳೆಯರ ಮಾನವ ಕಳ್ಳ ಸಾಗಾಣಿಕೆಯನ್ನು ಆಕೆ ಕಿಂಗ್ ಪಿನ್ ಆಗಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.ಆನ್‌ಲೈನ್ ಮೂಲಕ ಬುಕ್ಕಿಂಗ್:
ಟೆಲಿಗ್ರಾಂ ಹಾಗೂ ವಾಟ್ಸ್ಆಪ್‌ನಲ್ಲಿ ಬೆಂಗಳೂರು ಡೇಟಿಂಗ್ ಕ್ಲಬ್ ಎಂಬ ಗ್ರೂಪ್ ಅನ್ನು ಆರೋಪಿಗಳು ಸೃಷ್ಟಿಸಿದ್ದು, ಇದರ ಮೂಲಕ ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅಂತೆಯೇ ದಿ ಲೀಲಾ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೂರ್ವ ವಿಭಾಗದ ಹಲಸೂರು ಹಾಗೂ ಬೈಯಪ್ಪನಪ್ಪನಹಳ್ಳಿ ಠಾಣೆಗಳ ಪೊಲೀಸರು ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಈ ದಾಳಿ ವೇಳೆ ರಕ್ಷಿಸಲಾದ ಐವರು ವಿದೇಶಿ ಮಹಿಳೆಯರನ್ನು ಪ್ರಾದೇಶಿಕ ವಿದೇಶಿಯರ ನೋಂದಾಣಾಧಿಕಾರಿ (ಎಫ್‌ಆರ್‌ಆರ್‌ಒ) ಮುಂದೆ ಹಾಜರುಪಡಿಸಲಾಯಿತು. ಈ ಸಂತ್ರಸ್ತೆಯನ್ನು ಅವರ ದೇಶಕ್ಕೆ ಮರಳಿ ಕಳುಹಿಸಲು ಎಫ್‌ಆರ್‌ಆರ್‌ಒ ಮೂಲಕ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.