ಸಾರಾಂಶ
ಗದಗ: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಕೋಟ್ಯಂತರ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ ನಿಜವಾಗಿ ಮಾನವ ಹಕ್ಕುಗಳ ರಕ್ಷಣೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗದಗ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳು ಅಸಾಧ್ಯ ಎಂದು ಹೇಳಿದವರು ಬೇರಾಗುವಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಥಮಾಧ್ಯತೆ ಮೇರೆಗೆ ಅನುಷ್ಠಾನಕ್ಕೆ ತಂದು ಬಡತನ ರೇಖೆಯಿಂದ ಮೇಲಕ್ಕೆತ್ತಿ ಕ್ರಾಂತಿಕಾರಕ ಕ್ರಮ ಕೈಗೊಂಡೆವು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಿಂದಲೂ ಬಡತನ ನಿರ್ಮೂಲನೆ ಪ್ರಾರಂಭವಾಗಿ ಬಡವರಿಗೆ ಇರಲು ಸೂರು ನೀಡಿ, ಆಹಾರದಾನ್ಯ, ಪಿಂಚಣಿ ನೀಡಿ ಈ ರೀತಿಯ ಚಿಂತನೆ ನಡೆಸಿ ಸರ್ವ ಜನಾಂಗದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮದ ಮೂಲಕ ಬಡತನವನ್ನು ಬೇರು ಸಮೇತ ಕಿತ್ತೆ ಎಸೆಯುವ ನಿರಂತರ ಪ್ರಯತ್ನ ಅಂದುನಿಂದಲೇ ಇತ್ತು, ಇಂದು ಅದು ಸಾಕಾರಗೊಂಡಿದೆ ಎಂದು ಹೇಳಿದರು.
ಬಡವರ ಏಳೆಗೆ ಉದ್ದೇಶಿಸಿ ಪ್ರಾರಂಭವಾದ ಯೋಜನೆಗಳಿಗೆ ಎಷ್ಟೇ ಅಡಚಣೆ ಟೀಕೆಗಳು ಬಂದರು ಸತತವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಬ್ರಿಟಿಷ್ ರ ಕಾಲದಿಂದಲೂ ಬಳವಳಿಯಾಗಿ ಬಂದಿರುವ ಭ್ರಷ್ಟಾಚಾರ,ವಿಳಂಬ ದ್ರೋಹ, ಶೋಷಣೆ ಇಂತಹ ಎಲ್ಲ ವಾಸ್ತವ ತೊಂದರೆಗಳನ್ನು ಎದುರಿಸಿ ಮಧ್ಯವರ್ತಿಯ ಹಾವಳಿ ತಪ್ಪಿಸಿ 1.10 ಕೋಟಿಗೂ ಹೆಚ್ಚು ಕುಟುಂಬಗಳಿಗೆ ತಿಂಗಳಿಗೆ ₹5 ಸಾವಿರದಂತೆ ವಾರ್ಷಿಕ ₹60 ಸಾವಿರಗಳನ್ನು ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಿ ಬಡತನ ರೇಖೆಯಿಂದ ಮೇಲೆತ್ತಿ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಗದಗ ಜಿಲ್ಲೆಯೂ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಬರುವಂತೆ ಎಲ್ಲರು ಪ್ರಾಮಾಣಿಕವಾಗಿ ಶ್ರಮ ವಹಿಸಿ ಪ್ರತಿಯೊಂದು ಗ್ಯಾರಂಟಿ ಯೋಜನೆಯಲ್ಲಿ ಶೇ.100 ರಷ್ಟು ಸಾಧಿಸುವಂತೆ ಮಾಡೋಣ ಹಾಗೂ ಇದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಪ್ರಥಮ ಸಭೆಯಾಗಿದ್ದು, ಸಭೆಯಲ್ಲಿರುವ ವಿವಿಧ ತಾಲೂಕು ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರು ಮುಕ್ತವಾಗಿ ತಮ್ಮ ಸೂಚನೆ ಸಲಹೆ ನೀಡಬೇಕು ಎಂದರು.
ಗೃಹಜ್ಯೊತಿ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಅರ್ಹವಿರುವ 278286 ಸ್ಥಾವರಗಳಲ್ಲಿ 272085 ಸ್ಥಾವರಗಳು ನೋಂದಣಿಯಾಗಿ ಗೃಹಜ್ಯೊತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎದ ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಯಜಮಾನಿ ಕಾರ್ಡ ಹೊಂದಿರುವವರ ಸಂಖ್ಯೆ ಒಟ್ಟು 248118 ಇದರಲ್ಲಿ 246675 ಅರ್ಜಿಗಳು ಸ್ವೀಕೃತಗೊಂಡಿವೆ. 243555 ಅರ್ಜಿಗೆ ಮಂಜೂರಾಗಿ ಶೇ.98.70 ರಷ್ಟು ಗುರಿ ಸಾಧಿಸಲಾಗಿದೆ. ಎನ್‌ಪಿಸಿಐ ವಿಫಲ ವರದಿ( ಜಿಎಸ್ ಟಿ/ ಐಟಿ ತೊಂದರೆಗಳಿಂದ 1320 ಅರ್ಜಿಗಳು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಅನ್ನಭಾಗ್ಯ ಯೋಜನೆಯಡಿ ಡಿಬಿಟಿ ಮೂಲಕ ನಗದು ವರ್ಗಾವಣೆಯನ್ನು ಜುಲೈ-2023 ರಿಂದ ಆರಂಭಿಸಲಾಯಿತು. ಪ್ರತಿ ಸದಸ್ಯರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಮೊತ್ತ ₹170 ರಂತೆ 643423 ಜನರಿಗೆ ಜುಲೈ-2023 ರಲ್ಲಿ ಪಾವತಿಸಲಾಯಿತು.ನಂತರ ನಿರಂತರವಾಗಿ ಪ್ರತಿ ತಿಂಗಳು ಪಾವತಿಸಲಾಗುತ್ತಿದೆ. ಜೂನ್ 2024 ರಲ್ಲಿ 759604 ಸದಸ್ಯರಿಗೆ ಡಿಬಿಟಿ ಮೂಲಕ ಹೆಚ್ಚುವರಿ ಅಕ್ಕಿಯ ಮೊತ್ತ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಿಂದ ಜಿಲ್ಲೆಯಲ್ಲಿ 65073969 ಮಹಿಳೆಯರು ಸದುಪಯೋಗ ಪಡೆದುಕೊಂಡು ವಾಕರಾ ಸಂಸ್ಥೆಗೆ ಸೆಪ್ಟೆಂಬರ್ 2024 ರವರೆಗೆ 2017355286 ಆದಾಯ ಹೊಂದಿದೆ ಎಂದು ಮಾಹಿತಿ ನೀಡಿದರು.ಯುವ ನಿಧಿ ಯೋಜನೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳು ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು ಡಿಪ್ಲೋಮಾ ಹೊಂದಿದವರಿಗೆ ಈ ಯೊಜನೆ ಅನ್ವಯವಾಗುತ್ತದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಅಧ್ಯಯನ ಮಾಡಿ 2023 ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೊಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹3 ಸಾವಿರ ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹1500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಯುವನಿಧಿ ಯೋಜನೆಯಡಿ ಇದುವರೆಗೆ 7270 ಅಭ್ಯರ್ಥಿಗಳ ನೋಂದಣಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್ ಎಸ್, ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ನೀಲಮ್ಮ ಬೊಳನವರ, ಹೇಮಂತಗೌಡ ಪಾಟೀಲ, ಶರಣಪ್ಪ ಬೇಟಗೇರಿ, ಪಿ.ಬಿ. ಅಳಗವಾಡಿ, ದೀಪಕ್ ಲಮಾಣಿ, ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು. ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಇದ್ದರು.