ಸಾರಾಂಶ
ರಾಜ್ಯ ಸರ್ಕಾರವು ಹಾಲಿನ ದರ ಏರಿಸಿದೆ. ರೈತರಿಗೆ ವರ್ಷಕ್ಕೆ 4 ಸಾವಿರಗಳನ್ನು ಕೊಡುತ್ತಿದ್ದ ಹಾಲಿನ ಹಣವನ್ನು ಸಹ ಸರ್ಕಾರ ತಡೆದಿದೆ. ಪೆಟ್ರೋಲ್, ಡೀಸೆಲ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೂ ಉಪಯೋಗಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು 25 ಸಾವಿರದಿಂದ 2 ಲಕ್ಷಗಳವರೆಗೂ ಏರಿಸಿದೆ. ಭ್ರಷ್ಟಾಚಾರವು ಮಿತಿ ಮೀರಿದ್ದು ಪರಿಶಿಷ್ಟ ಪಂಗಡ ನಿಗಮಕ್ಕೆ ನೀಡಿದ್ದ 187 ಕೋಟಿಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಗುಳುಂ ಮಾಡಿರುತ್ತಾರೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾ ರೈತ ಮೋರ್ಚ ಜಿಲ್ಲಾಧ್ಯಕ್ಷ ಬಿ. ಎಚ್. ನಾರಾಯಣಗೌಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರಕಾರವು ನಡೆಸುತ್ತಿರುವ ಭ್ರಷ್ಟಾಚಾರ, ಹಾಲಿನ ಬೆಲೆ ಏರಿಕೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜು.2ರಂದು ಡೀಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಜಿಲ್ಲಾ ರೈತ ಮೋರ್ಚ ಜಿಲ್ಲಾಧ್ಯಕ್ಷ ಬಿ. ಎಚ್. ನಾರಾಯಣಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಜ್ಯ ಸರ್ಕಾರವು ಹಾಲಿನ ದರ ಏರಿಕೆ, ಪೆಟ್ರೋಲ್ ಡೀಸೆಲ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೂ ಉಪಯೋಗಿಸುತ್ತಿರುವ ಟ್ರನ್ಸ್‌ಫಾರ್ಮರ್‌ಗಳನ್ನು 25 ಸಾವಿರದಿಂದ 2 ಲಕ್ಷಗಳವರೆಗೂ ಏರಿಸಿರುತ್ತಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ವರ್ಷಕ್ಕೆ 4 ಸಾವಿರಗಳನ್ನು ಕೊಡುತ್ತಿದ್ದ ಹಾಲಿನ ಹಣವನ್ನು ಸಹ ಸರ್ಕಾರ ತಡೆದಿರುತ್ತದೆ. ಭ್ರಷ್ಟಾಚಾರವು ಮಿತಿ ಮೀರಿದ್ದು ಪರಿಶಿಷ್ಟ ಪಂಗಡ ನಿಗಮಕ್ಕೆ ನೀಡಿದ್ದ 187 ಕೋಟಿಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಗುಳುಂ ಮಾಡಿರುತ್ತಾರೆ. ಅಂಬೇಡ್ಕರ್ ನಿಗಮಕ್ಕೆ ನೀಡಿದ್ದ 11 ಸಾವಿರ ಕೋಟಿಗಳನ್ನು ಸಹ ಸರ್ಕಾರವೇ ವಾಪಸ್ ಪಡೆದಿರುತ್ತದೆ ಎಂದು ದೂರಿದರು.
ರೈತರ ಜಮೀನಿನ ಪಹಣಿಯನ್ನು 10 ರಿಂದ 40 ರು.ವರೆಗೆ ಏರಿಸಿದ್ದಾರೆ. ಜಮೀನಿನ ಮುದ್ರಾಂಕ ಶುಲ್ಕವನ್ನು ಶೇಕಡ 30ರಷ್ಟು ಏರಿಸಿದ್ದು, ಈ ಏರಿಕೆಯಿಂದ ರೈತರು ಮಾರಲು ಹಾಗೂ ಕೊಂಡುಕೊಳ್ಳಲು ಆಗದೆ ಪರಿತಪಿಸುತ್ತಿದ್ದಾರೆ. ಹಾಗಾಗಿ ಸರ್ಕಾರದ ಈ ನೀತಿಯ ವಿರುದ್ದ ಹಾಸನ ಜಿಲ್ಲಾ ರೈತ ಮೋರ್ಚಾ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಜು.2ರ ಮಂಗಳವಾರದಂದು ಪ್ರತಿಭಟನಾ ಧರಣಿ ನಡೆಸಲಾಗುತ್ತದೆ. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ತಮ್ಮ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯುವ ಮೋರ್ಚದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಈಶ್ವರ್, ಕಾರ್ಯಾಧ್ಯಕ್ಷ ಶಕುನಿಗೌಡ , ಪಾಪಣ್ಣ, ಪ್ರಧಾನ ಕಾರ್ಯದರ್ಶಿ ನಾಗರಾಜು, ಇತರರು ಉಪಸ್ಥಿತರಿದ್ದರು.