ಗೋಶಾಲೆ, ಮೇವು ಬ್ಯಾಂಕ್‌ಗಳ ಸಮರ್ಪಕ ದಾಖಲೆ ನೀಡಿ

| Published : May 15 2024, 01:39 AM IST

ಸಾರಾಂಶ

ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮೇವು ಬ್ಯಾಂಕ್‌ಗಳು ಹಾಗೂ ಗೋಶಾಲೆಗಳಲ್ಲಿನ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಕಾರ್ಯವೈಖರಿಯನ್ನು ಸಮರ್ಪಕವಾಗಿ ದಾಖಲೀಕರಣ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮೇವು ಬ್ಯಾಂಕ್‌ಗಳು ಹಾಗೂ ಗೋಶಾಲೆಗಳಲ್ಲಿನ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಕಾರ್ಯವೈಖರಿಯನ್ನು ಸಮರ್ಪಕವಾಗಿ ದಾಖಲೀಕರಣ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿರ್ವಹಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲೆಯನ್ನು ಸರ್ಕಾರವು ಬರಪೀಡಿತ ಜಿಲ್ಲೆಯಾಗಿ ಘೊಷಿಸಿರುವುದರಿಂದ ಬರ ಪರಿಸ್ಥಿತಿ ನಿರ್ವಹಣೆಗಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹನೂರು ತಾಲೂಕಿನಲ್ಲಿ ಒಟ್ಟು ೧೭ ಗೋಶಾಲೆಗಳು ಮತ್ತು ಚಾಮರಾಜನಗರ ತಾಲೂಕಿನಲ್ಲಿ ೨, ಗುಂಡ್ಲುಪೇಟೆಯಲ್ಲಿ 1 ಮತ್ತು ಹನೂರು ತಾಲೂಕಿನಲ್ಲಿ ೪ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ ಎಂದರು.

ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಿರ್ವಹಿಸಿ:

ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳ ಪ್ರತಿನಿತ್ಯದ ವಹಿವಾಟುಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಮೇವಿನ ಲಭ್ಯತೆ, ಪ್ರತಿನಿತ್ಯದ ದಾಸ್ತಾನು, ವಿತರಣೆ ಬಗ್ಗೆ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಗೋಶಾಲೆ ತೆರೆಯಲು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಸಂಬಂಧ ಚೆಕ್‌ಲಿಸ್ಟ್ ಅನ್ನು ಪಟ್ಟಿ ಮಾಡಿ ಅದರನ್ವಯ ಕಾರ್ಯುನಿರ್ವಹಣೆಗೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಿದರು.

ಬರ ನಿರ್ವಹಣೆ ಸಂಬಂಧ ರೈತರು ತಮ್ಮ ಜಮೀನುಗಳಲ್ಲಿ ಮೇವು ಬೆಳೆಯಲು ಅನುಕೂಲವಾಗುವಂತೆ ಪಶುಪಾಲನಾ ಇಲಾಖೆಯಿಂದ ಮಿನಿ ಮೇವಿನ ಕಿಟ್ (ಬೀಜ)ಗಳನ್ನು ನೀಡಲಾಗುತ್ತದೆ. ಚಾಮರಾಜನಗರ ತಾಲೂಕಿನ ೯೩೮೮, ಗುಂಡ್ಲುಪೇಟೆಯ ೯೩೮೭, ಕೊಳ್ಳೇಗಾಲ ೭೪೩೫, ಹನೂರು ೯೯೬೬ ಮತ್ತು ಯಳಂದೂರಿನ ೧೩೪೩ ಸೇರಿ ಜಿಲ್ಲೆಯಲ್ಲಿ ಒಟ್ಟು ೩೭೫೧೯ ರೈತರಿಗೆ ಈಗಾಗಲೇ ಮಿನಿ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ವಿತರಣೆ ಬಳಿಕ ರೈತರು ಮೇವಿನ ಬೀಜ ಬಿತ್ತಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪಶು ಪರಿವೀಕ್ಷಕರು ಈ ಕುರಿತು ಕಡತ ಹಾಗೂ ಛಾಯಾಚಿತ್ರ ದಾಖಲಿಕರಣ ಮಾಡಬೇಕು ಎಂದರು.

ಮೇವು ಬ್ಯಾಂಕ್‌ನಲ್ಲಿ ಮೇವಿನ ಅಗತ್ಯವಿದ್ದರೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಕ್ಷೇತ್ರಪ್ರವಾಸ ಮಾಡಿ ಪರಿಶೀಲಿಸಬೇಕು. ಮೇವು ವಿತರಣೆಗೆ ಮೊದಲು ಗುಣಮಟ್ಟವನ್ನು ಅಧಿಕಾರಿಗಳು ತಪಾಸಣೆ ಮಾಡಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಮೇವು ಅಗತ್ಯವಿರುವ ರೈತರಿಗೆ ಮೊದಲ ಆದ್ಯತೆ ಮೇರೆಗೆ ಮೇವು ಒದಗಿಸಬೇಕು. ಹಣಪಾವತಿಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಾಗಬಾರದು. ಜಾನುವಾರುಗಳಿಗೆ ಔಷಧ ದಾಸ್ತಾನು ಸಮರ್ಪಕವಾಗಿರಬೇಕು. ಇಲಾಖೆ ಬಗ್ಗೆ ಜನರಿಗೆ ಗೌರವ, ವಿಶ್ವಾಸ ಮೂಡುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಎಸಿ ಶಿವಮೂರ್ತಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹನುಮೇಗೌಡ, ಹನೂರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು, ಎಲ್ಲಾ ತಾಲೂಕುಗಳ ತಹಸೀಲ್ದಾರರು, ತಾಪಂ ಇಒಗಳು , ಪಶು ಪರಿವೀಕ್ಷಕರು, ಸಭೆಯಲ್ಲಿ ಉಪಸ್ಥಿತರಿದ್ದರು.