ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ನೆರವು ಕಲ್ಪಿಸಿ

| Published : Feb 13 2024, 12:45 AM IST

ಸಾರಾಂಶ

ಜಿಲ್ಲೆಯ ಹಲವು ಸ್ವ-ಸಹಾಯ ಗುಂಪುಗಳು ಹಾಗೂ ಆಸಕ್ತಿ ಇರುವ ವ್ಯಕ್ತಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಲು ಉತ್ಸಕರಾಗಿದ್ದು ಇಂತಹವರಿಗೆ ರಾಷ್ಟ್ರೀಯ ಬ್ಯಾಂಕುಗಳು ಹಣಕಾಸು ನೆರವು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಜಿಲ್ಲೆಯ ಹಲವು ಸ್ವ-ಸಹಾಯ ಗುಂಪುಗಳು ಹಾಗೂ ಆಸಕ್ತಿ ಇರುವ ವ್ಯಕ್ತಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಲು ಉತ್ಸಕರಾಗಿದ್ದು ಇಂತಹವರಿಗೆ ರಾಷ್ಟ್ರೀಯ ಬ್ಯಾಂಕುಗಳು ಹಣಕಾಸು ನೆರವು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದರು.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ (ಪಿಎಂಎಫ್‍ಎಂಇ) ಹಾಗೂ ಕೃಷಿ ಮೂಲಭೂತ ಸೌಕರ್ಯ ನಿಧಿ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿ, ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಉದ್ದಿಮೆ ವಿಸ್ತರಿಸಲು ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ 380 ಘಟಕಗಳಿಗೆ ಆರ್ಥಿಕ ನೆರವು ನೀಡಲು ಗುರಿ ಹೊಂದಲಾಗಿದ್ದು, ಒಟ್ಟು 397 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 205 ಅರ್ಜಿ ಯೋಜನಾ ವರದಿ ಸಿದ್ದವಾಗಿದ್ದು, 192 ಅರ್ಜಿಗಳು ಬ್ಯಾಂಕ್ ಸಹಾಯಧನಕ್ಕೆ ಸ್ವೀಕೃತವಾಗಿವೆ. 2020-21 ಸಾಲಿನಿಂದ 2023-24 ಸಾಲಿನವರಿಗೆ 60 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 59 ಅರ್ಜಿ ಬ್ಯಾಂಕುಗಳಿಂದ ನಾನಾ ಕಾರಣಗಳಿಗೆ ತಿರಸೃತಗೊಡಿವೆ. 41 ಅರ್ಜಿ ಮಂಜೂರಾತಿ ಕಾರ್ಯಪ್ರಗತಿಯಲ್ಲಿವೆ. ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳು ಈ ಅರ್ಜಿ ಪರಿಶೀಲಿಸಿ ಹಣಕಾಸು ಮಂಜೂರಾತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬ್ಯಾಂಕ್ ಅಧಿಕಾರಿಗಳಲ್ಲಿ ಕೋರಿದರು.

ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗೀ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ.35 ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ.15 ರಷ್ಟು ಸಹಾಯಧನ ನೀಡಲಾಗುವುದು. ಗರಿಷ್ಠ 15 ಲಕ್ಷ ಅಥವಾ ಶೇ.50 ರಷ್ಟು ಸಹಾಯಧನವನ್ನು ಪಡೆಯಬಹುದು ಎಂದರು.

ಪ್ರಾಥಮಿಕ ಬಂಡವಾಳವಾಗಿ ಸ್ವಸಹಾಯ ಸಂಘಗಳ ಸದಸ್ಯರಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಠ ರು.40,000 ನೀಡಲಾಗುವುದು. ಸ್ವಸಹಾಯ ಸಂಘದವರಿಗೆ ಗರಿಷ್ಠ 4 ಲಕ್ಷ ರು.ವರೆಗೆ ಪಡೆಯಲು ಅವಕಾಶವಿದೆ. ಗರಿಷ್ಠ ಯೋಜನಾ ವೆಚ್ಚ ರು.10 ಕೋಟಿಗೆ ರು.3 ಕೋಟಿ ಗರಿಷ್ಠ ಸಹಾಯಧನ ನೀಡಲಾಗುವುದು. ಆಹಾರ ಪದಾರ್ಥಗಳ ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಸ್ಥಾಪಿಸಲು ಅವಕಾಶವಿದೆ. ಬ್ರಾಂಡಿಗ್, ಮತ್ತು ಮಾರುಕಟ್ಟೆ ವಿಸ್ತರಣೆ ಶೇ.50ರಷ್ಟು ಸಹಾಯಧನ ನೀಡಲಾಗುವುದು ಎಂದರು.

ಕೃಷಿ ಉಪನಿರ್ದೇಶಕ ಪ್ರಭಾಕರ್ ಮಾತನಾಡಿ, ಬ್ಯಾಂಕುಗಳು ಅರ್ಜಿದಾರರಿಗೆ ಆಧಾರ ನೀಡುವಂತೆ ಅಥವಾ ಇತರೆ ಕಾರಣ ನೀಡಿ ಯೋಜನೆಗೆ ಮಂಜೂರಾತಿ ನೀಡುವುದನ್ನು ತಡೆಯಬಾರದು ಎಂದು ಕೋರಿದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶಶಿಧರ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಶಾಲು ಹೂವಿನ ಗುಚ್ಛ ನೀಡುವ ಬದಲು ಸಂಸ್ಕರಿಸಿದ ಕೃಷಿ ಉತ್ಪನ್ನ ಅತಿಥಿಗಳಿಗೆ ನೀಡುವುದರ ಮೂಲಕ ಆಹಾರ ಸಂಸ್ಕರಣ ಉದ್ಯಮಕ್ಕೆ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು. ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಸೇರಿ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.