ಹಾಸ್ಟೇಲಿನಲ್ಲಿ ವಿದ್ಯಾರ್ಥಿಗಳಿಗೆ ಶುಚಿ-ರುಚಿ ಆಹಾರ ನೀಡಿ

| Published : Dec 22 2024, 01:35 AM IST

ಸಾರಾಂಶ

ಸಾಂಬಾರಿನಲ್ಲಿ ಬೇಳೆ ಸೇರಿದಂತೆ ತರಕಾರಿಯೇ ಇರುವುದಿಲ್ಲ. ನೀರಿನಂತೆ ಸಾಂಬಾರು ಇರುತ್ತದೆ.

ಹೂವಿನಹಡಗಲಿ: ಪಟ್ಟಣದ ಹಳೆ ತಾಲೂಕು ಕಚೇರಿ ಹಿಂಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗೆ ಶಾಸಕ ಕೃಷ್ಣನಾಯ್ಕ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಸರ್ಕಾರದ ಮೆನು ಪ್ರಕಾರ ಅಡುಗೆ ಮಾಡುತ್ತಿಲ್ಲ. ನಿತ್ಯ ಅನ್ನ, ಸಾಂಬಾರ್ ಮಾತ್ರ ಮಾಡುತ್ತಾರೆ. ಸಾಂಬಾರಿನಲ್ಲಿ ಬೇಳೆ ಸೇರಿದಂತೆ ತರಕಾರಿಯೇ ಇರುವುದಿಲ್ಲ. ನೀರಿನಂತೆ ಸಾಂಬಾರು ಇರುತ್ತದೆ. ಒಟ್ಟಾರೆ ಊಟ ಶುಚಿ-ರುಚಿ ಇರುವುದಿಲ್ಲ. ಅಳತೆ ಪ್ರಮಾಣದಲ್ಲಿ ಊಟ ಹಾಕುವುದಿಲ್ಲ, ಇದರಿಂದ ಹೊಟ್ಟೆ ತುಂಬುವುದಿಲ್ಲ, ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಶಾಸಕರ ಎದುರಿಗೆ ವಿದ್ಯಾರ್ಥಿನಿಯರು ಹಂಚಿಕೊಂಡರು.ಹಾಸ್ಟೆಲ್‌ ಅಡುಗೆ ಕೋಣೆ ವೀಕ್ಷಣೆ ಮಾಡುತ್ತಾ, ಹಾಸ್ಟೆಲ್‌ಗೆ ಬಡ ಮಕ್ಕಳು ಬರುತ್ತಾರೆ, ಸರ್ಕಾರದ ನಿಯಮದ ಪ್ರಕಾರ ರುಚಿಯಾಗಿರುವ ಊಟ ತಯಾರು ಮಾಡದಿದ್ದರೆ, ಇಲ್ಲಿನ ಅಡುಗೆ ಸಿಬ್ಬಂದಿಯನ್ನು ಯಾವುದೇ ಮುಲಾಜು ಇಲ್ಲದೇ ಕಿತ್ತು ಹಾಕುತ್ತೇನೆ. ಮಕ್ಕಳಿಗೆ ಹೊಟ್ಟೆ ತುಂಬ ಆಹಾರ ಕೊಡಬೇಕು. ಅಡುಗೆಯಲ್ಲಿ ಹೆಚ್ಚಾಗಿ ತರಕಾರಿ ಬಳಕೆ ಮಾಡಬೇಕೆಂದು ಶಾಸಕರು ಹೇಳಿದರು.

ಶಾಲಾ ಕಾಲೇಜು ರಜಾ ಇದ್ದ ಸಂದರ್ಭದಲ್ಲಿ ಆದ್ಯತೆ ಮೇರೆಗೆ ಬಿಸಿಎಂ ಇಲಾಖೆಯ ಎಲ್ಲ ಹಾಸ್ಟೆಲ್‌ಗಳಲ್ಲಿರುವ ಅಡುಗೆ ಕೋಣೆ, ಶೌಚಾಲಯ, ಆಹಾರ ಧಾನ್ಯ ಸಂಗ್ರಹದ ಕೋಣೆ ಸೇರಿದಂತೆ ಎಲ್ಲವನ್ನು ಸಿಬ್ಬಂದಿಯಿಂದ ಸ್ವಚ್ಛತೆ ಮಾಡಿಸಬೇಕು. ನಾನು ಆಕಸ್ಮಿಕವಾಗಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮತ್ತೆ, ಸಮಸ್ಯೆ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ. ಅಶೋಕ ಅವರಿಗೆ ಸೂಚನೆ ನೀಡಿದರು.

ಕಳೆದ ಮೂರು ದಿನಗಳಿಂದ ಕುಡಿವ ನೀರಿನ ಸಮಸ್ಯೆ ಇದೆ. ಸ್ನಾನ ಹಾಗೂ ಬಟ್ಟೆ ಸೆಳೆಯಲು ನೀರಿಲ್ಲದಂತಾಗಿದೆ. ಸ್ವಚ್ಛತೆಯೇ ಇಲ್ಲದಂತಾಗಿದೆ ಎಂದು ದೂರು ಕೇಳಿ ಬಂದಿದೆ. ಈ ಕುರಿತು ಮೊದಲು ನೀವು ಕ್ರಮ ವಹಿಸಬೇಕಿದೆ ಎಂದು ಶಾಸಕರು ಅಧಿಕಾರಿಗೆ ಸೂಚಿಸಿದರು.

ಹಳೆ ತಾಲೂಕು ಕಚೇರಿಯ ಮೇಲಿನ ಹಾಸ್ಟೆಲ್‌ ಕೋಣೆಗಳು ಮಳೆ ಬಂದಾಗ ಸೋರುತ್ತಿವೆ. ಜತೆಗೆ ಕೋಣೆ ಮುಂಭಾಗದಲ್ಲಿ ಮಳೆ ನೀರು ನಿಲ್ಲುತ್ತದೆ. ಸರಾಗವಾಗಿ ಮಳೆ ನೀರು ಹರಿದು ಹೋಗಲು ಜಾಗವೇ ಇಲ್ಲದಂತಾಗಿದೆ. ಇದರಿಂದ ತೊಂದರೆ ಉಂಟಾಗುತ್ತದೆ ಎಂದು ವಿದ್ಯಾರ್ಥಿನಿಯರು ತಾವು ಅನುಭಸುತ್ತಿರುವ ಸಮಸ್ಯೆಯನ್ನು ಶಾಸಕರ ಮುಂದೆ ಹೇಳಿಕೊಂಡರು.

ಇಲ್ಲಿನ ಹಾಸ್ಟೆಲ್‌ ಕುರಿತು ಎಲ್ಲ ಸಮಸ್ಯೆ ಅಲಿಸಿದ್ದೇನೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಕೊಳವೆಬಾವಿಯ ಪೈಪ್‌ಲೈನ್‌ ದುರಸ್ತಿ ಮಾಡುತ್ತಿರುವಾಗ ಶಾಸಕರ ಭೇಟಿ ನೀಡಿದ್ದರು. ಮೊದಲು ಕುಡಿವ ನೀರು ಹಾಗೂ ಸ್ನಾನಕ್ಕೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಹಾಸ್ಟೆಲ್‌ ವಾರ್ಡನ್‌ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ ಸೇರಿದಂತೆ ಇತರರಿದ್ದರು.

ಸಾರು ಸವಿದ ಶಾಸಕ:

ಹಾಸ್ಟೆಲ್‌ನ ಅಡುಗೆ ಕೋಣೆಗೆ ಭೇಟಿ ನೀಡಿದ್ದರು. ಸಾರು ಹೇಗೆ ಕೊಡಿ ಎಂದು ತಾವೇ ಸವಿದರು. ರುಚಿಯಾಗಿದೆ ನಿತ್ಯ ಇದೇ ರೀತಿಯಲ್ಲಿ ಅಡುಗೆ ತಯಾರಿಸಬೇಕೆಂದು ಹೇಳಿದರು.