ಮತಗಟ್ಟೆ ಸಿಬ್ಬಂದಿಗೆ ತಾಜಾ, ಸ್ವಾದಿಷ್ಟ ಆಹಾರ ಪೂರೈಸಿ: ಜಿಲ್ಲಾಧಿಕಾರಿ ಗಂಗೂಬಾಯಿ

| Published : Apr 06 2024, 12:56 AM IST

ಮತಗಟ್ಟೆ ಸಿಬ್ಬಂದಿಗೆ ತಾಜಾ, ಸ್ವಾದಿಷ್ಟ ಆಹಾರ ಪೂರೈಸಿ: ಜಿಲ್ಲಾಧಿಕಾರಿ ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ದಿನ ಆಹಾರ ತಯಾರಿಕೆಗೆ ಬಿಸಿಯೂಟದ ಸಿಬ್ಬಂದಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಯುಕ್ತ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೆ ತಾಜಾ ಮತ್ತು ಸ್ವಾದಿಷ್ಟ ಭರಿತ ಆಹಾರ ಸಿದ್ಧಪಡಿಸಿ ವಿತರಿಸಬೇಕು ಎಂದು ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕರು ಮತ್ತು ಮಧ್ಯಾಹ್ನದ ಉಪಹಾರ ಯೋಜನೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿಯೇ ಎಲ್ಲ ಸಿಬ್ಬಂದಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುವುದು. ನಂತರ ಮತದಾನದ ಪರಿಕರಗಳೊಂದಿಗೆ ಮತಗಟ್ಟೆಗೆ ಆಗಮಿಸುವ ಸಿಬ್ಬಂದಿಗೆ ಸಂಜೆ ಚಹಾ, ರಾತ್ರಿಯ ಭೋಜನ, ಮರುದಿನ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಅತ್ಯಂತ ರುಚಿಕರವಾಗಿ ಮತ್ತು ತಾಜಾತನದಿಂದ ಕೂಡಿದ ಕಾಯಿಪಲ್ಯೆ ಮತ್ತು ಉತ್ತಮ ಗುಣಮಟ್ಟದ ದಿನಸಿ ಪದಾರ್ಥಗಳನ್ನು ಬಳಸಿ ಸಿದ್ಧಪಡಿಸಬೇಕು. ಮಧ್ಯಾಹ್ನ ಸಿಬ್ಬಂದಿಗೆ ಮಜ್ಜಿಗೆಯನ್ನು ನೀಡುವ ವ್ಯವಸ್ಥೆ ಮಾಡಬೇಕು. ಊಟ ಮತ್ತು ಉಪಹಾರದ ಕುರಿತಂತೆ ಯಾವುದೇ ಸಿಬ್ಬಂದಿಯಿಂದ ದೂರುಗಳು ಬಾರದಂತೆ ಉತ್ತಮ ರೀತಿಯಲ್ಲಿ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ತಮಗೆ ವಹಿಸಲಾದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮತಗಟ್ಟೆ ಸಿಬ್ಬಂದಿಗೆ ಆಹಾರ ತಯಾರಿಕೆಗೆ ಅಗತ್ಯವಿರುವ ಅನುದಾನವನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಲಾಗುತ್ತದೆ. ಬಿಸಿಯೂಟ ಕೋಣೆಗಳು ಇಲ್ಲದೇ ಇರುವ ಮತಗಟ್ಟೆಗಳಲ್ಲಿ, ಅಗತ್ಯ ವ್ಯವಸ್ಥೆ ಇರುವ ಸ್ಥಳದಲ್ಲಿ ಆಹಾರ ಸಿದ್ಧಪಡಿಸಿ ಮತಗಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಸೂಕ್ತ ವಾಹನ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಮತಗಟ್ಟೆಗಳಲ್ಲಿ ಸಿದ್ಧಡಿಸಿದ ಆಹಾರದ ಗುಣಮಟ್ಟದ ಬಗ್ಗೆ ಸ್ವತಃ ತಾವೇ ಬಂದು ಪರಿಶೀಲಿಸುವುದಾಗಿ ತಿಳಿಸಿದ ಡಿಸಿ, ಉಪಹಾರ ತಯಾರಿಸುವ ಮುನ್ನ ಸಿಬ್ಬಂದಿ ಯಾವುದಾದರೂ ಬೇರೆ ಆಯ್ಕೆ ತಿಳಿಸಿದರ ಅವರ ಇಚ್ಛೆಯ ಉಪಹಾರವನ್ನು ನೀಡಬೇಕು ಎಂದರು.

ಮತದಾನದ ದಿನ ಆಹಾರ ತಯಾರಿಕೆಗೆ ಬಿಸಿಯೂಟದ ಸಿಬ್ಬಂದಿ ಬಳಸಿಕೊಳ್ಳಬೇಕು. ಅಡುಗೆ ತಯಾರಿಸುವವರ ಕರ್ತವ್ಯ ನಿರ್ವಹಣೆಗೆ ಗೌರವಧನ ಬಿಡುಗಡೆ ಮಾಡುವ ಕುರಿತಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ. ಆಹಾರ ತಯಾರಿಕೆಯ ಸಿಬ್ಬಂದಿ ಮತಗಟ್ಟೆಗೆ ಸಾಕಷ್ಟು ಮುಂಚಿತವಾಗಿ ತೆರಳಿ, ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ಅಡುಗೆ ತಯಾರಿಕೆಗೆ ಬಳಸುವ ಅಗತ್ಯವಿರುವ ಎಲ್ಲ ಪರಿಕರಗಳು ಲಭ್ಯವಿರುವ ಬಗ್ಗೆ ಹಾಗೂ ಅವುಗಳನ್ನು ಸ್ವಚ್ಛಪಡಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಮತದಾನ ಕರ್ತವ್ಯ ನಿರ್ವಹಿಸಿ ಡಿಮಸ್ಟರಿಂಗ್ ಕೇಂದ್ರಗಳಿಗೆ ಬರುವ ಸಿಬ್ಬಂದಿಗೆ ಆಯಾ ಮಸ್ಟರಿಂಗ್ ಕೇಂದ್ರದಲ್ಲಿಯೇ ರಾತ್ರಿಯ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಡಿಮಸ್ಟರಿಂಗ್ ನಂತರ ಎಲ್ಲ ಸಿಬ್ಬಂದಿಗೆ ಅವರ ಕೇಂದ್ರ ಸ್ಥಾನಗಳಿಗೆ ತೆರಳಲು ಸೂಕ್ತ ವಾಹನ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಅಕ್ಷರ ದಾಸೋಹ ಮತ್ತು ಮಧ್ಯಾಹ್ನದ ಉಪಹಾರ ಯೋಜನೆಯ ಅಧಿಕಾರಿಗಳು ಇದ್ದರು.