ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಿರಾಣಿ ಸಮೂಹ ಸಂಸ್ಥೆಗೆ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಗುತ್ತಿಗೆ ಕೊಟ್ಟಿರುವುದು ಸರಿಯಷ್ಟೇ. ಆದರೆ, ಗುತ್ತಿಗೆ ಪಡೆದು ಐದು ವರ್ಷಗಳಾದರೂ ಈವರೆಗೆ ಕಾರ್ಖಾನೆಯ ಯಾವುದೇ ಸಾಲಗಳು ಸರಿಯಾದ ರೀತಿಯಲ್ಲಿ ತೀರುವಳಿಯಾಗಿರುವುದಿಲ್ಲ ಎಂದು ಶ್ರೀರಂಗಪಟ್ಟಣ ರೈತರು ಮತ್ತು ಕಬ್ಬು ಬೆಳೆಗಾರ ಹಿತರಕ್ಷಣಾ ಸಮಿತಿ ಪ್ರಮುಖ್ ಚಂದನ್ ಹೇಳಿದರು.ಗುತ್ತಿಗೆ ಪಡೆದ ನಿರಾಣಿ ಸಮೂಹ ಸಂಸ್ಥೆ ವಾರ್ಷಿಕವಾಗಿ ಪಾವತಿಸುವ ಗುತ್ತಿಗೆ ಮೊತ್ತ ೧ ಕೋಟಿ ರು.ನಲ್ಲಿ ಕಾರ್ಖಾನೆಯಲ್ಲಿರುವ ಸಿಬ್ಬಂದಿ ವೇತನ, ಇತರೆ ವ್ಯವಹಾರಗಳಿಗೆ ಖರ್ಚಾಗಿ ಹೋಗುತ್ತಿದೆ. ಇದರಿಂದ ಸಾಲ ಅಥವಾ ಸಾಲದ ಮೇಲಿನ ಬಡ್ಡಿಯಾಗಲೀ ತೀರುವಳಿಯಾಗದೆ ದಿನದಿಂದ ದಿನಕ್ಕೆ ಬಡ್ಡಿ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಕಾರ್ಖಾನೆಯನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದಂತಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸಕ್ತ ನಡೆದಿರುವ ಗುತ್ತಿಗೆಯಿಂದ ಕಾರ್ಖಾನೆಗೆ ಅನುಕೂಲವಾಗದೇ ಇರುವುದರಿಂದ ಮತ್ತೊಮ್ಮೆ ಸರ್ಕಾರ ಗುತ್ತಿಗೆ ಪ್ರಕ್ರಿಯೆ ಪರಿಶೀಲಿಸಿ ಸಹಕಾರಿ ಕ್ಷೇತ್ರದಲ್ಲೇ ಕಾರ್ಖಾನೆ ಉಳಿಸಿಕೊಟ್ಟು ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.ಕಾರ್ಖಾನೆಯ ಮುಂಭಾಗದಲ್ಲಿರುವ ಆಡಳಿತ ಕಚೇರಿಯ ಕಟ್ಟಡಗಳು ಮತ್ತು ತೇಗದ ಮರಗಳನ್ನು ನಿರಾಣಿ ಸಂಸ್ಥೆಯವರ ಅಧೀನಕ್ಕೆ ನೀಡದೇ ಇದ್ದರೂ ಸಹ ಅವರು ಯಾರ ಅನುಮತಿ ಪಡೆಯದೆ ಅನಧಿಕೃತವಾಗಿ ಕಾರ್ಖಾನೆಯ ಆಡಳಿತ ಕಚೇರಿಯ ಕೆಲವು ಕೊಠಡಿಗಳನ್ನು ಒಡೆದುಹಾಕಿ ಅವರ ಅನುಕೂಲಕ್ಕೆ ತಕ್ಕಂತೆ ಸ್ವಂತ ಬ್ಯಾಂಕ್‌ವೊಂದನ್ನು ತೆರೆದಿದ್ದಾರೆ. ಕಾರ್ಖಾನೆಯ ಆಡಳಿತ ಕಚೇರಿಯ ಕೊಠಡಿಗಳನ್ನು ಹೊರ ರಾಜ್ಯದಿಂದ ಬಂದಿರುವ ನೌಕರರಿಗೆ ವಸತಿ ಗೃಹಗಳನ್ನು ನೀಡಿದ್ದಾರೆ ಎಂದು ದೂರಿದಿರು.
ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿದ್ದು, ಇದರಿಂದ ಯಾರಿಗಾದರೂ ಅನಾಹುತ ಸಂಭವಿಸಿದರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರು.ಆಡಳಿತ ಕಚೇರಿಯ ಪಕ್ಕದಲ್ಲೇ ೧೩೦೦ ತೇಗದ ಮರಗಳಿದ್ದು, ಅದರ ಸುತ್ತ ಪಿಎಸ್‌ಎಸ್‌ಕೆಯವರು ನಿರ್ಮಿಸಿದ್ದ ತಂತಿ ಬೇಲಿಗಳನ್ನು ತೆರವುಗೊಳಿಸಿದ್ದು, ಯಾರಾದರೂ ಮರಗಳನ್ನು ಕಳ್ಳತನ ಮಾಡುವ ಸಾಧ್ಯತೆಗಳಿರುತ್ತವೆ. ಮರಗಳೀಗೆ ನೀರು ಹಾಯಿಸುವುದಕ್ಕೆ ನಿರ್ಮಿಸಿದ್ದ ಹಾಗೂ ಮರಗಳಿಗೆ ನೀರು ಹಾಕಲು ನಿರ್ಮಿಸಿದ್ದ ಪೈಪ್‌ಲೈನ್ ವ್ಯವಸ್ಥೆಯನ್ನು ನಿರಾಣಿ ಸಂಸ್ಥೆಯವರು ತೆರವು ಮಾಡಿರುವುದರಿಂದ ಮರಗಳು ಒಣಗಿಹೋಗುತ್ತಿವೆ ಎಂದು ಆಪಾದಿಸಿದರು.
ಕಾರ್ಖಾನೆಯನ್ನು ಗುತ್ತಿಗೆ ನೀಡಿದ ಅವಧಿಯಿಂದ ಇಲ್ಲಿಯವರೆಗೆ ಯಾವುದೇ ಸರ್ವಸದಸ್ಯರ ಮಹಾಸಭೆಗಳು ನಡೆಯದೆ ಹಾಗೂ ಕಾರ್ಖಾನೆಗೆ ಆಡಳಿತ ಮಂಡಳಿ ರಚನೆ ಮಾಡದಂತೆ ನಿರಾಣಿ ಸಂಸ್ಥೆಯವರು ತಮ್ಮ ರಾಜಕೀಯ ಅಧಿಕಾರದ ಪ್ರಭಾವದಿಂದ ತಡೆಹಿಡಿದು ಮನಸೋಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಖಾನೆಯ ಚರ-ಸ್ಥಿರ ಆಸ್ತಿಗಳನ್ನು ಮತ್ತು ಆಗು-ಹೋಗುಗಳನ್ನು ನೋಡಿಕೊಳ್ಳುವವರು ಇಲ್ಲದಂತಾಗಿದೆ ಎಂದು ದೂರಿದರು.ಕಳೆದ ಐದು ವರ್ಷಗಳನ್ನು ಕಾರ್ಖಾನೆಯ ಬೆಲೆಬಾಳುವ ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಬಿಚ್ಚಿದ್ದಾರೆ. ಅತಿ ಮುಖ್ಯವಾಗಿ ೩ ಎವಾಪರೇಟರ್ ಹಾಗೂ ಪ್ಯಾನ್ ಬಾಡಿಗಳಲ್ಲಿ ಕೋಟ್ಯಂತರ ರು. ಮೌಲ್ಯದ ಬ್ರಾಸ್‌ಟ್ಯೂಬ್‌ಗಳನ್ನು ಬಿಚ್ಚಿ ಆ ಜಾಗಕ್ಕೆ ಎಸ್‌ಎಸ್ ಟ್ಯೂಬ್‌ಗಳನ್ನು ಅಳವಡಿಸಿದ್ದಾರೆ. ಬ್ರಾಸ್ ಟ್ಯೂಬ್ ದರಕ್ಕೂ ಎಸ್‌ಎಸ್ ಟ್ಯೂಬ್ ದರಕ್ಕೂ ೧:೧೦ರ ಅನುಪಾತದಲ್ಲಿ ವ್ಯತ್ಯಾಸವಿದೆ ಎಂದರು.
ಕಾರ್ಖಾನೆಯಲ್ಲಿ ಹಾಲಿ ಇದ್ದ ಟರ್ಬೈನ್‌ಗಳು, ಜನರೇಟರ್‌ಗಳು, ಭಾರೀ ಮೋಟಾರ್‌ಗಳು ಹಾಗೂ ೫ ಸಾವಿರ ಟಿಸಿಡಿಗೆ ಏರಿಕೆ ಮಾಡಿದ ಸಮಯದಲ್ಲಿ ನಿರುಪಯುಕ್ತ ವಸ್ತುಗಳೆಂದು ಕಳಚಿರುವ ೩೫೦೦ ಟಿಸಿಡಿಯ ಯಂತ್ರೋಪಕರಣಗಳು, ಬಿಡಿಭಾಗಗಳು ಮತ್ತು ಕಾರ್ಖಾನೆಯ ಚರ-ಸ್ಥಿರ ಆಸ್ತಿಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಇದರ ಬಗ್ಗೆ ಗಮನಹರಿಸಬೇಕಾದ ಪಿಎಸ್‌ಎಸ್‌ಕೆಯಿಂದ ನೇಮಿಸಿರುವ ಕಾರ್ಮಿಕರು ಮತ್ತು ಯಾವುದೇ ಅಧಿಕಾರಿಗಳೂ ಕ್ರಮ ವಹಿಸಿರುವುದಿಲ್ಲ ಎಂದು ದೂರಿದರು.ನಿರಾಣಿ ಸಂಸ್ಥೆಯವರು ಗುತ್ತಿಗೆ ಕರಾರಿನ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಪಿಎಸ್‌ಎಸ್‌ಕೆ ಕಾರ್ಖಾನೆ ಮತ್ತು ಕಾರ್ಮಿಕರಿಗೆ ತುಂಬಾ ತೊಂದರೆ ಉಂಟುಮಾಡುತ್ತಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ವಕೀಲ ಬಾಲರಾಜ್, ಪಿ.ರಾಘು, ಸುಜನ್, ಸತೀಶ್ ಇತರರಿದ್ದರು.