ಸಾರಾಂಶ
ಹೆಣ್ಣು ಮಕ್ಕಳಿಗೆ ವಿದ್ಯೆಯನ್ನೇ ಕಲಿಸದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಡಿ ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಗಾಗಿ ಶ್ರಮಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ರೇಣುಕಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಹೆಣ್ಣು ಮಕ್ಕಳಿಗೆ ವಿದ್ಯೆಯನ್ನೇ ಕಲಿಸದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಡಿ ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಗಾಗಿ ಶ್ರಮಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ. ಪದವಿ ಪೂರ್ವ ಕಾಲೇಜಿನಲ್ಲಿ ಸಾವಿತ್ರಿಬಾಯಿ ಪುಲೆಯವರ ೧೯೪ನೇ ಜಯಂತಿಯಲ್ಲಿ ಮಾತನಾಡಿದ ಅವರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿ ಅನ್ವರ್ಥರಾಗಿ ಪುಲೆಯವರು ಅವಿರತವಾಗಿ ಹೋರಾಡಿ ಪ್ರಪ್ರಥಮವಾಗಿ ಹೆಣ್ಣು ಮಕ್ಕಳಿಗಾಗಿಯೇ ಶಾಲೆಯೊಂದನ್ನು ಪ್ರಾರಂಭಿಸಿ ಮೊದಲ ಮಹಿಳಾ ಶಿಕ್ಷಕಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಸಾಮಾಜಿಕ ಮತ್ತು ಮಾನವ ಹಕ್ಕುಗಳಾಗಿ ಹೋರಾಟ ಮಾಡಿ ಹೆಣ್ಣುಮಕ್ಕಳಿದ್ದಂತಹ ಭಯ, ಅಂಜಿಕೆ, ಆತಂಕ, ಸಂಕೋಚದ ಸ್ವಭಾವಗಳನ್ನು ನೀಗಿಸಿ ಶಿಕ್ಷಣದ ಮೂಲಕ ಆತ್ಮವಿಶ್ವಾಸವನ್ನು ತುಂಬಿದರು. ಜಗತ್ತಿನ ಎಲ್ಲಾ ರೀತಿಯ ಸಮಸ್ಯೆ ಮತ್ತು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಬೇಕೆಂಬುದನ್ನು ಪ್ರತಿಪಾದಿಸಿ ಜಯವನ್ನು ಸಾಧಿಸಿದರು. ಮಹಿಳೆಯರ ಸ್ವಾತಂತ್ರ, ಸಮಾನತೆ, ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದರು. ಅನಕ್ಷರತೆ, ಮೂಡನಂಬಿಕೆ, ಅಸಮಾನತೆ, ಶೋಷಣೆ, ಗುಲಾಮಗಿರಿಗಳ ವಿಮೋಚನೆಗಾಗಿ ಶಿಕ್ಷಣವೇ ಮದ್ದು ಎಂಬುದನ್ನು ಅರಿತು ದೇಶಾದ್ಯಂತ ಶಾಲೆಗಳನ್ನು ಸ್ಥಾಪಿಸಿ ಮುಕ್ತ ಕಲಿಕಾ ವಾತಾವರಣವನ್ನು ನಿರ್ಮಿಸಿಕೊಟ್ಟರು. ಸ್ವಂತ ಆಲೋಚನೆಯಿಂದ ಸದೃಢವಾದ ಬದುಕನ್ನು ಕಟ್ಟಿಕೊಳ್ಳಲು, ಗಟ್ಟಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಶಾಂತಿ ನೆಮ್ಮದಿಯನ್ನು ಪಡೆದುಕೊಂಡು ಸಾರ್ಥಕತೆ ಹೊಂದಲು ಮೌಲ್ಯಾಧಾರಿತ ಹಾಗೂ ಸಂಸ್ಕಾರದಿಂದ ಕೂಡಿದ ಶಿಕ್ಷಣದ ಅನಿವಾರ್ಯತೆಯನ್ನು ಅರ್ಥ ಮಾಡಿಸಿಕೊಟ್ಟ ಶ್ರೇಷ್ಠ ಸಾಧಕಿ ಪುಲೆಯೆಂದು ತಿಳಿಸಿದರು. ಹಿರಿಯ ಸಹ ಶಿಕ್ಷಕ ವಿಜಯಕುಮಾರ್ ಎಂ. ಅರ್ಕಚಾರಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರು ಸುಸಂಸ್ಕೃತ ಕುಟುಂಬದಿಂದ ಹುಟ್ಟಿಬಂದ ಮಹಿಳೆಯಾದ್ದರಿಂದ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಚಿಂತನೆ ನಡೆಸಿ ಅದರಂತೆ ಹೋರಾಟದ ಕಣಕ್ಕಿಳಿದರು. ಶಿಕ್ಷಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟರು. ಹೆಚ್ಚು ಅಧ್ಯಯನಶೀಲರಾಗಿ ಜ್ಞಾನ ಸಂಪಾದಿಸಿಕೊಂಡು ಧೈರ್ಯವಾಗಿ ಜೀವನ ನಿರ್ವಹಣೆ ಮಾಡುವುದನ್ನು ಕಲಿಸಿಕೊಟ್ಟ ಹೋರಾಟಗಾರ್ತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೋಧಕ ವರ್ಗದವರಾದ ನಾಗರಾಜ, ಸಿದ್ಧೇಶ್, ಉದಯ ಶಂಕರ್, ಬಸವರಾಜು, ದೇವರಾಜು, ವಿಜಯಕುಮಾರಿ, ಬಿಂದು ಪದ್ಮ, ಚಂದ್ರಕಲಾ, ಸಂಧ್ಯಾ, ಕುಮುದಾ, ಆಶಾ, ಶಿವಕುಮಾರಯ್ಯ, ಶಿವಣ್ಣ ಮತ್ತಿತರರಿದ್ದರು.