ಪುತ್ತೂರು ಶ್ರೀ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀಗೆ ಸೂರ್ಯರಶ್ಮಿ ಸ್ಪರ್ಶ

| Published : Mar 15 2024, 01:16 AM IST

ಪುತ್ತೂರು ಶ್ರೀ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀಗೆ ಸೂರ್ಯರಶ್ಮಿ ಸ್ಪರ್ಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷ ಮೀನ ಸಂಕ್ರಮಣದ ದಿನದಂದು ಮುಂಜಾನೆಯ ವೇಳೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಗುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು ನಗರದ ರೈಲು ನಿಲ್ದಾಣ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮೀನ ಸಂಕ್ರಮಣದ ದಿನವಾದ ಗುರುವಾರ ಬೆಳಗ್ಗೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಪ್ರತಿವರ್ಷ ಮೀನ ಸಂಕ್ರಮಣದ ದಿನದಂದು ಮುಂಜಾನೆಯ ವೇಳೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಗುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನದಂದು ಬೆಳಗ್ಗೆ 7.30ರ ಸಮಯದಲ್ಲಿ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ಪ್ರಾತಃಕಾಲ ಶ್ರೀಚಾಮುಂಡೇಶ್ವರಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀಕೃಷ್ಣ ಉಪಾಧ್ಯಾಯರವರಿಂದ ವೇದ ಮಂತ್ರ ಘೋಷ ನೆರವೇರಿತು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನವಾಗಿದೆ. ಮೀನ ಸಂಕ್ರಮಣ ದಿನ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸೂರ್ಯನಕಿರಣಗಳು ಮುಂಜಾನೆಯಲ್ಲಿ ಸ್ಪರ್ಶಿಸುವ ರಾಜ್ಯದ ಏಕೈಕ ದೇವಸ್ಥಾನ ಇದಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತಿದೆ. ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಶ್ರೀಕೃಷ್ಣ ಉಪಾಧ್ಯಾಯ, ನಗರ ಸಭಾ ಮಾಜಿ ಸದಸ್ಯೆ ವನತಾ, ಪುರಸಭಾ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಕ್ಷೇತ್ರದ ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀಪ್ರಸಾದ್ ಬೆಟ್ಟ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.