ಸಾರಾಂಶ
ಖುಷ್ಕಿ ಪ್ರದೇಶದಲ್ಲಿ ಮಳೆ ಕೊರತೆ, ನದಿ ಪಾತ್ರದಲ್ಲಿ ನೆರೆ ಭೀತಿ । ಶೇ.35 ರಷ್ಟು ಮಾತ್ರ ಬಿತ್ತನೆ ಪೂರ್ಣ, ಕೃಷಿಗೆ ಹಿನ್ನಡೆ
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರು
ಎಲ್ಲಿಯಾದರೂ ಒಂದು ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಯ ಪರಿಸ್ಥಿತಿಯನ್ನು ಕಾಣಬಹುದು. ಆದರೆ, ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಎರಡು ವಿಭಿನ್ನ ಸನ್ನಿವೇಶಗಳನ್ನು ಒಂದೇ ಸಲ ಗೋಚರಿಸುವ ಲಕ್ಷಣಗಳು ದಟ್ಟಗೊಂಡಿವೆ.ಹೌದು ಜಿಲ್ಲೆಯ ಖುಷ್ಕಿ (ಮಳೆಯಾಶ್ರಿತ) ಪ್ರದೇಶದಲ್ಲಿ ಮಳೆ ಕೊರತೆ ಎದುರಾಗಿದ್ದರೆ, ನದಿ ಪಾತ್ರದಲ್ಲಿ ನೆರೆ ಭೀತಿ ಆವರಿಸಲು ಆರಂಭಗೊಂಡಿದೆ. ಇದೇನಪ್ಪಾ ಹೀಗೆ ಎಂದರೆ ಹೌದು ನಾವು ರಾಯಚೂರು ಮಂದಿ ನಮ್ಮ ಪರಿಸ್ಥಿತಿಯೂ ಹೀಗೆ ಇದೆ ನೋಡಿ ಎಂದು ಇಲ್ಲಿನ ರೈತರು ತಾವು ಅನುಭವಿಸುತ್ತಿರುವ ವಿಚಿತ್ರ ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.
ಮಳೆ ಕೊರತೆ : ಪ್ರಸಕ್ತ ಸಾಲಿನ ಮುಂಗಾರು ಆರಂಭಕ್ಕೂ ಪೂರ್ವದಲ್ಲಿ ಅಬ್ಬರಿಸಿದ ಮಳೆರಾಯ ನಂತರ ಮುನಿಸಿಕೊಂಡಿದ್ದು, ಇದರಿಂದಾಗಿ ಜೂನ್ ಮಾಯೆಯಲ್ಲಿ ಶೇ.19 ರಷ್ಟು ಮಳೆ ಕೊರತೆ ಎದುರಾಗಿದೆ. ಮುಂಗಾರು ಪೂರ್ವ ರಾಯಚೂರು ಜಿಲ್ಲೆಯಲ್ಲಿ ವಾಡಿಕೆ ರೀತ್ಯ ಕೇವಲ 65 ಮಿಮೀ ಮಳೆಯಾಗಬೇಕಿತ್ತು ಆದರೆ 191 ಮಿಮೀ ನಷ್ಟು ಮಳೆಯಾಗಿದ್ದರಿಂದ ಶೇ.195 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ವರುಣ ದೇವನು ಕರುಣಿಸಿದ್ದನು. ಇದರಿಂದಾಗಿ ಖುಷಿಯಲ್ಲಿದ್ದ ರೈತರು ಮುಂಗಾರು ಕೃಷಿ ಚಟುವಟಿಕೆಗಳನ್ನು ಭರಪೂರದಲ್ಲಿಯೇ ಶುರುವಚ್ಚಿಕೊಂಡಿದ್ದರು. ಆದರೆ ಪ್ರಸಕ್ತ ಜೂನ್ ನಲ್ಲಿ ವಾಡಿಕೆ ರೀತ್ಯ 86 ಮಿಮೀ ಮಳೆಯಲ್ಲಿ 69 ಮಾತ್ರ ಮಳೆ ಸುರಿದಿದ್ದರಿಂದ ಶೇ.19 ರಷ್ಟು ಮಳೆ ಕೊರತೆ ಸೃಷ್ಠಿಯಾಗಿದೆ. ಕಳೆದ ಎರಡ್ಮೂರು ವಾರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗದ ಕಾರಣಕ್ಕೆ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವು ಕುಂಟಿತಗೊಳ್ಳುವಂತೆ ಮಾಡಿದೆ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದಾಗಿ ಜಮೀನು ಹದಮಾಡಿಕೊಂಡಿದ್ದ ರೈತರು ದೊಡ್ಡ ಮಳೆಯಾದರೆ ಬಿತ್ತನೆ ಮಾಡಬೇಕು ಎಂದು ಕಾದು ಕುಳಿತಿದ್ದಾರೆ. ಮುಂಗಾರು ಆರಂಭಗೊಂಡು ತಿಂಗಳು ಕಳೆಯುತ್ತಿದ್ದರು, ಇಲ್ಲಿ ತನಕ ಕೇವಲ ಶೇ.35 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು, ಮುಂದಿನ ಎರಡು ವಾರಗಳಲ್ಲಿ ಜೋರು ಮಳೆಯಾಗದಿದ್ದರೆ ಬರದೆಡೆಗೆ ಸನ್ನಿವೇಶ ಜಾರಿಗೊಳ್ಳುವ ಆತಂಕವು ಮನೆ ಮಾಡಿದೆ.ನೆರೆ ಕಟ್ಟೆಚ್ಚರ : ಒಂದು ಕಡೆ ಮಳೆ ಕೊರತೆ ಎದುರಾಗಿದ್ದರೆ ಮತ್ತೊಂದು ಕಡೆ ನೆರೆ ಕಟ್ಟೆಚ್ಚರ ಜಾರಿಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಮೇಲ್ಭಾಗ ಹಾಗೂ ಪಶ್ವಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿದ್ದು, ಇದರಿಂದಾಗಿ ನದಿ ನೀರು ಹರಿಸಲಾಗುತ್ತಿದೆ. ಬಸವಸಾಗರ ಜಲಾಶಯದಿಂದ ಕಳೆದ ವಾರ ಒಂದು ಲಕ್ಷಕ್ಕು ಅಧಿಕ ಕ್ಯುಸೆಕ್ ನೀರನ್ನು ಅದೇ ರೀತಿ ತುಂಗಭದ್ರಾ ಜಲಾಶಯದಿಂದ ನದಿಗೆ 25 ಸಾವಿರ ಕ್ಯುಸೆಕ್ ನೀರನ್ನು ಹರಿಸಿದ್ದರಿಂದ ಉಭಯ ನದಿಗಳ ದಡದಲ್ಲಿರುವ ಹಳ್ಳಿಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯೆಗಳಿರುವುದರಿಂದ ನದಿಪಾತ್ರದ ಹಳ್ಳಿಗಳಲ್ಲಿ ಎಚ್ಚರಿಕೆ ವಹಿಸುವಂತೆ ಆಡಳಿತ ವರ್ಗವು ಸೂಚನೆ ನೀಡಿದೆ.
ಹೀಗೆ ರಾಯಚೂರು ಜಿಲ್ಲೆಯು ಮುಂಗಾರು ಆರಂಭದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯನ್ನು ಕಂಡು ನಂತರ ಮಳೆ ಕೊರತೆಯನ್ನು ಎದುರಿಸುವುದರ ಜೊತೆಗೆ ಎಲ್ಲೋ ಮಳೆಯಾಗುತ್ತಿರುವುದರಿಂದ ನದಿಪಾತ್ರದ ಪ್ರದೇಶಗಳಲ್ಲಿ ನೆರೆಯ ಭೀತಿಯನ್ನು ಸಹ ಅನುಭವಿಸುವಂತಾಗಿದೆ.--------------
ಮುಂಗಾರು ಪೂರ್ವದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿತ್ತು, ಇದರಿಂದಾಗಿ ರೈತರು ಜಮೀನು ಹದಗೊಳಿಸಿ ಕೆಲ ಬೆಳೆಗಳನ್ನು ಬೆಳೆದಿದ್ದು, ಅವುಗಳಲ್ಲಿ ಕೆಲ ಬೆಳೆಗಳಿಗೆ ಮಳೆ ನೀರಿನ ಅಗತ್ಯವಿದೆ. ಇಲ್ಲಿ ತನಕ ಶೇ.35 ರಷ್ಟು ಬಿತ್ತನೆಯಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಬಿತ್ತನೆಯು ಸಹ ಹೆಚ್ಚಾಗಲಿದೆ.-ಪ್ರಕಾಶ ಚೌವ್ಹಾಣ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಯಚೂರು