ಬೆಂಕಿ ಹತ್ತಿದರೂ ಬಸ್‌ ನಿಲ್ಲಿಸದ ಚಾಲಕ: ಪ್ರಯಾಣಿಕರ ಆಕ್ರೋಶ

| N/A | Published : Oct 18 2025, 11:09 AM IST

Fire In Bus

ಸಾರಾಂಶ

ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರು ನಿಲ್ಲಿಸುವಂತೆ ಕೇಳಿದರೂ ಉದ್ಧಟತನದಿಂದ ಚಾಲಕ ಬಸ್‌ ನಿಲ್ಲಿಸದೇ ಚಲಾಯಿಸಿದ್ದರಿಂದ ಬಸ್‌ ಸಮೇತ 36 ಪ್ರಯಾಣಿಕರ ದಾಖಲೆಗಳು, ಬ್ಯಾಗ್ ಸುಟ್ಟು ಭಸ್ಮವಾಗಿರುವ ಘಟನೆ   ನಡೆದಿದೆ.

  ರಾಯಚೂರು :  ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರು ನಿಲ್ಲಿಸುವಂತೆ ಕೇಳಿದರೂ ಉದ್ಧಟತನದಿಂದ ಚಾಲಕ ಬಸ್‌ ನಿಲ್ಲಿಸದೇ ಚಲಾಯಿಸಿದ್ದರಿಂದ ಬಸ್‌ ಸಮೇತ 36 ಪ್ರಯಾಣಿಕರ ದಾಖಲೆಗಳು, ಬ್ಯಾಗ್ ಸುಟ್ಟು ಭಸ್ಮವಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗರದಿನ್ನೆ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ರಾಯಚೂರಿಗೆ ಬರುತ್ತಿದ್ದ 36 ಜನ ಪ್ರಯಾಣಿಕರು ಇದ್ದ ಗ್ರೀನ್ ಲೈನ್ ಟ್ರಾವೆಲ್ಸ್‌ ಬಸ್‌ನಲ್ಲಿ ಗುರುವಾರ ತಡರಾತ್ರಿ 2 ಗಂಟೆಗೆ ಹಿಂಬದಿಯ ಟಯರ್‌ ಸ್ಪೋಟಗೊಂಡ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಚಾಲಕನಿಗೆ ತಿಳಿಸಿದರೂ ವಾಹನವನ್ನು ಹಾಗೆ ಚಲಾಯಿಸಿದ್ದು, ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ಜೋರಾಗಿ ಚೀರಾಡಿದಾಗ ಬಸ್‌ ನಿಲ್ಲಿಸಿದ್ದಾನೆ. ತಕ್ಷಣ ಪ್ರಯಾಣಿಕರೆಲ್ಲರೂ ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಪ್ರಯಾಣಿಕರ ದಾಖಲೆಗಳು, ಹಬ್ಬಕ್ಕೆ ಖರೀದಿಸಿದ್ದ ಬಟ್ಟೆ-ಬರೆ, ವಸ್ತುಗಳು ಸುಟ್ಟು ಹೋಗಿದ್ದು, ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆಂಧ್ರದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಗ್ರೀನ್ ಲೈನ್ ಟ್ರಾವೆಲ್ಸ್ ವಿರುದ್ಧ ಜನರು ದೂರು:

ಶುಕ್ರವಾರ ಬೆಳಗ್ಗೆ ರಾಯಚೂರಿಗೆ ಆಗಮಿಸಿದ ಪ್ರಯಾಣಿಕರು ಚಾಲಕ ಹಾಗೂ ಗ್ರೀನ್ ಲೈನ್ ಟ್ರಾವೆಲ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಚಾಲಕನಿಗೆ ತಿಳಿಸಿದರೂ ಸಹ ತಕ್ಷಣ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದು ಖಂಡನೀಯ ಎಂದು ಸ್ಥಳೀಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read more Articles on