ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಗೌರಿಬಿದನೂರಿನ ಬಾರ್‌ಗಳ ಮೇಲೆ ದಾಳಿ

| Published : Nov 23 2024, 12:30 AM IST

ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಗೌರಿಬಿದನೂರಿನ ಬಾರ್‌ಗಳ ಮೇಲೆ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿಬಿದನೂರು ನಗರದ ಸುತ್ತಮುತ್ತಲಿರುವ ಎಲ್ಲಾ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಸೇರಿ 10 ಕಡೆ ದಾಳಿ ನಡೆಸಿ 50 ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ಒಟ್ಟು 22,600 ಸಾವಿರ ರು. ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಸುತ್ತಮುತ್ತಲಿರುವ ಎಲ್ಲಾ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಸೇರಿ 10 ಕಡೆ ದಾಳಿ ನಡೆಸಿ 50 ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ಒಟ್ಟು 22,600 ಸಾವಿರ ರು. ದಂಡ ವಿಧಿಸಿದರು.ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ಸಾರ್ವಜನಿಕರು, ಹೋಟೆಲ್, ಮದ್ಯ ಸೇರಿ ಬೀದಿಬದಿ ವ್ಯಾಪಾರಸ್ಥರಲ್ಲಿ ಪಾಲಿಕೆ ಅಧಿಕಾರಿಗಳು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ನಡುವೆಯೂ ಹಲವು ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆಯನ್ನೇ ನೆಚ್ಚಿಕೊಂಡಿದ್ದಾರೆ. ಇರುವಷ್ಟು ದಿನ ಅಥವಾ ಸ್ಟಾಕ್ ಖಾಲಿಯಾಗುವವರೆಗೆ ಮಾರಾಟ ನಡೆಸಬೇಕು. ಮುಂದಿನದು ನೋಡಿದರಾಯಿತು ಎನ್ನುವುದು ವ್ಯಾಪಾರಿಗಳ ಮನಸ್ಥಿತಿಯಾಗಿದೆ.ನಿಷೇಧಿತ ಪ್ಲಾಸ್ಟಿಕ್ ಬಳಕೆ, ಮಾರಾಟ ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಕೆಲವು ವ್ಯಾಪಾರಸ್ಥರು ತಮ್ಮ ಲಾಭಕ್ಕಾಗಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಅನ್ನು ಮಾರುತ್ತಿದ್ದಾರೆ. ಇದಕ್ಕೆ ಹಲವು ಸಾರ್ವಜನಿಕರು ಅಂಟಿಕೊಂಡಿದ್ದಾರೆ.

ನಗರಸಭೆ ಪೌರಾಯುಕ್ತರು ಕೆಲವು ರೆಸ್ಟೋರೆಂಟ್‌ಗಳ ಅಡುಗೆ ಕೋಣೆಗೆ ಭೇಟಿನೀಡಿ ಅಡುಗೆಗೆ ಉಪಯೋಗಿಸುವ ಎಲ್ಲಾ ವಿಧವಾದ ಪದಾರ್ಥಗಳನ್ನು ಖುದ್ದಾಗಿ ಪರಿಶೀಲಿಸಿ, ಅಡುಗೆ ತಯಾರಸುವವರಿಗೆ ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಿದರು.ವಾಗ್ವಾದ:ನಗರದ ಬಾರ್ ಒಂದರಲ್ಲಿ ನಿಷೇಧಿತ ಪ್ಲಾಸಿಕ್ ಕವರ್ ಮತ್ತು ದೊಡ್ಡಮಟ್ಟದಲ್ಲಿ ಪ್ಲಾಸಿಕ್ ಲೋಟಗಳನ್ನು ನಗರಸಭೆ ಅಧಿಕಾರಿಗಳು ವಶಪಡಿಸಿಕೊಂಡು ದಂಡ ಕಟ್ಟುವಂತೆ ಮನವಿ ಮಾಡಿದರು. ಬಳಿಕ ಅಧಿಕಾರಿಗಳು ಮತ್ತು ಬಾರ್ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ದಾಳಿ ನಡೆಸುವುದಕ್ಕೂ ಮುಂಚೆ ನಗರಸಭೆಯಿಂದ ನೋಟಿಸ್ ನೀಡಿದ್ದರೂ ನೀವು ನಿಷೇಧಿತ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಿದ್ದೀರಿ, ಸರ್ಕಾರಿ ಆದೇಶವನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಬಾರ್‌ ಮಾಲೀಕರಿಗೆ ತಿಳಿಸಿದರು.ಪ್ರತಿ ಬಾರಿಯು ನಗರಸಭೆ ವತಿಯಿಂದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಮತ್ತಿತರ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರು ಸಹ ನಮ್ಮ ಜೊತೆಯಲ್ಲಿ ಕೈಜೋಡಿಸಿ ಸಹಕರಿಸಬೇಕು. ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು. ಇನ್ನು ಮುಂದೆ ಅಂಗಡಿ, ಬಾರ್ ಮಾಲಿಕರಾಗಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸದಿದ್ದಲ್ಲಿ ಕಾನೂನು ರಿತ್ಯ ಕಠಿಣ ಕ್ರಮಕೈಗೊಳ್ಳುವುದಾಗಿ ನಗರಸಭೆಯ ಪೌರಾಯುಕ್ತೆ ಡಿ.ಎಂ. ಗೀತಾ ಎಚ್ಚರಿಕೆ ನೀಡಿದರು.ಪ್ರತಿ ಬಾರಿಯೂ ನಗರದ ಬಾರ್, ಹೋಟೆಲ್, ಅಂಗಡಿ ಮುಗ್ಗಟುಗಳ ಮೇಲೆ ದಾಳಿ ನಡೆಸಿ ಅವರಿಗೆ ಕಿರಿಕಿರಿ ನೀಡುವ ಬದಲಿಗೆ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಸ್ಥಳದಲ್ಲೇ ಫ್ಯಾಕ್ಟರಿಯನ್ನು ಮುಚ್ಚಿಸಬೇಕು. ಕನಿಷ್ಠ ಪಕ್ಷ ಪರಿಸರವನ್ನು ಲೆಕ್ಕಿಸದೆ ಹಾಳು ಮಾಡುತ್ತಿರುವ ಮಾಲೀಕರಲ್ಲಿ ಒಬ್ಬನಿಗಾದರೂ ಕಠಿಣ ಶಿಕ್ಷೆಯಾದಲ್ಲಿ ಎಲ್ಲರಿಗೂ ಒಳಿತು ಎಂದು ಪರಿಸರಪ್ರೇಮಿಯೊಬ್ಬರು ತಿಳಿಸಿದರು.ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ರಂಜಿತಾ, ನಗರಸಭೆಯ ಪೌರಾಯುಕ್ತರು ಡಿ.ಎಂ.ಗೀತಾ, ಆರೋಗ್ಯಾಧಿಕಾರಿ ಶ್ವೇತಾ, ಸಿಬ್ಬಂದಿ ಹಾಜರಿದ್ದರು.