ಭಟ್ಕಳದಲ್ಲಿ ದಿನವಿಡೀ ಮಳೆ: ತಗ್ಗು ಪ್ರದೇಶ ಜಲಾವೃತ

| Published : Jun 09 2024, 01:42 AM IST

ಭಟ್ಕಳದಲ್ಲಿ ದಿನವಿಡೀ ಮಳೆ: ತಗ್ಗು ಪ್ರದೇಶ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಕ ಮಳೆಗೆ ಎಲ್ಲೆಲ್ಲೂ ನೀರು ಎನ್ನುವಂತಾಗಿತ್ತು.

ಭಟ್ಕಳ: ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವದಿಂದ ಸಂಜೆಯವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಂದೆರಡು ಮಳೆ ಬಂದು ಹೋಗಿದ್ದರೂ ಶನಿವಾರ ಮಾತ್ರ ದಿನವಿಡೀ ಮಳೆ ಸುರಿದಿದ್ದರಿಂದ ಎಲ್ಲೆಡೆ ತಂಪಿನ ವಾತಾವರಣ ಉಂಟಾಗಿತ್ತು. ವ್ಯಾಪಕ ಮಳೆಗೆ ಬಾವಿ, ಕೆರೆ, ಹೊಳೆಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗಿದೆ.

ಶನಿವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ವರೆಗೆ ಸತತ ಮಳೆ ಸುರಿದಿದ್ದರಿಂದ ಪಟ್ಟಣದ ಮುಖ್ಯವೃತ್ತ, ಮುಖ್ಯರಸ್ತೆ ಮುಂತಾದ ಕಡೆ ರಸ್ತೆ ಮೇಲೆ ನೀರು ನಿಂತು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವ್ಯಾಪಕ ಮಳೆಗೆ ಎಲ್ಲೆಲ್ಲೂ ನೀರು ಎನ್ನುವಂತಾಗಿತ್ತು. ಪಟ್ಟಣದಲ್ಲಿ ಸಮರ್ಪಕವಾಗಿ ಗಟಾರದ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆಯೇ ಹರಿಯುವಂತಾಯಿತು.

ಜಾಲಿ ಪಟ್ಟಣದ ಪಂಚಾಯಿತಿ ವ್ಯಾಪ್ತಿಯ ಬದ್ರಿಯಾ ಕಾಲನಿಯಲ್ಲಿ ಮಳೆ ನೀರು ಕೆಲವು ಮನೆಗಳಿಗೆ ನುಗ್ಗಿದ್ದು, ಜನರು ತೊಂದರೆ ಪಡುವಂತಾಯಿತು. ಈ ಭಾಗದಲ್ಲಿ ಸಮರ್ಪಕ ಗಟಾರ ನಿರ್ಮಿಸದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯಲು ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲೂಕಿನ ಗ್ರಾಮಾಂತರ ಭಾಗದಲ್ಲೂ ಗಟಾರದ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ.

ಮಳೆ ಬಂದು ಹೋದ ಮೇಲೆ ರಸ್ತೆ ಮೇಲೆ ಕಸ, ಕಡ್ಡಿ, ಕಲ್ಲು, ಮಣ್ಣಿನ ರಾಶಿ ರಸ್ತೆಯ ಮೇಲೆ ಬಂದು ಬಿದ್ದಿದ್ದು, ಕೆಲವು ಕಡೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಪಟ್ಟಣದ ಜಂಬೂರ್ಮಠದ ಈಶ್ವರ ನಾಯ್ಕರ ಮನೆಯ ಕಾಂಪೌಂಡ್ ಮಳೆಗೆ ಕುಸಿದು ಬಿದ್ದಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದೆ.

ಎಲ್ಲ ಕಡೆ ಬೀಜ ಬಿತ್ತನೆ ಕಾರ್ಯ ಆಗಿದ್ದು, ಮಳೆಗಾಗಿ ಕಾಯುತ್ತಿದ್ದರು. ಸುರಿಯುತ್ತಿರುವ ಉತ್ತಮ ಮಳೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಸಕಾಲದಲ್ಲಿ ಮಳೆ ಬಂದಿದ್ದರಿಂದ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭವಾಗಿರುವುದರಿಂದ ತಾಲೂಕು ಆಡಳಿತ ಮಳೆಗಾಲದ ಪೂರ್ವಭಾವಿ ಸಭೆ ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಗ್ರಾಮಾಂತರ ಭಾಗದಲ್ಲಿ ರಸ್ತೆಯಂಚಿನ ಮತ್ತು ವಿದ್ಯುತ್ ತಂತಿ ಸನಿಹದ ಮರದ ಟೊಂಗೆ ಕಟಾವು ಕೆಲಸ ಇನ್ನೂ ಕೈಗೆತ್ತಿಕೊಂಡಿಲ್ಲ. ಅದರಂತೆ ಇನ್ನೂ ತನಕ ಗಟಾರದ ಹೂಳು ತೆಗೆಯುವ ಕೆಲಸವವನ್ನೂ ಆರಂಭಿಸಿಲ್ಲ. ಇದೆಲ್ಲಾ ಕೆಲಸ ಮಳೆಗಾಲದ ಪೂರ್ವದಲ್ಲಿ ಆಗಬೇಕಿತ್ತು. ಇನ್ನಾದರೂ ತಾಲೂಕು ಆಡಳಿತ ಸಂಬಂಧಿಸಿದ ಇಲಾಖೆಗೆ ತ್ವರಿತವಾಗಿ ಕೆಲಸ ಮಾಡಲು ಸೂಚಿಸಬೇಕು ಎನ್ನುವ ಆಗ್ರಹ ಜನರದ್ದಾಗಿದೆ.